Home ಮೀಡಿಯಾ ಗ್ರಾಮಪಂಚಾಯತಿ ಮೂಲಕ ರೈತರ ಬಳಿಗೆ ತಂತ್ರಜ್ಞಾನ ಟೆಲಿಕಾಂ ಪಾಲಿಸಿ ಜಾರಿಗೆ ಕ್ರಮ ಅಗತ್ಯ : ಪ್ರಿಯಾಂಕ್...

ಗ್ರಾಮಪಂಚಾಯತಿ ಮೂಲಕ ರೈತರ ಬಳಿಗೆ ತಂತ್ರಜ್ಞಾನ ಟೆಲಿಕಾಂ ಪಾಲಿಸಿ ಜಾರಿಗೆ ಕ್ರಮ ಅಗತ್ಯ : ಪ್ರಿಯಾಂಕ್ ಖರ್ಗೆ

0

ಕರ್ನಾಟಕ ಸರ್ಕಾರ ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ ತಂತ್ರಜ್ಞಾನವನ್ನು ರೈತರ ಹತ್ತಿರಕ್ಕೆ ತೆಗೆದುಕೊಂಡು ಹೋಗುವಲ್ಲಿ ಸಫಲವಾಗಿದೆ, ಪಂಚಮಿತ್ರ 2.0 ಗ್ರಾಮ ಪಂಚಾಯತ್‌ಗಳ ಎಲ್ಲಾ ಪ್ರಮುಖ ಚಟುವಟಿಕೆಗಳನ್ನು ಸಕ್ರಿಯಗೊಳಿಸಲು ಮತ್ತು ಡಿಜಿಟಲೀಕರಣಗೊಳಿಸಲು ಪರಿಹಾರವಾಗಿದೆ, ಕರ್ನಾಟಕದಲ್ಲಿ ಸುಮಾರು 6000 ಗ್ರಾಮ ಪಂಚಾಯತಿಗಳಿದ್ದು ಆಯಾ ಗ್ರಾಮ ಪಂಚಾಯತಿ ಕೇಂದ್ರಗಳಲ್ಲಿ ರೈತರು ಆನ್ಲೈನ್ ಮೂಲಕ ದಾಖಲೆಗಳನ್ನು ಪಡೆದುಕೊಳ್ಳುವ ಅನುಕೂಲ ಕಲ್ಪಸಿಕೊಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಇಂದು ನವದೆಹಲಿಯಲ್ಲಿ ಹೇಳಿದರು. 

ನವದೆಹಲಿಯ ಪ್ರಗತಿ ಮೈದಾನದಲ್ಲಿನ ಏಷ್ಯಾದ ಪ್ರಮುಖ ತಂತ್ರಜ್ಞಾನ ಪ್ರದರ್ಶನವಾದ ಇಂಡಿಯಾ ಮೊಬೈಲ್ ಕಾಂಗ್ರೆಸ್ (ಐಎಂಸಿ) ನಲ್ಲಿ ಮಂಗಳವಾರ ನಡೆದ ರಾಜ್ಯ ಐಟಿ ಮಂತ್ರಿಗಳ ದುಂಡುಮೇಜಿನ ಸಭೆಯಲ್ಲಿ ಐಟಿ-ಬಿಟಿ ವಲಯದ ಅಭಿವೃದ್ಧಿಗೆ ಅವಶ್ಯವಿರುವ ಯೋಜನೆಗಳ ಕುರಿತು ರಾಜ್ಯ ಐಟಿ ಮಂತ್ರಿಗಳು ಕೂಲಂಕಷವಾಗಿ ಚರ್ಚಿಸಿದರು.

ಈ ಸಭೆಯಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂದಿಯಾ ಅವರು ಮಾತನಾಡಿ, ಐಟಿ ವಲಯದ ಅಭಿವೃದ್ಧಿ ನಿಟ್ಟಿನಲ್ಲಿ ನೂತನ ಆವಿಷ್ಕಾರ ಹಾಗೂ ಪಾಲಿಸಿಗಳ ಜಾರಿಯಲ್ಲಿ ಆಯಾ ರಾಜ್ಯಸರ್ಕಾರಗಳಿಗೆ ಸ್ವಾತಂತ್ರ್ಯ ಸಿಗುವುದು ಅತ್ಯವಶ್ಯಕ ಎಂದು ತಿಳಿಸಿದರು. ಅದಕ್ಕೆ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರತ್ಯುತ್ತರಿಸಿ ಈಗಾಗಲೇ ನಮ್ಮ ರಾಜ್ಯದಲ್ಲಿ ಸೈಬರ್ ಸೆಕ್ಯೂರಿಟಿ ಪಾಲಿಸಿ, ಡೇಟಾ ಸೆಂಟರ್ ಪಾಲಿಸಿ ಜಾರಿಗೊಳಿಸಲಾಗಿದೆ. ಅದೇ ರೀತಿ ಟೆಲಿಕಾಂ ಪಾಲಿಸಿ ಜಾರಿಗೆ ತರುವ ಗುರಿಯೊಂದಿಗೆ ಹೆಜ್ಜೆಯನ್ನಿಟ್ಟಿದ್ದೇವೆ . ಇದರೊಂದಿಗೆ ಸೆಂಟರ್ ಆಫ್ ಎಕ್ಸಲೆನ್ಸ್ ವೈರ್ಲೆಸ್ ಮತ್ತು ವೈರ್ ಟೆಲಿಕಮ್ಯೂನಿಕೇಶನ್ ಪ್ರಾರಂಭಿಸುತ್ತಿದ್ದೇವೆ. ಗ್ರೀನ್ ಎನರ್ಜಿಯಲ್ಲಿ ಕರ್ನಾಟಕ ಶೇ.65 ರಷ್ಟು ಕೊಡುಗೆ ನೀಡಿರುವುದು ರಾಜ್ಯಕ್ಕೆ ಹಿರಿಮೆ ಎಂದು ತಿಳಿಸಿದರು.

ಪ್ರತಿ ರಾಜ್ಯದಲ್ಲೂ ಟೆಲಿಕಾಂ ಸಮಿಟ್ ಮಾಡಬೇಕು ಎಂದು ಸಲಹೆ ನೀಡಿದರು. ಅದಕ್ಕೆ ಉಳಿದ ರಾಜ್ಯ ಐಟಿ ಮಂತ್ರಿಗಳು ಪ್ರತಿ ರಾಜ್ಯದಲ್ಲಿ ರಾಜ್ಯ ಐಟಿ ಮಂತ್ರಿಗಳ ಸಮ್ಮೇಳನ ಹಾಗೂ ಟೆಲಿಕಾಂ ಸಮ್ಮಿಟ್ ನಿರಂತರವಾಗಿ ನಡೆಯಬೇಕು ಎಂದು ಅನುಮೋದಿಸಿದರು.

ಐಟಿ ವಲಯದಲ್ಲಿ ಕರ್ನಾಟಕ ಸಾಕಷ್ಟು ಹೊಸ ಪ್ರಯತ್ನಗಳತ್ತ ಚಿತ್ತ ಹರಿಸಿ ಯಶಸ್ವಿಯಾಗುತ್ತಿದೆ. ನಗರಗಳಲ್ಲಿ ಮಾತ್ರವಲ್ಲ ಗ್ರಾಮಪಂಚಾಯಿತಿಯಲ್ಲೂ ತಂತ್ರಜ್ಞಾನ ಬಳಸಿ ಸರ್ಕಾರದ ಯೋಜನೆಗಳನ್ನು , ನಾಗರಿಕ ಸೌಲಭ್ಯಗಳನ್ನು ಫಲಾನುಭವಿಗಳಿಗೆ ಯಶಸ್ವಿಯಾಗಿ ತಲುಪಿಸುತ್ತಿದ್ದೇವೆ. ಕೇಂದ್ರಸರ್ಕಾರ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ರೊಬ್ಯಾಟಿಕ್ಸ್ನಲ್ಲಿ ಇನ್ನೂ ಹೆಚ್ಚಿನ ಸಹಕಾರ ನೀಡಿದರೆ ಕರ್ನಾಟಕ ಅತ್ಯುತ್ತಮ ಸಾಧನೆ ಮಾಡಲಿದೆ ಎಂದು ಪ್ರಿಯಾಂಕ್ ಖರ್ಗೆ ವಿವರಿಸಿದರು.

ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಐಒಟಿ ಹಾಗೂ ರೊಬೊಟಿಕ್ಸ್ ಕ್ಷೇತ್ರಗಳ ಸೆಂಟರ್ ಆಫ್ ಎಕ್ಸಲೆನ್ಸಿ ಕೇಂದ್ರಗಳ ಸಂಬಂಧದಲ್ಲಿ ನೆರವು ನೀಡುತ್ತಿರುವುದಕ್ಕೆ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರ ಸರ್ಕಾರ ಮತ್ತಷ್ಟು ಬೆಂಬಲ ನೀಡಿದ್ದಲ್ಲಿ ಇನ್ನೂ ಹೆಚ್ಚು ಸಾಧನೆಗಳನ್ನು ಮಾಡಲು ಸಹಾಯವಾಗುತ್ತದೆ ಎಂದು ಹೇಳಿದರು.

You cannot copy content of this page

Exit mobile version