ತಿರುಪತಿ: ಆಂಧ್ರಪ್ರದೇಶದ ತಿರುಪತಿಯ ಶ್ರೀಕಾಳಹಸ್ತಿ ಶುಕಬ್ರಹ್ಮ ಆಶ್ರಮದ ಬಳಿಯ ವಾಟರ್ ಹೌಸ್ ಕಾಲೋನಿಯಲ್ಲಿ ತನ್ನ ಮೂರು ತಿಂಗಳ ಮಗನನ್ನು ನೆಲಕ್ಕೆ ಎಸೆದು ಕೊಂದ ಆರೋಪದ ಮೇಲೆ ತಂದೆಯನ್ನು ಬಂಧಿಸಲಾಗಿದೆ ಎಂದು ಆಂಧ್ರಪ್ರದೇಶ ಪೊಲೀಸರು ಶನಿವಾರ ತಿಳಿಸಿದ್ದಾರೆ.
ಮಗುವಿನ ಅಳುವಿನಿಂದ ಕೋಪಗೊಂಡ ಆತ ಈ ಕೃತ್ಯಕ್ಕೆ ಇಳಿದಿದ್ದಾನೆ ಎಂದು ಸ್ಥಳೀಯರ ಹೇಳಿಕೆ ಉಲ್ಲೇಖಿಸಿ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಸರ್ಕಲ್ ಇನ್ಸ್ಪೆಕ್ಟರ್‌ರೊಬ್ಬರು ಮಾಧ್ಯಮದವರೊಂದಿಗೆ ಮಾತನಾಡಿದ್ದು, ಸ್ಥಳೀರು ನೀಡಿರುವ ಮಾಹಿತಿ ಪ್ರಕಾರ, ನಾಲ್ಕು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾದ ಕಾರಣ ಮಗು ಅಳುತಿತ್ತು, ಈ ಕಾರಣ ಪತ್ನಿ ಸ್ವಾತಿಗೆ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಪತಿ ಅನಿಲ್ ಹೇಳಿದ್ದಾರೆ. ಆದರೆ ಇಬ್ಬರು ಯಾವುದೋ ಕಾರಣಕ್ಕೆ ಜಗಳವಾಡಲು ಪ್ರಾರಂಭಿಸಿದರು. ಆಗ ಮಗುವು ಜೋರಾಗಿ ಅಳಲು ಪ್ರಾರಂಭಿಸಿತು. ಈ ಕಾರಣ ಕೋಪಗೊಂಡ ಅನಿಲ್, ಮಗು ನಿಖಿಲ್‌ನನ್ನು ನೆಲದ ಮೇಲೆ ಎಸೆದಿದ್ದು, ಮಗುವಿನ ತಲೆಗೆ ಬಲವಾದ ಪೆಟ್ಟು ಬಿದ್ದದ್ದರಿಂದ ಮೃತಪಟ್ಟಿದೆ ಎಂದು ತಿಳಿಸಿದ್ದಾರೆ.
ಘಟನೆ ಬಳಿಕ ಸ್ಥಳೀಯರು ತಕ್ಷಣ ಪೊಲೀಸರನ್ನು ಸಂಪರ್ಕಿಸಿದ್ದು, ಅವರು ಮಗುವನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಆದರೆ ಬಲವಾಗಿ ತೆಲೆಗೆ ಪೆಟ್ಟು ಬಿದ್ದಿದ್ದರಿಂದ ಮಗು ಸಾವನ್ನಪ್ಪಿದೆ ಎಂದು ವೈದ್ಯರು ಹೇಳಿದ್ದಾರೆ.
ಸರ್ಕಲ್ ಇನ್ಸ್ಪೆಕ್ಟರ್ ಮಗುವಿನ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತೆಗೆದುಕೊಂಡು ಹೋಗಲಾಗಿದ್ದು, ಏತನ್ಮಧ್ಯೆ, ಅನಿಲ್ ಅವರನ್ನು ವಶಕ್ಕೆ ಪಡೆದುಕೊಳ್ಳಲಾಯಿತು ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಲಾಗಿರುವುದಾಗಿ ತಿಳಿಸಿದ ಪೊಲೀಸರು, ಪ್ರಕರಣದ ಕುರಿತು ಮುಂದಿನ ಕಾನೂನು ಕ್ರಮವನ್ನು ಅನುಸರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.