Home ರಾಜ್ಯ ರೇಣುಕಾಸ್ವಾಮಿ ಪ್ರಕರಣ: ಸಾಕ್ಷಿಯ ಹೇಳಿಕೆ ವಿಡಿಯೋ ವೈರಲ್ ಮಾಡಿದವರ ವಿರುದ್ಧ ಪ್ರಕರಣಕ್ಕೆ ಕೋರ್ಟ್ ಸೂಚನೆ

ರೇಣುಕಾಸ್ವಾಮಿ ಪ್ರಕರಣ: ಸಾಕ್ಷಿಯ ಹೇಳಿಕೆ ವಿಡಿಯೋ ವೈರಲ್ ಮಾಡಿದವರ ವಿರುದ್ಧ ಪ್ರಕರಣಕ್ಕೆ ಕೋರ್ಟ್ ಸೂಚನೆ

0

ಬೆಂಗಳೂರು: ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ನ್ಯಾಯಾಂಗ ವಿಚಾರಣೆ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸಾಕ್ಷಿಯ ಹೇಳಿಕೆ ವಿಡಿಯೋ ಪ್ರಕರಣವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ.

ಪ್ರಕರಣದ ಪ್ರಮುಖ ಮಾಫಿ ಸಾಕ್ಷಿಯಾಗಿರುವ ಪ್ರದೋಷ್ ಅವರ ಹೇಳಿಕೆಯನ್ನು ನ್ಯಾಯಾಲಯದ ಪ್ರಕ್ರಿಯೆಯ ಭಾಗವಾಗಿ ವಿಡಿಯೋ ರೂಪದಲ್ಲಿ ದಾಖಲಿಸಲಾಗಿತ್ತು. ಈ ಸೂಕ್ಷ್ಮ ವಿಚಾರಣೆಯ ದೃಶ್ಯಗಳನ್ನು ಕೆಲವರು ಅನುಮತಿಯಿಲ್ಲದೆ ಸ್ಕ್ರೀನ್‌ ರೆಕಾರ್ಡ್ ಮಾಡಿಕೊಂಡು ಯೂಟ್ಯೂಬ್, ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದು ನ್ಯಾಯಾಲಯದ ಗಮನಕ್ಕೆ ಬಂದಿದೆ.

ವಿಚಾರಣೆಗೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಸಾರ ಮಾಡಿರುವ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಬೆಂಗಳೂರಿನ 59ನೇ ಸಿಸಿಹೆಚ್ ನ್ಯಾಯಾಲಯ, ಇಂತಹ ಕೃತ್ಯಗಳು ನ್ಯಾಯಾಂಗ ಪ್ರಕ್ರಿಯೆಯ ಗೌಪ್ಯತೆ ಮತ್ತು ಶಿಸ್ತಿಗೆ ಧಕ್ಕೆ ಉಂಟುಮಾಡಬಹುದು ಎಂದು ಗಂಭೀರವಾಗಿ ಪರಿಗಣಿಸಿದೆ.

ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿರುವವರು, ಹಂಚಿಕೊಂಡವರು ಹಾಗೂ ಅದರ ಪ್ರಸಾರಕ್ಕೆ ಕಾರಣರಾದ ಖಾತೆದಾರರನ್ನು ಗುರುತಿಸುವಂತೆ ನ್ಯಾಯಾಲಯ ಸೂಚಿಸಿದೆ. ಸಂಬಂಧಪಟ್ಟವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರು ಹಾಗೂ ಕೋರ್ಟ್ ರಿಜಿಸ್ಟ್ರಾರ್‌ಗೆ ನಿರ್ದೇಶನ ನೀಡಲಾಗಿದೆ.

ನ್ಯಾಯಾಲಯದ ವಿಚಾರಣೆಗೆ ಸಂಬಂಧಿಸಿದ ಸೂಕ್ಷ್ಮ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಣೆ ಮತ್ತು ಪ್ರಚಾರಕ್ಕಾಗಿ ಬಳಸುವುದು ನ್ಯಾಯಾಂಗ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಹಿನ್ನೆಲೆಯಲ್ಲಿ, ಇಂತಹ ಕೃತ್ಯಗಳ ವಿರುದ್ಧ ಕಠಿಣ ಕ್ರಮಕ್ಕೆ ನ್ಯಾಯಾಲಯ ಮುಂದಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ ಈಗಾಗಲೇ ರಾಜ್ಯದಾದ್ಯಂತ ಭಾರೀ ಗಮನ ಸೆಳೆದಿರುವ ಹಿನ್ನೆಲೆಯಲ್ಲಿ, ನ್ಯಾಯಾಲಯದ ಈ ನಿರ್ದೇಶನ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕರಣದ ವಿಚಾರಣೆ ಹಾಗೂ ಸಾಕ್ಷ್ಯಗಳಿಗೆ ಸಂಬಂಧಿಸಿದ ವಿಷಯಗಳನ್ನು ಪ್ರಸಾರ ಮಾಡುವವರಿಗೂ ಮಹತ್ವದ ಎಚ್ಚರಿಕೆಯಾಗಿ ಪರಿಣಮಿಸಿದೆ.

You cannot copy content of this page

Exit mobile version