Home ರಾಜಕೀಯ ಗುಜರಾತ್ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ವಿಧೇಯಕಕ್ಕೆ ರಾಷ್ಟ್ರಪತಿ ಅಂಕಿತ: ಜಾರಿಗೆ ಸಿದ್ಧತೆ

ಗುಜರಾತ್ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ವಿಧೇಯಕಕ್ಕೆ ರಾಷ್ಟ್ರಪತಿ ಅಂಕಿತ: ಜಾರಿಗೆ ಸಿದ್ಧತೆ

0

ಅಹಮದಾಬಾದ್: ಉತ್ತರಾಖಂಡದ ಬೆನ್ನಲ್ಲೇ ಗುಜರಾತ್‌ನಲ್ಲೂ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ಹಾದಿ ಸುಗಮವಾಗಿದೆ. ‘ಗುಜರಾತ್ ಏಕರೂಪ ನಾಗರಿಕ ಸಂಹಿತೆ ವಿಧೇಯಕ 2026’ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದು, ಈ ಕುರಿತು ಅಕ್ಟೋಬರ್ 1 ರ ವಿಶೇಷ ರಾಜ್ಯ ಗೆಜೆಟ್‌ನಲ್ಲಿ ಅಧಿಕೃತ ಅಧಿಸೂಚನೆ ಪ್ರಕಟವಾಗಿದೆ.

ಮಾರ್ಚ್ 24 ರಂದು ಗುಜರಾತ್ ವಿಧಾನಸಭೆಯಲ್ಲಿ ಏಳು ಗಂಟೆಗಳ ಸುದೀರ್ಘ ಚರ್ಚೆಯ ನಂತರ ಧ್ವನಿ ಮತದ ಮೂಲಕ ಅಂಗೀಕಾರಗೊಂಡಿದ್ದ ಈ ಮಹತ್ವದ ಮಸೂದೆಗೆ ಸೆಪ್ಟೆಂಬರ್ 17 ರಂದು ರಾಷ್ಟ್ರಪತಿಗಳ ಒಪ್ಪಿಗೆ ದೊರೆತಿದೆ. ರಾಜ್ಯ ಸರ್ಕಾರವು ಪ್ರತ್ಯೇಕ ಅಧಿಸೂಚನೆ ಹೊರಡಿಸಿ ದಿನಾಂಕ ನಿಗದಿಪಡಿಸಿದ ತಕ್ಷಣವೇ ಈ ಹೊಸ ಕಾಯ್ದೆಯು ರಾಜ್ಯಾದ್ಯಂತ ಜಾರಿಗೆ ಬರಲಿದೆ.

ಈ ಹೊಸ ಕಾಯ್ದೆಯು ವಿವಾಹ, ವಿಚ್ಛೇದನ, ಉತ್ತರಾಧಿಕಾರ ಹಾಗೂ ಲಿವ್-ಇನ್ ಸಂಬಂಧಗಳಿಗೆ ಸಂಬಂಧಿಸಿದಂತೆ ಏಕರೂಪದ ಕಾನೂನು ಚೌಕಟ್ಟನ್ನು ಒದಗಿಸಲಿದೆ. ಸಂವಿಧಾನದ 342 ನೇ ವಿಧಿಯಡಿ ಬರುವ ಪರಿಶಿಷ್ಟ ಪಂಗಡಗಳ (ಎಸ್‌ಟಿ) ಸಮುದಾಯಗಳು ಹಾಗೂ ಸಂವಿಧಾನದ 21 ನೇ ಭಾಗದಡಿ ಸಾಂಪ್ರದಾಯಿಕ ಹಕ್ಕುಗಳ ರಕ್ಷಣೆ ಪಡೆದಿರುವ ವರ್ಗಗಳಿಗೆ ಈ ಕಾಯ್ದೆಯಿಂದ ವಿನಾಯಿತಿ ನೀಡಲಾಗಿದೆ.

ಕಾಯ್ದೆಯನ್ವಯ ಬಹುಪತ್ನಿತ್ವ/ಬಹುಪತಿತ್ವವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ್ದು, ಜೀವಂತ ಸಂಗಾತಿ ಇರುವಾಗ ಮತ್ತೊಂದು ವಿವಾಹವಾಗುವುದನ್ನು ತಡೆಯಲಾಗಿದೆ. ಕನಿಷ್ಠ ವಿವಾಹ ವಯಸ್ಸು ಪುರುಷರಿಗೆ 21 ಹಾಗೂ ಮಹಿಳೆಯರಿಗೆ 18 ವರ್ಷಗಳಾಗಿದ್ದು, ಧಾರ್ಮಿಕ ಪದ್ಧತಿಗಳಂತೆ ಮದುವೆಯಾಗಲು ಅವಕಾಶವಿದ್ದರೂ ಮದುವೆಯಾದ 60 ದಿನಗಳ ಒಳಗೆ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು; ತಪ್ಪಿದರೆ 10,000 ರೂ. ದಂಡ ವಿಧಿಸಲು ಅವಕಾಶವಿದೆ.

ಇದಲ್ಲದೆ, ವೈಯಕ್ತಿಕ ಕಾನೂನು ಅಥವಾ ಸಂಪ್ರದಾಯಗಳ ಪ್ರಕಾರ ನಡೆಯುವ ನ್ಯಾಯಾಲಯದ ಹೊರಗಿನ ಯಾವುದೇ ವಿಚ್ಛೇದನಗಳು ಇನ್ನು ಮುಂದೆ ಅಸಿಂಧುವಾಗಲಿದ್ದು, ಕೇವಲ ನ್ಯಾಯಾಲಯದ ಮೂಲಕವೇ ವಿಚ್ಛೇದನ ಪಡೆಯುವುದು ಕಡ್ಡಾಯವಾಗಿದೆ. ಮೃತರ ಆಸ್ತಿ ಹಂಚಿಕೆಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಮಾನ ಹಕ್ಕನ್ನು ಖಾತರಿಪಡಿಸಲಾಗಿದೆ. ಲಿವ್-ಇನ್ ಸಂಬಂಧದಲ್ಲಿರುವ ದಂಪತಿಗಳು ಸ್ಥಳೀಯ ರಿಜಿಸ್ಟ್ರಾರ್ ಬಳಿ ತಮ್ಮ ಸಂಬಂಧವನ್ನು ಕಡ್ಡಾಯವಾಗಿ ನೋಂದಾಯಿಸಬೇಕಾಗಿದ್ದು, ಸಂಗಾತಿಗಳಲ್ಲಿ

ಯಾರಾದರೂ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ ಅವರ ಪೋಷಕರಿಗೆ ಮಾಹಿತಿ ನೀಡಲಾಗುತ್ತದೆ. ಅಲ್ಲದೆ, ಲಿವ್-ಇನ್ ಹಾಗೂ ಅಸಿಂಧು ವಿವಾಹಗಳಿಂದ ಜನಿಸಿದ ಮಕ್ಕಳಿಗೂ ಕಾನೂನುಬದ್ಧ ಮಾನ್ಯತೆ ನೀಡಲಾಗಿದೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಈ ಕಾಯ್ದೆಯು ಹೆಣ್ಣುಮಕ್ಕಳ ಕಾನೂನುಬದ್ಧ ರಕ್ಷಣೆಗಾಗಿ ತರಲಾಗಿದೆ ಎಂದು ಸಮರ್ಥಿಸಿಕೊಂಡಿದ್ದು, ಕಾಂಗ್ರೆಸ್ ಹಾಗೂ ಆಪ್ ವಿಧೇಯಕವನ್ನು ವಿರೋಧಿಸಿದ್ದವು.

You cannot copy content of this page

Exit mobile version