Home ದೇಶ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡದಿದ್ದರೆ ದೇಶದೆಲ್ಲೆಡೆಯ ಜಿರಳೆಗಳು ದೆಹಲಿಗೆ ಬರಲಿವೆ: ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ...

ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡದಿದ್ದರೆ ದೇಶದೆಲ್ಲೆಡೆಯ ಜಿರಳೆಗಳು ದೆಹಲಿಗೆ ಬರಲಿವೆ: ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಎಚ್ಚರಿಕೆ

0

ದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ ಅಕ್ಟೋಬರ್ 10 ರಂದು ದೇಶಾದ್ಯಂತ ಇರುವ ‘ಜಿರಳೆಗಳು’ (ಕಾರ್ಯಕರ್ತರು) ದೆಹಲಿಗೆ ಲಗ್ಗೆ ಇಟ್ಟು ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಎಚ್ಚರಿಕೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, “ಜ್ಞಾನೇಶ್ ಕುಮಾರ್ ತಮ್ಮ ಸ್ಥಾನದಿಂದ ಕೆಳಗಿಳಿಯದಿದ್ದರೆ, ಇಡೀ ದೇಶದ ಜಿರಳೆಗಳು ಅಕ್ಟೋಬರ್ 10 ರಂದು ದೆಹಲಿಗೆ ಬಂದು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲಿವೆ. ಒಂದು ವೇಳೆ ದೆಹಲಿ ಪೊಲೀಸರು ನಮ್ಮನ್ನು ತಡೆಯಲು ಯತ್ನಿಸಿದರೆ, ಅವರು ನಮ್ಮನ್ನು ಎಲ್ಲಿ ತಡೆಯುತ್ತಾರೋ ಅದೇ ಜಾಗವೇ ನಮಗೆ ಜಂತರ್ ಮಂತರ್ ಆಗಿ ಬದಲಾಗಲಿದೆ,” ಎಂದು ಗುಡುಗಿದ್ದಾರೆ.

ತಮ್ಮ ಹೋರಾಟ ಸಂಪೂರ್ಣ ಶಾಂತಿಯುತವಾಗಿರುತ್ತದೆ ಎಂದಿರುವ ದೀಪ್ಕೆ, “ನಾವು ಮಹಾತ್ಮ ಗಾಂಧಿಯವರು ತೋರಿದ ಅಹಿಂಸಾ ಮಾರ್ಗದಲ್ಲೇ ನಡೆಯುತ್ತೇವೆ. ನಮ್ಮ ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ಗೌರವಿಸುವುದೋ ಅಥವಾ ಜುಲೈ 20 ರಂತಹ ದೌರ್ಜನ್ಯವನ್ನು ಪುನರಾವರ್ತಿಸುವುದೋ ಎಂಬುದು ಸರ್ಕಾರ ಮತ್ತು ದೆಹಲಿ ಪೊಲೀಸರಿಗೆ ಬಿಟ್ಟ ವಿಚಾರ. ಇದು ನಮ್ಮ ಪ್ರಜಾಪ್ರಭುತ್ವವನ್ನು ಉಳಿಸುವ ಹೋರಾಟವಾಗಿದ್ದು, ನಿಷ್ಪಕ್ಷಪಾತ ಚುನಾವಣೆಯನ್ನು ಬಯಸುವ ಪ್ರತಿಯೊಬ್ಬ ನಾಗರಿಕನೂ ಇದರಲ್ಲಿ ಭಾಗವಹಿಸಬೇಕು,” ಎಂದು ಕರೆ ನೀಡಿದ್ದಾರೆ.

ಇದೇ ವೇಳೆ, ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಮಾತನಾಡಿದ ಅಭಿಜಿತ್ ದೀಪ್ಕೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಗಾಂಧೀಜಿ ಈ ದೇಶದ ಆತ್ಮ, ಡಾ. ಬಿ.ಆರ್. ಅಂಬೇಡ್ಕರ್ ಬೆನ್ನೆಲುಬು ಮತ್ತು ಜವಾಹರಲಾಲ್ ನೆಹರು ಈ ದೇಶದ ಮೆದುಳು. ಗೋಡ್ಸೆಯಂತಹ ಸಾವಿರಾರು ಜನರು ಬಂದು ಹೋಗಬಹುದು, ಆದರೆ ಗಾಂಧಿಯವರ ವಿಚಾರಗಳನ್ನು ಎಂದಿಗೂ ಕೊಲ್ಲಲು ಸಾಧ್ಯವಿಲ್ಲ,” ಎಂದು ಹೇಳುವ ಮೂಲಕ ಸರ್ಕಾರದ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ.

You cannot copy content of this page

Exit mobile version