Home ಬೆಂಗಳೂರು ಸಂಭಾವ್ಯ ಸಚಿವರು ಯಾರು, ಜು.29 ಕ್ಕೆ ಪ್ರಮಾಣ ವಚನ ?

ಸಂಭಾವ್ಯ ಸಚಿವರು ಯಾರು, ಜು.29 ಕ್ಕೆ ಪ್ರಮಾಣ ವಚನ ?

ಬೆಂಗಳೂರು : ರಾಜ್ಯ ಕಾಂಗ್ರೆಸ್ ನಲ್ಲಿ (Congress)ಭಾರಿ ಕುತೂಹಲ ಮೂಡಿಸಿರುವ ಸಚಿವ ಸಂಪುಟ ವಿಸ್ತರಣೆಯ (Cabinet Expansion) ಪ್ರಕ್ರಿಯೆ ಅಂತಿಮ ಘಟ್ಟ ತಲುಪಿದೆ. ‘ಕಾಕ್ರೋಚ್’ ಹೋರಾಟ ಸೇರಿದಂತೆ ಹಲವು ಬೆಳವಣಿಗೆಗಳಿಂದ ಮುಂದೂಡಿಕೆಯಾಗಿದ್ದ ಸಂಪುಟ ವಿಸ್ತರಣೆಗೆ ಈಗ ಮುಹೂರ್ತ ಹತ್ತಿರವಾಗಿದ್ದು, ಅಂತಿಮ ಪಟ್ಟಿ ಸಿದ್ಧಪಡಿಸಲು ರಾಜ್ಯ ಕಾಂಗ್ರೆಸ್ ನಾಯಕರು ದೆಹಲಿಗೆ (Delhi) ದೌಡಾಯಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಿಡಬ್ಲ್ಯುಸಿ ಸದಸ್ಯ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದು, ಹೈಕಮಾಂಡ್ ನಾಯಕರೊಂದಿಗೆ ಸೋಮವಾರ ಮತ್ತು ಮಂಗಳವಾರ ಮಹತ್ವದ ಸಭೆಗಳನ್ನು ನಡೆಸಲಿದ್ದಾರೆ. ಹೈಕಮಾಂಡ್ ಜೊತೆಗಿನ ಚರ್ಚೆ ಬಳಿಕ ಸಿಎಂ ಡಿ.ಕೆ. ಶಿವಕುಮಾರ್ ಅವರು ಅಂತಿಮಗೊಂಡ ಸಚಿವರ ಲಿಸ್ಟ್ ಹಿಡಿದುಕೊಂಡೇ ಬೆಂಗಳೂರಿಗೆ ವಾಪಸಾಗಲಿದ್ದಾರೆ ಎನ್ನಲಾಗಿದೆ.

ಕರ್ನಾಟಕ ಭವನದಲ್ಲಿ ಸಂಸದರ ಸಭೆ

ಸಂಪುಟ ವಿಸ್ತರಣೆಯ ಜೊತೆಗೆ, ರಾಜ್ಯದ ಅಭಿವೃದ್ಧಿ ಹಾಗೂ ಕೇಂದ್ರದಲ್ಲಿ ಬಾಕಿ ಇರುವ ಯೋಜನೆಗಳ ಕುರಿತು ಚರ್ಚಿಸಲು ಸೋಮವಾರ ಸಂಜೆ 6.30ಕ್ಕೆ ದೆಹಲಿಯ ಕರ್ನಾಟಕ ಭವನದಲ್ಲಿ ಮುಖ್ಯಮಂತ್ರಿಗಳು ರಾಜ್ಯದ ಎಲ್ಲಾ ಲೋಕಸಭಾ ಮತ್ತು ರಾಜ್ಯಸಭಾ ಸಂಸದರ ಮಹತ್ವದ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಪ್ರಧಾನಿ ಬಳಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯುವ ಕುರಿತಾಗಿಯೂ ಚರ್ಚೆ ನಡೆಯಲಿದೆ.

ದೆಹಲಿ ಅಖಾಡದಲ್ಲಿ ಸಂಭಾವ್ಯರ ಪಟ್ಟಿ ತಲಾಶ್

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಅವರ ಸಮ್ಮುಖದಲ್ಲಿ ಈ ಹೈವೋಲ್ಟೇಜ್ ಸಭೆ ನಡೆಯಲಿದೆ.

ಈಗಾಗಲೇ ರಾಜ್ಯ ನಾಯಕರು ಮತ್ತು ಹೈಕಮಾಂಡ್ ಸಿದ್ಧಪಡಿಸಿರುವ ಪ್ರತ್ಯೇಕ ಸಂಭಾವ್ಯರ ಪಟ್ಟಿಗಳನ್ನು ಇಟ್ಟುಕೊಂಡು, ಜಿಲ್ಲಾವಾರು ಹಾಗೂ ಸಮುದಾಯವಾರು ಪ್ರಾತಿನಿಧ್ಯದ ಆಧಾರದಲ್ಲಿ ಅಂತಿಮ ಹೆಸರನ್ನು ಆಯ್ಕೆ ಮಾಡಲಾಗುತ್ತದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜುಲೈ 29ರ ಬುಧವಾರ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯುವ ಸಾಧ್ಯತೆಯಿದೆ.

ಅಷ್ಟಕ್ಕೂ ಮಂತ್ರಿಗಿರಿ ರೇಸ್‌ನಲ್ಲಿ ಯಾರಿದ್ದಾರೆ?

ಹೊಸ ಸಂಪುಟದಲ್ಲಿ ಸ್ಥಾನ ಪಡೆಯಲು ಹಲವು ಹಿರಿಯ ಹಾಗೂ ಯುವ ನಾಯಕರ ನಡುವೆ ಭಾರಿ ಪೈಪೋಟಿ ನಡೆದಿದೆ. ಲಕ್ಷ್ಮಣ ಸವದಿ, ಸಿ.ಪಿ. ಯೋಗೇಶ್ವರ್ ಆಪ್ತ ವಲಯ, ಪುಟ್ಟರಂಗಶೆಟ್ಟಿ, ಸಲೀಂ ಅಹ್ಮದ್, ಎಂ. ಕೃಷ್ಣಪ್ಪ, ಚೆಲುವರಾಯಸ್ವಾಮಿ, ಎಸ್.ಎಸ್. ಮಲ್ಲಿಕಾರ್ಜುನ್, ರಘುಮೂರ್ತಿ, ರುದ್ರಪ್ಪ ಲಮಾಣಿ, ಮಧು ಬಂಗಾರಪ್ಪ ಹಾಗೂ ಅಜಯ್ ಸಿಂಗ್ ಅವರ ಹೆಸರುಗಳು ಮುಂಚೂಣಿಯಲ್ಲಿ ಕೇಳಿಬರುತ್ತಿವೆ.

ಇನ್ನು ಅಪಾಜಿ ನಾಡಗೌಡ ಮತ್ತು ಯಶವಂತರಾಯಗೌಡ ಪಾಟೀಲ್, ಬಸವರಾಜ ರಾಯರೆಡ್ಡಿ ಮತ್ತು ಶಿವರಾಜ ತಂಗಡಗಿ, ಶ್ರೀನಿವಾಸ ಮಾನೆ ಮತ್ತು ಸಂತೋಷ್ ಲಾಡ್ ನಡುವೆ ತೀವ್ರ ಸ್ಪರ್ಧೆಯಿದೆ. ಅಲ್ಪಸಂಖ್ಯಾತ ಕೋಟಾದಲ್ಲಿ ಜಮೀರ್ ಅಹ್ಮದ್, ತನ್ವೀರ್ ಸೇಟ್ ಹಾಗೂ ರಿಜ್ವಾನ್ ಅರ್ಷದ್ ರೇಸ್‌ನಲ್ಲಿದ್ದರೆ, ತರೀಕೆರೆ ಶ್ರೀನಿವಾಸ್ ಮತ್ತು ಆರತಿ ಕೃಷ್ಣ ಅವರ ಹೆಸರುಗಳೂ ಚರ್ಚೆಯಲ್ಲಿವೆ.

ದಲಿತ ಮತ್ತು ಹಿಂದುಳಿದ ವರ್ಗಗಳ ಕೋಟಾದಲ್ಲಿ ಆನೇಕಲ್ ಶಿವಣ್ಣ, ನರೇಂದ್ರ ಸ್ವಾಮಿ, ಎಚ್.ಸಿ. ಮಹದೇವಪ್ಪ, ಅನ್ನಪೂರ್ಣ ತುಕಾರಾಂ, ಬಿ. ನಾಗೇಂದ್ರ ಹಾಗೂ ಗುಬ್ಬಿ ವಾಸು, ಶಿವಲಿಂಗೇಗೌಡ, ಶರತ್ ಬಚ್ಚೇಗೌಡ ಅವರ ಹೆಸರುಗಳು ಸಚಿವ ಸ್ಥಾನದ ರೇಸ್‌ನಲ್ಲಿ ಪ್ರಮುಖವಾಗಿ ಕೇಳಿಬರುತ್ತಿವೆ.

You cannot copy content of this page

Exit mobile version