ತುಮಕೂರು : ಸಚಿವ ಪ್ರಿಯಾಂಕ್ ಖರ್ಗೆಗೆ (Priyank Kharge) ಅವರಿಗೆ ಬೆದರಿಕೆ (Threat) ಹಾಕಿದ್ದ ವ್ಯಕ್ತಿಯನ್ನು ಮಹಾರಾಷ್ಟ್ರದಲ್ಲಿ ಅರೆಸ್ಟ್ ಮಾಡಲಾಗಿದ್ದು, ಇಲ್ಲಿಗೆ ತರಲಾಗಿದೆ. ಆರೋಪಿ ವಿರುದ್ದ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತುಮಕೂರಿನಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ (G Parameshwara) ಹೇಳಿಕೆ ನೀಡಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಹಾಕಿದ ವಿಚಾರ ತುಂಬಾ ಗಂಭೀರವಾದುದು. ಈ ಹಿನ್ನೆಲೆ ಅವರ ಭದ್ರತೆಯನ್ನು ಹೆಚ್ಚಿಸುತ್ತೇವೆ. ಆರೋಪಿ ಹಿಂದೆ ಯಾರಾದರೂ ಇದ್ದಾರ ಇಲ್ಲವಾ ಎಂದು ಅಧಿಕಾರಿಗಳು ತನಿಖೆ ಮಾಡಲಿದ್ದಾರೆ ಎಂದು ತಿಳಿಸಿದರು.
ಸರ್ಕಾರಿ ಜಾಗದಲ್ಲಿ ಸಂಘ ಸಂಸ್ಥೆಗಳು ಕಾರ್ಯಕ್ರಮ ನಡೆಸಲು ಅನುಮತಿ ಕಡ್ಡಾಯ. ಯಾವುದೇ ಸಂಘ ಸಂಸ್ಥೆಗಳು ಖಾಸಗಿಯಾಗಿ ಸರ್ಕಾರಿ ಜಾಗದಲ್ಲಿ ಕಾರ್ಯಕ್ರಮ ಮಾಡಬೇಕಾದರೆ ಅನುಮತಿ ಪಡೆಯಬೇಕು. ಈ ಆದೇಶ 2013 ರಲ್ಲಿ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಮಾಡಲಾಗಿದೆ. ನಾವು ಅದನ್ನು ಇಂಪ್ಲಿಮೆಂಟ್ ಮಾಡಿರಲಿಲ್ಲ. ಇತ್ತೀಚೆಗೆ ಕೆಲವು ಸಂಘಟನೆಗಳು ಸರ್ಕಾರಿ ಸ್ಥಳ ದುರುಪಯೋಗ ಮಾಡಿಕೊಳ್ಳುತ್ತ ಇರುವುದು ಕಂಡು ಬಂದಿದೆ. ಹಾಗಾಗಿ ನಿನ್ನೆ ಕ್ಯಾಬಿನೇಟ್ ನಲ್ಲಿ ತೀರ್ಮಾನ ಮಾಡಿ ಶಾಲಾ ಕಾಲೇಜು, ಧಾರ್ಮಿಕ ಸ್ಥಳಗಳನ್ನು ಖಾಸಗಿಯವರಿಗೆ ಕೊಡಬಾರದು ಎಂದು ತೀರ್ಮಾನ ಮಾಡಲಾಗಿದೆ ಎಂದರು.
ಸರ್ಕಾರಿ ಜಾಗದಲ್ಲಿ ಹೋಗಿ ಗುಂಪು ಕಟ್ಟಿಕೊಂಡು ಕುಳಿತರೆ ಯಾರೂ ಬೇಡ ಅನ್ನಲ್ಲ. ಕಾರ್ಯಕ್ರಮಗಳನ್ನು ಮಾಡಬಾರದು ಅಷ್ಟೇ. ಕೇವಲ ಆರ್‌ಎಸ್ಎಸ್ (RSS) ಮಾತ್ರ ನೋಂದಣಿ ಮಾಡಬೇಕು ಅಂತಲ್ಲ. ಎಲ್ಲಾ ಖಾಸಗಿ ಸಂಸ್ಥೆಗಳು ನೋಂದಣಿ ಆಗಬೇಕು. ಆರ್‌ಎಸ್ಎಸ್ ಒಂದು ಖಾಸಗಿ ಸಂಸ್ಥೆ. ಈ ಹಿಂದೆ ಪರಮೇಶ್ವರ್ ಒಡೆತನದ ಸಿದ್ದಾರ್ಥ ಕಾಲೇಜು ಆವರಣದಲ್ಲಿ ಆರ್‌ಎಸ್ಎಸ್ ಕಾರ್ಯಕ್ರಮ ನಡೆದಿತ್ತು. ಬಹಳ ಹಿಂದೆ ಅಂದರೆ 20 ವರ್ಷಗಳ ಹಿಂದೆ ನಮ್ಮ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಆರ್‌ಎಸ್ಎಸ್ ಕ್ಯಾಂಪ್ ನಡೆದಿತ್ತು. ಎಸ್ಎಸ್ಐಟಿ ಹಾಗೂ ಹೆಗ್ಗೆರೆ ಕಾಲೇಜಿನಲ್ಲಿ ಆರ್‌ಎಸ್ಎಸ್ ಕ್ಯಾಂಪ್ ನಡೆದಿತ್ತು. ಆಗ ನಾವು ಅನುಮತಿ ಕೊಟ್ಟಿದ್ವಿ. ನಮ್ಮ ಪ್ರಾಂಶುಪಾಲರು ಅನುಮತಿ ಕೊಟ್ಟಿದ್ದರು ಎಂದರು.
ನಾಳೆ ತುಮಕೂರಿನಲ್ಲಿ ಆರ್‌ಎಸ್ಎಸ್ ಪಥ ಸಂಚಲನ ವಿಚಾರದ ಬಗ್ಗೆ ಮಾತನಾಡಿದ ಅವರು, ಪಥ ಸಂಚಲನ ನಡೆಸೋದಾದರೆ ಪರ್ಮಿಷನ್ ತಗೋಬೇಕು. ಪೊಲೀಸರಿಂದ ಪರ್ಮಿಷನ್ ತಗೋಬೇಕು. ಕಾಂಗ್ರೆಸ್ ಸರ್ಕಾರ ಹಣ ಮಾಡಲು ಆಸ್ತಿ ಪರಿವರ್ತನೆ ಮಾಡ್ತಿದ್ದಾರೆ ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿ, ಕುಮಾರಸ್ವಾಮಿ ಅವರು ನಿಖರವಾಗಿ ಹೇಳಲಿ. ಅವರು ಮುಖ್ಯಮಂತ್ರಿ ಆಗಿದ್ದವರು. ಅವರು ಹೇಳಿದ ಮೇಲೆ ನಾವು ಸ್ವಲ್ಪ ಗಂಭೀರವಾಗಿ ಪರಿಗಣಿಸ್ತಿವಿ. ಸರಿಯಾಗಿ ಇಂತಹ ಕಡೆ ಹಣ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಬೇಕು ಎಂದರು.