ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಲಭ್ಯತೆ ಕುರಿತು ಜನರಲ್ಲಿ ಆತಂಕ ಉಂಟುಮಾಡಲು ಯತ್ನಿಸುತ್ತಿರುವವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ಇಂತಹ ವದಂತಿಗಳನ್ನು ಹರಡುವ ಮೂಲಕ ಕೆಲವರು ದೇಶದ ಹಿತಕ್ಕೆ ಧಕ್ಕೆಯುಂಟು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಗುರುವಾರ ನಡೆದ ಎಸ್ಎಕ್ಸ್‌ಟಿ ಕಾನ್ಕ್ಲೇವ್ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಬಗ್ಗೆ ಜನರಲ್ಲಿ ಭೀತಿ ಸೃಷ್ಟಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಇಂತಹ ಪ್ರಯತ್ನಗಳಲ್ಲಿ ತೊಡಗಿರುವವರು ತಮ್ಮ ಮುಖವಾಡಗಳನ್ನು ತಾವೇ ಕಳಚಿಕೊಳ್ಳುತ್ತಿರುವುದಷ್ಟೇ ಅಲ್ಲ, ದೇಶಕ್ಕೆ ಹಾನಿ ಮಾಡುತ್ತಿದ್ದಾರೆ,” ಎಂದು ಹೇಳಿದರು.
ಪಶ್ಚಿಮ ಏಷ್ಯಾದಲ್ಲಿನ ನಡೆಯುತ್ತಿರುವ ಸಂಘರ್ಷದ ಪರಿಣಾಮದಿಂದ ಅನೇಕ ದೇಶಗಳು ಸಂಕಷ್ಟ ಅನುಭವಿಸುತ್ತಿರುವುದನ್ನು ಉಲ್ಲೇಖಿಸಿದ ಅವರು, ಭಾರತವು ಇಂತಹ ಸವಾಲುಗಳನ್ನು ಎದುರಿಸಲು ಸಜ್ಜಾಗಿದೆ ಎಂದು ತಿಳಿಸಿದರು. “ದೇಶದ ಇಂಧನ ಸುರಕ್ಷತೆ ಕಾಪಾಡಲು ಸರ್ಕಾರ ಯಾವುದೇ ಅವಕಾಶವನ್ನೂ ಕೈಚೆಲ್ಲುವುದಿಲ್ಲ,” ಎಂದು ಭರವಸೆ ನೀಡಿದರು.
ಇದೇ ವೇಳೆ, ಪ್ರಸ್ತುತ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಕೆಲವು ಮಂದಿ ಅಗತ್ಯ ವಸ್ತುಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿಯೂ ಸರ್ಕಾರದ ಗಮನಕ್ಕೆ ಬಂದಿದೆ ಎಂದು ಮೋದಿ ಹೇಳಿದರು. ಇಂತಹ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
