Home ಬೆಂಗಳೂರು ಸರ್ಕಾರಿ ಸ್ಥಳಗಳಲ್ಲಿ ಸಂಘ-ಸಂಸ್ಥೆಗಳ ಚಟುವಟಿಕೆ ನಿರ್ಬಂಧಿಸಿದರೆ ಬಿಜೆಪಿ ಏಕೆ ಹೆದರುತ್ತಿದೆ?: ಪ್ರಿಯಾಂಕ್ ಖರ್ಗೆ ಪ್ರಶ್ನೆ

ಸರ್ಕಾರಿ ಸ್ಥಳಗಳಲ್ಲಿ ಸಂಘ-ಸಂಸ್ಥೆಗಳ ಚಟುವಟಿಕೆ ನಿರ್ಬಂಧಿಸಿದರೆ ಬಿಜೆಪಿ ಏಕೆ ಹೆದರುತ್ತಿದೆ?: ಪ್ರಿಯಾಂಕ್ ಖರ್ಗೆ ಪ್ರಶ್ನೆ

0

ಬೆಂಗಳೂರು, ಅಕ್ಟೋಬರ್ 17: ಸರ್ಕಾರಿ ಆಸ್ತಿಗಳಲ್ಲಿ ಖಾಸಗಿ ಸಂಘಸಂಸ್ಥೆಗಳ ಚಟುವಟಿಕೆಗಳಿಗೆ ನಿರ್ಬಂಧ ಹೇರಿರುವ ಸಂಪುಟದ ನಿರ್ಧಾರದಲ್ಲಿ ಯಾವುದೇ ಒಂದು ನಿರ್ದಿಷ್ಟ ಸಂಘಟನೆಯ ಹೆಸರನ್ನು ಉಲ್ಲೇಖಿಸಿಲ್ಲ. ಇದು ಎಲ್ಲರಿಗೂ ಅನ್ವಯವಾಗುವ ಸಾರ್ವತ್ರಿಕ ಕಾನೂನು. ಸರ್ಕಾರಿ ಸ್ವತ್ತುಗಳಲ್ಲಿ ಏಕರೂಪತೆ ತರುವ ಪ್ರಯತ್ನವಿದು. ಹೀಗಿದ್ದೂ ಬಿಜೆಪಿಯವರು ನೋವು ಪಟ್ಟುಕೊಳ್ಳುತ್ತಿರುವುದೇಕೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ವಿಷಯಾಂತರ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಯಾಗಿ, “ವಿಷಯಾಂತರ ಪ್ರಯತ್ನ ಎಂದೇ ಭಾವಿಸಲಿ. ಆದರೆ ನಾವು ಮಾಡುತ್ತಿರುವ ಕೆಲಸದಲ್ಲಿ ಅಕ್ರಮವಿದೆಯೇ ಅಥವಾ ನ್ಯಾಯಬದ್ಧವಾಗಿದೆಯೇ ಎಂಬುದಕ್ಕೆ ಮೊದಲು ಉತ್ತರ ನೀಡಬೇಕು. ಇವರಿಗೆ ಇಷ್ಟೊಂದು ಭಯವೇಕೆ?” ಎಂದು ಮರುಪ್ರಶ್ನಿಸಿದರು.

ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸಿದ್ದೇವೆ ಎಂದು ನಾವು ಎಲ್ಲೂ ಹೇಳಿಲ್ಲ. ಸರ್ಕಾರ ಏಕರೂಪದ ನೀತಿ ತರಲು ಪ್ರಯತ್ನಿಸುತ್ತಿದೆ. ಆದರೂ ಬಿಜೆಪಿಗರು ಏಕೆ ಇಷ್ಟೊಂದು ಪ್ರತಿಭಟಿಸುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದರು.

ಸರ್ಕಾರದ ಆಡಳಿತ ಸರಿ ಇಲ್ಲ ಎಂದು ಅನಿಸಿದರೆ, ಬೀದಿಗಿಳಿದು ಹೋರಾಟ ಮಾಡಲು ಅವರನ್ನು ಯಾರೂ ತಡೆದಿಲ್ಲ. ಬುದ್ಧ, ಬಸವ, ಅಂಬೇಡ್ಕರ್ ತತ್ವಗಳನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತರುವ ಗುರಿಯನ್ನು ನಾವು ಹೊಂದಿದ್ದೇವೆ. ಪ್ರಬುದ್ಧ ಸಮಾಜ ನಿರ್ಮಾಣದ ಪ್ರಯತ್ನದಲ್ಲಿ ತೊಡಗಿದ್ದೇವೆ. ಪ್ರಬುದ್ಧತೆ ಇದ್ದಲ್ಲಿ ಸಮೃದ್ಧ ಸಮಾಜವೂ ಸಾಧ್ಯ ಎಂದರು.

ಖಾಸಗಿ ಸಂಘಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವುದರಿಂದ ಬಿಜೆಪಿಯವರಿಗೆ ಸಮಸ್ಯೆಯಾಗುತ್ತಿದ್ದರೆ, ಅದಕ್ಕೆ ನಾವು ಏನೂ ಮಾಡಲು ಸಾಧ್ಯವಿಲ್ಲ. ಅವರು ‘ಕೇಶವಕೃಪಾ’ಗೆ (ಆರ್‌ಎಸ್‌ಎಸ್ ಕಚೇರಿ) ಹೋಗಿ ಗೋಳಾಡಿಕೊಳ್ಳಲಿ. ನಾನು ಯಾರ ವಿರುದ್ಧವೂ ವೈಯಕ್ತಿಕ ಟೀಕೆ ಮಾಡುತ್ತಿಲ್ಲ. ಆದರೆ, ನನ್ನ ವಿರುದ್ಧ ವೈಯಕ್ತಿಕ ಟೀಕೆ ಮಾಡಲಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು.

ಬಡವರ ಮಕ್ಕಳ ದುರ್ಬಳಕೆ ಕುರಿತು ಸವಾಲು:

“ಆರ್‌ಎಸ್‌ಎಸ್ ಶಾಖೆಗಳಲ್ಲಿ ಬಿಜೆಪಿಯ ಪ್ರಭಾವಿ ನಾಯಕರ ಮಕ್ಕಳು ಇಲ್ಲ. ಈ ಬಗ್ಗೆ ನನಗೆ ತಕರಾರಿದೆ. ಬಡವರ ಮಕ್ಕಳನ್ನು ‘ಗೋ ರಕ್ಷಣೆ’, ‘ಧರ್ಮ ರಕ್ಷಣೆ’ ನೆಪದಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಈ ನಾಯಕರು ತಮ್ಮ ಮಕ್ಕಳಿಗೆ ತ್ರಿಶೂಲ ದೀಕ್ಷೆ ಕೊಡಿಸಿ, ಗೋ ರಕ್ಷಣೆಗಾಗಿ ರಸ್ತೆಗೆ ಬಿಡಲಿ, ಗೋ ಮೂತ್ರ ಕುಡಿಯಲು ಹೇಳಲಿ, ಗಣವೇಷ ಧರಿಸಿ ಧರ್ಮ ರಕ್ಷಣೆ ಮಾಡಲಿ. ಆಗ ನಾನು ನನ್ನ ಮಾತುಗಳನ್ನು ನಿಲ್ಲಿಸುತ್ತೇನೆ,” ಎಂದು ಅವರು ಸವಾಲು ಹಾಕಿದರು.

ಬೆದರಿಕೆಗಳಿಗೆ ಜಗ್ಗಲ್ಲ:

“ಕಳೆದ ನಾಲ್ಕು ದಿನಗಳಿಂದ ಪುಢಾರಿಗಳ ಮೂಲಕ ನನಗೆ ಬೆದರಿಕೆ ಹಾಕಿಸಲಾಗುತ್ತಿದೆ. ಆದರೆ ನಾನು ನನ್ನ ಮಾತನ್ನು ನಿಲ್ಲಿಸುವುದಿಲ್ಲ. ಎಷ್ಟೇ ಬೆದರಿಕೆಗಳು ಬಂದರೂ ಜಗ್ಗುವುದಿಲ್ಲ,” ಎಂದು ದೃಢವಾಗಿ ಹೇಳಿದರು. ಸರ್ಕಾರಿ ಶಾಲೆ, ಆಟದ ಮೈದಾನ, ಉದ್ಯಾನವನಗಳು ಹೇಗಿರಬೇಕು ಎಂಬ ಬಗ್ಗೆ ಹಿಂದೆ ಬಿಜೆಪಿ ಸರ್ಕಾರವೇ ಮಾಡಿದ ಕಾನೂನನ್ನು ನಾವು ಈಗ ಜಾರಿಗೆ ತರುತ್ತಿದ್ದೇವೆ ಎಂದರು.

ಕಾನೂನು ಪಾಲಿಸದವರ ವಿರುದ್ಧ ಕ್ರಮ ಕೈಗೊಳ್ಳುವುದು ಶತಸಿದ್ಧ. ಅವರು ಅನುಮತಿ ಪಡೆದು ಪಥ ಸಂಚಲನ ಮಾಡಲಿ. 100 ವರ್ಷದ ಆಚರಣೆಯ ವೇಳೆ 100 ಕಡೆ ಪಥ ಸಂಚಲನ ನಡೆಸಿದ್ದಾರೆ. ಅದಕ್ಕೆ ಯಾರ ಅನುಮತಿ ಪಡೆದಿದ್ದರು? ಲಾಠಿ ಹಿಡಿದು ಹೋರಾಡಲು ಯಾವ ಧರ್ಮದಲ್ಲಿ ಅವಕಾಶವಿದೆ?” ಎಂದು ಪ್ರಶ್ನಿಸಿದರು.

ಬಿಜೆಪಿ ನಾಯಕರು ಪದೇಪದೇ ಕಲಬುರಗಿಗೆ ಬರುವುದನ್ನು ನಾನು ಸ್ವಾಗತಿಸುತ್ತೇನೆ. ನಾನು ಈಗಾಗಲೇ ಎಚ್ಚರವಾಗಿದ್ದೇನೆ. ಪ್ರಬುದ್ಧತೆ ಇರುವುದಕ್ಕಾಗಿಯೇ ನಾನು ಪತ್ರ ಬರೆದಿದ್ದೇನೆ. ಬಿಜೆಪಿಯವರು ಬಂದು ಎಚ್ಚರಿಕೆ ಕೊಡುವ ಅಗತ್ಯ ಇಲ್ಲ. ಅವರಿಗೆ ಕಾನೂನಿನ ತಿಳುವಳಿಕೆ ನೀಡಲಾಗುತ್ತಿದ್ದು, ಅದನ್ನು ಸಹಿಸಿಕೊಳ್ಳಲು ಅವರಿಂದ ಆಗುತ್ತಿಲ್ಲ ಎಂದರು.

ಸುಧಾ ಮೂರ್ತಿ, ನಾರಾಯಣ ಮೂರ್ತಿ ಸಮೀಕ್ಷೆ ವಿರೋಧಕ್ಕೆ ಪ್ರತಿಕ್ರಿಯೆ:

ಸರ್ಕಾರ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಇನ್ಫೋಸಿಸ್‌ನ ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿ ಅವರು ಮಾಹಿತಿ ನೀಡದಿರುವ ಬಗ್ಗೆ ಪ್ರತಿಕ್ರಿಯಿಸಿದ ಪ್ರಿಯಾಂಕ ಖರ್ಗೆ, ಎಲ್ಲರೂ ಸಹಕರಿಸಿ ಮಾಹಿತಿ ನೀಡಿದರೆ ಒಳ್ಳೆಯದಾಗುತ್ತದೆ. “ನಾನು ಮೇಲ್ಜಾತಿ, ಸೂಪರ್ ಶ್ರೀಮಂತ” ಎಂದು ಹೇಳಿ ಸಮೀಕ್ಷೆಯಲ್ಲಿ ಭಾಗವಹಿಸದಿರುವುದು ಸರಿಯಲ್ಲ.

ಮುಂದೆ ಕೇಂದ್ರ ಸರ್ಕಾರ ಕೂಡ ಜನಗಣತಿ ಹಾಗೂ ಜಾತಿ ಸಮೀಕ್ಷೆ ನಡೆಸುತ್ತದೆ. ಆಗಲೂ ಇವರು ಭಾಗವಹಿಸುವುದಿಲ್ಲ ಎನ್ನುತ್ತಾರೆಯೇ?” ಎಂದು ಖರ್ಗೆ ಪ್ರಶ್ನಿಸಿದರು. ಕೆಲವು “ಅವಿವೇಕಿ ಸಂಸದರು” ನೀಡಿದ ಹೇಳಿಕೆಗಳಿಂದ ಪ್ರಭಾವಿತರಾಗಿ ನಾರಾಯಣ ಮೂರ್ತಿ ಅವರು ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸಿರಬಹುದು ಎಂದು ಅಭಿಪ್ರಾಯಪಟ್ಟರು.

You cannot copy content of this page

Exit mobile version