Home ದೇಶ ಉತ್ತರ ಪ್ರದೇಶದಲ್ಲಿ ಉದ್ಘಾಟನೆಯಾದ 4,700 ಕೋಟಿಯ ಎಕ್ಸ್‌ಪ್ರೆಸ್‌ವೇ ಕುಸಿತ – ಜನರ ಆಕ್ರೋಶ

ಉತ್ತರ ಪ್ರದೇಶದಲ್ಲಿ ಉದ್ಘಾಟನೆಯಾದ 4,700 ಕೋಟಿಯ ಎಕ್ಸ್‌ಪ್ರೆಸ್‌ವೇ ಕುಸಿತ – ಜನರ ಆಕ್ರೋಶ

ಲಖನೌ : ಉತ್ತರ ಪ್ರದೇಶದಲ್ಲಿ(Uttar Pradesh) ಸುಮಾರು 4,700 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಬಹುನಿರೀಕ್ಷಿತ ಲಖನೌ-ಕಾನ್ಪುರ(Lucknow-Kanpur) ಗ್ರೀನ್‌ಫೀಲ್ಡ್ ರಾಷ್ಟ್ರೀಯ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯಾದ ಕೇವಲ 12 ದಿನಗಳಲ್ಲಿ ಕುಸಿದು ಬಿದ್ದಿದೆ. ಉನ್ನಾವೋದ ಕೊರಾರಿ ಸಮೀಪ ರಸ್ತೆಯ ಒಂದು ಭಾಗವೇ ಬಿರುಕು ಬಿಟ್ಟಿದ್ದು, ಯೋಜನೆ ನಿರ್ಮಾಣದ ಗುಣಮಟ್ಟದ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಅನುಮಾನ ಹಾಗೂ ಆಕ್ರೋಶ ವ್ಯಕ್ತವಾಗಿದೆ.

ಈ 63 ಕಿಲೋಮೀಟರ್ ಉದ್ದದ ಆರು ಪಥದ ಎಕ್ಸ್‌ಪ್ರೆಸ್‌ವೇ ಅನ್ನು ಜುಲೈ 13 ರಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜಂಟಿಯಾಗಿ ಅದ್ಧೂರಿಯಾಗಿ ಉದ್ಘಾಟಿಸಿದ್ದರು.

5 ರಿಂದ 7 ಮೀಟರ್ ಬಿರುಕು!
ಕಾನ್ಪುರದಿಂದ ಲಖನೌ ಕಡೆಗೆ ಸಾಗುವ ಹೆದ್ದಾರಿಯ ಉನ್ನಾವೋದ ಕೊರಾರಿ ಎಂಬಲ್ಲಿ ಸುಮಾರು 5 ರಿಂದ 7 ಮೀಟರ್ ಉದ್ದಕ್ಕೆ ರಸ್ತೆ ಬಿರುಕು ಬಿಟ್ಟಿದೆ. ಪ್ರದೇಶದಲ್ಲಿ ಸುರಿದ ನಿರಂತರ ಮಳೆಯಿಂದಾಗಿ ರಸ್ತೆಯ ಕೆಳಭಾಗದ ಮಣ್ಣು ಜಾರಿದ್ದು, ಪರಿಣಾಮವಾಗಿ ಈ ಅನಾಹುತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ವೈರಲ್, ಪ್ರತಿಪಕ್ಷಗಳ ವೀರಣೆ
ರಸ್ತೆ ಕುಸಿದಿರುವ ವೀಡಿಯೊವನ್ನು ಸಮಾಜವಾದಿ ಪಕ್ಷದ ನಾಯಕ ಮಧುಸೂದನ್ ಯಾದವ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಮತ್ತು ರಾಜನಾಥ್ ಸಿಂಗ್ ಅವರ ಉಪಸ್ಥಿತಿಯಲ್ಲಿ ಅದ್ಧೂರಿಯಾಗಿ ಉದ್ಘಾಟನೆಯಾಗಿದ್ದ ಈ ಯೋಜನೆ ನಿರ್ಮಾಣ ಗುಣಮಟ್ಟದ ಬಗ್ಗೆ ಸರ್ಕಾರ ದೊಡ್ಡ ದೊಡ್ಡ ಹೇಳಿಕೆಗಳನ್ನು ನೀಡಿತ್ತು. ಆದರೆ ಕೆಲವೇ ದಿನಗಳಲ್ಲಿ ರಸ್ತೆ ಕುಸಿದಿರುವುದು ಸರ್ಕಾರದ ಕಳಪೆ ಕಾಮಗಾರಿಗೆ ಹಿಡಿದ ಕನ್ನಡಿಯಾಗಿದೆ” ಎಂದು ಅವರು ಆರೋಪಿಸಿದ್ದಾರೆ.

NHAI ನಿಂದ ತುರ್ತು ದುರಸ್ತಿ
ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು ಸಂಬಂಧಪಟ್ಟ ನಿರ್ಮಾಣ ಸಂಸ್ಥೆಯ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ. ತಡಮಾಡದೆ ಬಿರುಕು ಬಿಟ್ಟಿದ್ದ ಭಾಗಕ್ಕೆ ತುರ್ತು ದುರಸ್ತಿ ಕಾರ್ಯ ನಡೆಸಿ, ರಸ್ತೆ ಸಂಚಾರವನ್ನು ಪುನರಾರಂಭಿಸಲಾಗಿದೆ. ಆದಾಗ್ಯೂ, ಇಷ್ಟೊಂದು ಕೋಟಿ ವೆಚ್ಚದ ಯೋಜನೆ ಕೆಲವೇ ದಿನಗಳಲ್ಲಿ ಹಾಳಾಗಿರುವುದು ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.

You cannot copy content of this page

Exit mobile version