Home ದೇಶ ಹಿಜಾಬ್ ಧರಿಸಿದ್ದ ಮಹಿಳಾ ನ್ಯಾಯಾಧೀಶರನ್ನು ಕಂಡು ‘ಜೈ ಶ್ರೀರಾಮ್’ ಘೋಷಣೆ ಕೂಗಿದ ಆರೋಪಿ: ಸಿಲಿಗುರಿ ಕೋರ್ಟ್‌ನಲ್ಲಿ...

ಹಿಜಾಬ್ ಧರಿಸಿದ್ದ ಮಹಿಳಾ ನ್ಯಾಯಾಧೀಶರನ್ನು ಕಂಡು ‘ಜೈ ಶ್ರೀರಾಮ್’ ಘೋಷಣೆ ಕೂಗಿದ ಆರೋಪಿ: ಸಿಲಿಗುರಿ ಕೋರ್ಟ್‌ನಲ್ಲಿ ಗದ್ದಲ, ವಕೀಲರಿಂದ ಕ್ಷಮೆಯಾಚನೆ

0

ಸಿಲಿಗುರಿ: ಪಶ್ಚಿಮ ಬಂಗಾಳದ ಸಿಲಿಗುರಿ ಉಪವಿಭಾಗೀಯ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಮಹಿಳಾ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಹಿಜಾಬ್ ಧರಿಸಿರುವುದನ್ನು ಗಮನಿಸಿದ ಆರೋಪಿಯೊಬ್ಬ ‘ಜೈ ಶ್ರೀರಾಮ್’ ಘೋಷಣೆ ಕೂಗಿದ ಘಟನೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ನ್ಯಾಯಾಲಯದ ಕೊಠಡಿ ಸಂಖ್ಯೆ 4 ರಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಹಾಜರಾತಿ ಕರೆಯುವ ಸಂದರ್ಭದಲ್ಲಿ ಆರೋಪಿ ಈ ಕೃತ್ಯವೆಸಗಿದ್ದಾನೆ.

2018 ರ ಅಂತರ್ಧರ್ಮೀಯ ವಿವಾಹವೊಂದಕ್ಕೆ ಸಂಬಂಧಿಸಿದಂತೆ ‘ಲವ್ ಜಿಹಾದ್’ ಆರೋಪ ಹೊರಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದ ಪ್ರಕರಣದಲ್ಲಿ 24 ಮಂದಿ ಆರೋಪಿಗಳು ವಿಚಾರಣೆಗೆ ಹಾಜರಾಗಿದ್ದರು. ನ್ಯಾಯಾಧೀಶರು ಆರೋಪಿಗಳ ಹಾಜರಾತಿ ಪರಿಶೀಲಿಸುತ್ತಿದ್ದ ವೇಳೆ, ಹಿಜಾಬ್ ಧರಿಸಿದ್ದ ನ್ಯಾಯಾಧೀಶರನ್ನು ನೋಡಿ ಓರ್ವ ಆರೋಪಿ ಏಕಾಏಕಿ ಘೋಷಣೆ ಕೂಗಿದ್ದು, ಕೋರ್ಟ್ ಹಾಲ್‌ನಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಆರೋಪಿ ಪರ ವಕೀಲ ತ್ರಿದೀಪ್ ಸಹಾ ತಕ್ಷಣವೇ ನ್ಯಾಯಾಲಯಕ್ಕೆ ಬೇಷರತ್ ಕ್ಷಮೆಯಾಚಿಸಿದರು. ಈ ಘೋಷಣೆ ನ್ಯಾಯಾಧೀಶರನ್ನು ಉದ್ದೇಶಿಸಿ ಕೂಗಿದ್ದಲ್ಲ, ಜನರು ಸಾಮಾನ್ಯವಾಗಿ ‘ಜೈ ಶ್ರೀರಾಮ್’ ಅಥವಾ ‘ರಾಧೆ ರಾಧೆ’ ಎಂದು ನಮಸ್ಕರಿಸುವ ಅಭ್ಯಾಸವಿದ್ದು, ಆರೋಪಿ ಯಾವುದೇ ದುರುದ್ದೇಶವಿಲ್ಲದೆ ಇದನ್ನು ಹೇಳಿದ್ದಾನೆ ಎಂದು ವಕೀಲರು ಸಮರ್ಥಿಸಿಕೊಂಡರು.

ಘಟನೆಯನ್ನು ವಕೀಲರ ಸಂಘಗಳು ಕಟುವಾಗಿ ಖಂಡಿಸಿವೆ. ಸಿಲಿಗುರಿ ಬಾರ್ ಅಸೋಸಿಯೇಷನ್ ಅಧ್ಯಕ್ಷ ಉದಯ ಶಂಕರ್ ಮಲಾಕರ್ ಪ್ರತಿಕ್ರಿಯಿಸಿ, ನ್ಯಾಯಾಲಯದ ಆವರಣದೊಳಗೆ ಇಂತಹ ಅಹಿತಕರ ವರ್ತನೆಗಳು ಸ್ವೀಕಾರಾರ್ಹವಲ್ಲ ಹಾಗೂ ಕೋರ್ಟ್ ಬಯಸಿದರೆ ಸ್ವಯಂಪ್ರೇರಿತ (ಸುಮೊಟೊ) ಪ್ರಕರಣ ದಾಖಲಿಸಿಕೊಳ್ಳಬಹುದು ಎಂದರು.

ಅಖಿಲ ಭಾರತ ವಕೀಲರ ಸಂಘದ ಡಾರ್ಜಿಲಿಂಗ್ ಜಿಲ್ಲಾ ಕಾರ್ಯದರ್ಶಿ ದಿಬಾಕರ್ ರಾಯ್ ಮಾತನಾಡಿ, ನ್ಯಾಯಾಲಯವು ನಿಷ್ಪಕ್ಷಪಾತ ನ್ಯಾಯದಾನದ ಪವಿತ್ರ ಸ್ಥಳವಾಗಿದ್ದು, ಅಲ್ಲಿ ಯಾವುದೇ ಧಾರ್ಮಿಕ ಅಥವಾ ರಾಜಕೀಯ ಘೋಷಣೆಗಳಿಗೆ ಅವಕಾಶವಿರಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದರು.

You cannot copy content of this page

Exit mobile version