Home ಬೆಂಗಳೂರು ಕೇರಳದ ಮಲಯಾಳಂ ಕಡ್ಡಾಯ ಮಸೂದೆ ಕನ್ನಡಿಗರ ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರ: ಸಿಎಂ ಸಿದ್ದರಾಮಯ್ಯ ಆಕ್ರೋಶ

ಕೇರಳದ ಮಲಯಾಳಂ ಕಡ್ಡಾಯ ಮಸೂದೆ ಕನ್ನಡಿಗರ ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರ: ಸಿಎಂ ಸಿದ್ದರಾಮಯ್ಯ ಆಕ್ರೋಶ

0

ಬೆಂಗಳೂರು: ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಭಾಷೆಯನ್ನು ಪ್ರಥಮ ಭಾಷೆಯನ್ನಾಗಿ ಕಡ್ಡಾಯಗೊಳಿಸುವ ಕೇರಳ ಸರ್ಕಾರದ ‘ಮಲೆಯಾಳಿ ಭಾಷಾ ಮಸೂದೆ-2025’ ಪ್ರಸ್ತಾವನೆಯನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ. ಈ ಮಸೂದೆಯು ಸಂವಿಧಾನ ಖಾತರಿಪಡಿಸಿರುವ ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರ ಎಂದು ಅವರು ಬಣ್ಣಿಸಿದ್ದಾರೆ.

ಈ ಕಾನೂನು ಜಾರಿಗೆ ಬಂದರೆ ಕಾಸರಗೋಡು ಸೇರಿದಂತೆ ಕೇರಳದ ಗಡಿ ಜಿಲ್ಲೆಗಳಲ್ಲಿ ವಾಸಿಸುವ ಕನ್ನಡಿಗರು ತಮ್ಮ ಮಾತೃಭಾಷೆ ಕಲಿಯುವ ಅವಕಾಶದಿಂದ ವಂಚಿತರಾಗಲಿದ್ದಾರೆ. ಭಾಷಾ ಅಲ್ಪಸಂಖ್ಯಾತರ ಮೂಲಭೂತ ಹಕ್ಕುಗಳನ್ನು ದಮನ ಮಾಡುವ ಇಂತಹ ನಡೆಯನ್ನು ಕೇರಳದ ಕಮ್ಯುನಿಸ್ಟ್ ಸರ್ಕಾರದಿಂದ ನಾವು ನಿರೀಕ್ಷಿಸಿರಲಿಲ್ಲ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಕಾಸರಗೋಡು ಆಡಳಿತಾತ್ಮಕವಾಗಿ ಕೇರಳಕ್ಕೆ ಸೇರಿದ್ದರೂ ಭಾವನಾತ್ಮಕವಾಗಿ ಕರ್ನಾಟಕದ ಭಾಗವಾಗಿದೆ. ಅಲ್ಲಿನ ಜನತೆ ಕನ್ನಡ ಸಂಸ್ಕೃತಿ ಮತ್ತು ಸಾಹಿತ್ಯದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಅವರ ಹಿತರಕ್ಷಣೆ ಮಾಡುವುದು ನಮ್ಮ ಸರ್ಕಾರದ ಕರ್ತವ್ಯ,” ಎಂದು ಮುಖ್ಯಮಂತ್ರಿಗಳು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಕ್ಕಳು ಮಾತೃಭಾಷೆಯಲ್ಲಿ ಕಲಿಯುವುದು ವೈಜ್ಞಾನಿಕವಾಗಿ ಅತ್ಯಂತ ಸೂಕ್ತ. ಅನ್ಯ ಭಾಷೆಯನ್ನು ಹೇರುವುದರಿಂದ ಮಕ್ಕಳ ಕಲಿಕಾ ಸಾಮರ್ಥ್ಯ ಕುಂದುತ್ತದೆ ಮಾತ್ರವಲ್ಲದೆ, ಒಂದು ಸ್ವತಂತ್ರ ಭಾಷೆಯ ಅವಸಾನಕ್ಕೆ ಇದು ಕಾರಣವಾಗುತ್ತದೆ. ಕಾಸರಗೋಡಿನ ಶೇ. 70ರಷ್ಟು ವಿದ್ಯಾರ್ಥಿಗಳು ಕನ್ನಡ ಮಾಧ್ಯಮವನ್ನೇ ಬಯಸುತ್ತಿದ್ದಾರೆ ಎಂಬ ವಾಸ್ತವವನ್ನು ಅವರು ನೆನಪಿಸಿದ್ದಾರೆ.

ಸಂವಿಧಾನದ 29, 30 ಮತ್ತು 350ನೇ ಪರಿಚ್ಛೇದಗಳು ಅಲ್ಪಸಂಖ್ಯಾತರಿಗೆ ಅವರ ಭಾಷೆ ಮತ್ತು ಸಂಸ್ಕೃತಿಯನ್ನು ರಕ್ಷಿಸಿಕೊಳ್ಳುವ ಹಾಗೂ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವ ಹಕ್ಕನ್ನು ನೀಡಿವೆ. ಈ ಸಾಂವಿಧಾನಿಕ ಆಶಯಗಳನ್ನು ಯಾವುದೇ ಸರ್ಕಾರ ಹತ್ತಿಕ್ಕಬಾರದು ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.

ಕೇರಳ ಸರ್ಕಾರ ಮಲಯಾಳಂ ಭಾಷೆಯನ್ನು ಬೆಳೆಸುವ ಸ್ವಾತಂತ್ರ್ಯ ಹೊಂದಿದೆ, ಆದರೆ ಅದನ್ನು ಇತರರ ಮೇಲೆ ಹೇರುವುದು ಸರಿಯಲ್ಲ. ಕನ್ನಡಿಗರ ಭಾಷಾ ಸ್ವಾತಂತ್ರ್ಯ ರಕ್ಷಣೆಗೆ ತಾವು ಬದ್ಧವಾಗಿದ್ದು, ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು ಈ ಮಸೂದೆಯನ್ನು ತಕ್ಷಣ ಹಿಂದೆಗೆದುಕೊಳ್ಳಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

You cannot copy content of this page

Exit mobile version