Home ಬ್ರೇಕಿಂಗ್ ಸುದ್ದಿ ತಹಶೀಲ್ದಾರ್ ಜೀಪ್ ಮತು ಬೈಕ್ ನಡುವೆ ಅಪಘಾತ – ಓರ್ವ ಸ್ಥಳದಲ್ಲೇ ಕೊನೆಯುಸಿರು

ತಹಶೀಲ್ದಾರ್ ಜೀಪ್ ಮತು ಬೈಕ್ ನಡುವೆ ಅಪಘಾತ – ಓರ್ವ ಸ್ಥಳದಲ್ಲೇ ಕೊನೆಯುಸಿರು

ಹಾಸನ : ತಾಲೂಕಿನ ಆಲೂರು ಬಳಿ ಸಕಲೇಶಪುರ ತಹಶೀಲ್ದಾರ್ ಅವರ ಸರ್ಕಾರಿ ಜೀಪ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ವಿವರ:
ಹಾಸನ ನಗರದ ಪೆನ್‌ಷನ್ ಮೊಹಲ್ಲಾ ನಿವಾಸಿಯಾದ ಜಮ್ಶಿದ್ (58) ಮೃತಪಟ್ಟ ದುರ್ದೈವಿ. ಇವರು ತಮಗೆ ಸಂಬಂಧಿಸಿದ ಕೆಲಸ ನಿಮಿತ್ತ ಮತ್ತೊಬ್ಬರಾದ ನದೀಮ್ ಅವರೊಂದಿಗೆ ಬೈಕ್‌ನಲ್ಲಿ ಸಕಲೇಶಪುರಕ್ಕೆ ತೆರಳುತ್ತಿದ್ದರು. ಈ ವೇಳೆ ಆಲೂರು ತಾಲೂಕಿನ ಈಶ್ವರಹಳ್ಳಿ ಕೂಡಿಗೆ ಸರ್ಕಲ್ ಬಳಿ ಸಕಲೇಶಪುರ ತಹಶೀಲ್ದಾರ್ ಸುಪ್ರಿತಾ ಅವರ ಜೀಪ್ ಹಾಗೂ ಇವರ ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ವೇಗವಾಗಿ ಬಂದ ತಹಶೀಲ್ದಾರ್ ಜೀಪ್ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಅಪಘಾತದ ರಭಸಕ್ಕೆ ಜಮ್ಶಿದ್ ಅವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಮಾನವೀಯತೆ ಮೆರೆದ ತಹಶೀಲ್ದಾರ್ ಸುಪ್ರಿತಾ:
ಅಪಘಾತದ ಸಮಯದಲ್ಲಿ ಜೀಪ್‌ನಲ್ಲಿ ಸ್ವತಃ ಸಕಲೇಶಪುರ ತಹಶೀಲ್ದಾರ್ ಸುಪ್ರಿತಾ ಅವರೂ ಇದ್ದರು ಎನ್ನಲಾಗಿದೆ. ಘಟನೆ ನಡೆದ ತಕ್ಷಣ ಜೀಪ್‌ನಿಂದ ಕೆಳಗಿಳಿದ ತಹಶೀಲ್ದಾರ್, ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮತ್ತೊಬ್ಬ ಸವಾರ ನದೀಮ್ ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಸ್ಥಳದಲ್ಲಿದ್ದವರಿಗೆ ಸೂಚಿಸಿ ಮಾನವೀಯತೆ ಮೆರೆದಿದ್ದಾರೆ. ಸದ್ಯ ಗಾಯಾಳು ನದೀಮ್‌ಗೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸ್ಥಳಕ್ಕೆ ಪೊಲೀಸರ ಭೇಟಿ:
ದುರ್ಘಟನೆ ನಡೆದ ಸ್ಥಳಕ್ಕೆ ಆಲೂರು ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಈ ಸಂಬಂಧ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You cannot copy content of this page

Exit mobile version