Wednesday, June 19, 2024

ಸತ್ಯ | ನ್ಯಾಯ |ಧರ್ಮ

ಬಿಲ್ಕಿಸ್‌ ಬಾನೋ ಹಿಂದಿದ್ದ ʼನಾರಿ ವಂದನ್‌ʼ

ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ  ಮತ್ತು ಅವರ ಕುಟುಂಬಿಕರ ಕೊಲೆಗಳ ಆರೋಪದಲ್ಲಿ ಜೈಲಿನಲ್ಲಿದ್ದ 11 ಅಪರಾಧಿಗಳನ್ನು ಗುಜರಾತ್ ಸರ್ಕಾರ ಅವಧಿಗೆ ಮುನ್ನವೇ ಬಿಡುಗಡೆ  ಮಾಡಿದಾಗ, ಅದನ್ನು ಪ್ರಶ್ನಿಸಿ  ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಹೋರಾಟಗಾರ್ತಿಯರು 2022 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾತಂತ್ರ್ಯ ದಿನದ ಭಾಷಣವನ್ನು ನಿಜಗೊಳಿಸಿದ್ದಾರೆ.  

ಸ್ವಾತಂತ್ರ್ಯದ 75 ವರ್ಷಗಳ ಸಂಭ್ರಮಾಚರಣೆಯಲ್ಲಿ, ಮೋದಿ ಯವರು ಕೆಂಪು ಕೋಟೆಯಲ್ಲಿ ಮಹಿಳಾ ಶಕ್ತಿ ಅಥವಾ ‘ನಾರಿ ಶಕ್ತಿ’ಗೆ ಕರೆ ನೀಡಿದ್ದರು  ಮತ್ತು “ಮಹಿಳೆಯರನ್ನು ಅಪಚಾರ ತರುವ ಪ್ರತಿಯೊಂದು ನಡವಳಿಕೆ, ಸಂಸ್ಕೃತಿಯನ್ನು” ಕೊನೆಗೊಳಿಸಬೇಕೆಂದು ಕರೆ ನೀಡಿದ್ದರು.

ಅದೇ ಹೊತ್ತಿಗೆ,  2002 ರಲ್ಲಿ ಗುಜರಾತ್ ಗಲಭೆ ನಡೆಯುತ್ತಿರುವಾಗ ಗರ್ಭಿಣಿ ಬಿಲ್ಕಿಸ್ ಬಾನೊ ಅವರ  ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಅವರ  ಕುಟುಂಬದ 14 ಮಂದಿಯನ್ನು ಹತ್ಯೆ ಮಾಡಿದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಗಳು ಗೋಧ್ರಾ  ಉಪ ಜೈಲಿನಿಂದ ಹೊರಬಂದಿದ್ದರು.

“ಆಗಸ್ಟ್ 15 ರಂದು, ಪ್ರಧಾನ ಮಂತ್ರಿಗಳು ಮಹಿಳೆಯರ ಸುರಕ್ಷತೆ ಮತ್ತು ಮಹಿಳೆಯರ ಗೌರವದ ಬಗ್ಗೆ ಮಾತನಾಡುತ್ತಿದ್ದಾಗ, ಗುಜರಾತ್ ಸರ್ಕಾರವು  ಅವರಿಗೆ ರಿಮಿಷನ್  ಆದೇಶವನ್ನು ನೀಡಿತು  ಮತ್ತು ಅಪರಾಧಿಗಳನ್ನು ಬಿಡುಗಡೆ ಮಾಡಿತು. ಬಿಲ್ಕಿಸ್ ಅವರು ಆಗ  ‘ಇದು ನ್ಯಾಯದ ಅಂತ್ಯಕಾಲ’ ಎಂಬ ಹೇಳಿಕೆಯನ್ನು ನೀಡಿದ್ದನ್ನು ನಾನು ಕೇಳಿದೆ. ಅದು ನಿಜವಾಗಿಯೂ ನನ್ನನ್ನು ಮತ್ತು ನನ್ನಂತಹ ಅನೇಕರನ್ನು ಬೆಚ್ಚಿಬೀಳಿಸಿತು, ‘ನಾವು  ಇದ್ದು ಏನು ಪ್ರಯೋಜನ?” ಎಂದು ಸಿಪಿಐ(ಎಂ) ನಾಯಕಿ  ಸುಭಾಷಿಣಿ ಅಲಿಯವರು ಹೇಳಿದ್ದು  ದಿ ವೈರ್ ವರದಿ ಮಾಡಿದೆ.

ಮಾಜಿ ಪ್ರೊಫೆಸರ್ ರೂಪ್ ರೇಖಾ ವರ್ಮಾ ಮತ್ತು ಪತ್ರಕರ್ತೆ ರೇವತಿ ಲಾಲ್ ಕೂಡ  ಗುಜರಾತ್ ಸರ್ಕಾರದ ಬಿಡುಗಡೆ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು.

“ನಾವು ಏನು ಮಾಡಬಹುದೆಂದು ಯೋಚಿಸುತ್ತಿದ್ದಾಗ ಕಪಿಲ್ ಸಿಬಲ್ ಮತ್ತು ಅಪರ್ಣಾ ಭಟ್ ಹಾಗೂ ಇತರ ವಕೀಲರು ಮುಂದೆ ಬಂದದ್ದು ದೊಡ್ದ  ಅದೃಷ್ಟ” ಎಂದು ಸುಹಾಸಿನಿ ಹೇಳಿದ್ದಾರೆ.

ಜನವರಿ 8 ರಂದು, ಸುಪ್ರೀಂ ಕೋರ್ಟ್ ಗುಜರಾತ್ ಸರ್ಕಾರದ ಬಿಡುಗಡೆ ಆದೇಶವನ್ನು ರದ್ದುಗೊಳಿಸಿ, ಗುಜರಾತ್ ಸರ್ಕಾರಕ್ಕೆ ಈ ರೀತಿ ಅಪರಾಧಿಗಳನ್ನು ಬಿಡುಗಡೆ ಮಾಡುವ  ಅಧಿಕಾರ ಇಲ್ಲ ಎಂದು ಹೇಳಿ ಎರಡು ವಾರಗಳಲ್ಲಿ ಜೈಲಿಗೆ ಮರಳಲು ಆದೇಶ ನೀಡಿತು. ಗುಜರಾತ್ ಸರ್ಕಾರವು ಅಪರಾಧಿಗಳೊಂದಿಗೆ “ಸಂಘಟಿತವಾಗಿ” ವರ್ತಿಸಿದೆ ಎಂದು ನ್ಯಾಯಾಲಯ ಹೇಳಿದೆ. ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಉಜ್ವಲ್ ಭುಯಾನ್ ಅವರ ಪೀಠವು ಮೇ 13, 2022 ರಂದು ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ವಿಕ್ರಮ್ ನಾಥ್ ಅವರ ಪೀಠವು ಗುಜರಾತ್ ಸರ್ಕಾರಕ್ಕೆ ಅಪರಾಧಿಗಳನ್ನು ಬಿಡುಗಡೆ  ಮಾಡುವಂತೆ ತೀರ್ಪು ನೀಡಿದ್ದು “ನಿರರ್ಥಕ” ಎಂದು ಹೇಳಿದೆ.

ರಾಷ್ಟ್ರದ ಬಗ್ಗೆ ಮೋದಿ ಮಾಡಿದ ಕ್ರೂರ ಹಾಸ್ಯ

ದೆಹಲಿಯಲ್ಲಿದ್ದ ಲಕ್ನೋ ವಿಶ್ವವಿದ್ಯಾನಿಲಯದ ಮಾಜಿ ಪ್ರೊಫೆಸರ್ ರೂಪ್ ರೇಖಾ ವರ್ಮಾ, ಅಪರಾಧಿಗಳ ಬಿಡಿಗಡೆ ಆದೇಶದ ಸುದ್ದಿ ಬಂದಾಗ ಪ್ರಧಾನಿಯವರ ಸ್ವತಂತ್ರೋತ್ಸವದ ಭಾಷಣ “ರಾಷ್ಟ್ರದ  ಮೇಲೆ  ಮಾಡಿದ ಕ್ರೂರ ಹಾಸ್ಯ” ಎಂದು ಹೇಳಿದ್ದರು.

“ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಅಳಲು ತೋಡಿಕೊಂಡ ಪ್ರಧಾನಿಯವರು ಆಗಾಗಲೇ ಅಪರಾಧಿಗಳ ಬಿಡುಗಡೆಗೆ  ಅನುಮತಿ ನೀಡಿದ್ದರು. ಅದು ರಾಷ್ಟ್ರದ ಮೇಲೆ ಮಾಡಿದ ಕ್ರೂರ ಹಾಸ್ಯವಾಗಿತ್ತು, ” ಎಂದು ಹೇಳಿದ್ದರು.

“ಆ ಸಮಯದಲ್ಲಿ ನ್ಯಾಯಾಲಯಗಳನ್ನು ಹೆಚ್ಚು ಭರವಸೆಯಿಂದ ನೋಡದಿರಲು ನಮ್ಮಲ್ಲಿ ಸಾಕಷ್ಟು ಉದಾಹರಣೆಗಳಿದ್ದರೂ, ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯನ್ನು ಹೊರತುಪಡಿಸಿ ಬೇರೆ ದಾರಿ ಇರಲಿಲ್ಲ,” ಎಂದು  ವರ್ಮಾ ಹೇಳಿದ್ದರು.

ಸುಪ್ರೀಂ ಕೋರ್ಟಿನಲ್ಲಿ ಬಿಡುಗಡೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲು ಮೂರನೇ ಮಹಿಳಾ ಅರ್ಜಿದಾರರನ್ನು ಹುಡುಕುತ್ತಿದ್ದಾಗ ಕಂಡದ್ದು ಪತ್ರಕರ್ತೆ ರೇವತಿ ಲಾಲ್ . ಅವರು ಗುಜರಾತ್ ಗಲಭೆಗಳನ್ನು ಆಧರಿಸಿ ಅನಾಟಮಿ ಆಫ್ ಹೇಟ್ ಎಂಬ ಪುಸ್ತಕವನ್ನು ಬರೆದಿದ್ದರು. ಆ ಸಂದರ್ಭದಲ್ಲಿ  ಸ್ವಲ್ಪ ಸಮಯದವರೆಗೆ ಗುಜರಾತ್‌ನಲ್ಲಿ ನೆಲೆಸಿದ್ದರು.

ವಕೀಲರಾದ ಇಂದಿರಾ ಜೈಸಿಂಗ್ ಮೂಲಕ ತೃಣಮೂಲ ಕಾಂಗ್ರೆಸ್‌ನಿಂದ ಉಚ್ಛಾಟಿತರಾಗಿರುವ ಲೋಕಸಭಾ ಸಂಸದೆ ಮಹುವಾ ಮೊಯಿತ್ರಾ  ಅವರು ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಜೊತೆಗೆ, ಸೆಪ್ಟೆಂಬರ್ 2022 ರಲ್ಲಿ ಮಾಜಿ ಐಪಿಎಸ್ ಅಧಿಕಾರಿ ಮೀರನ್ ಚಡಾ ಬೋರ್ವಾಂಕರ್ ಅವರು ಮತ್ತೊಂದು ಅರ್ಜಿಯನ್ನು ಸಲ್ಲಿಸಿದ್ದರು.  ಆ ಗುಂಪಿನಲ್ಲಿ ಅರ್ಜಿದಾರರಾದ ಜಗದೀಪ್ ಚೋಖರ್ ಮತ್ತು ಮಧು ಭಂಡಾರಿ ಕೂಡ ಇದ್ದರು.

ಅರ್ಜಿದಾರರಿಗೆ ಈ ಆದೇಶವನ್ನು ಪ್ರಶ್ನಿಸಲು ಯಾವುದೇ ಸ್ಥಾನಮಾನವಿಲ್ಲ, ಇವರೆಲ್ಲರೂ ಈ ಪ್ರಕರಣಕ್ಕೆ ಸಂಬಂಧಿಸಿದವರಲ್ಲ ಎಂದು ಅಪರಾಧಿಗಳಲ್ಲಿ ಒಬ್ಬರು ಸಲ್ಲಿಸಿದ ಅರ್ಜಿಯ  ನಂತರವೂ ಬಾನೊ ನವೆಂಬರ್ 2022 ರಲ್ಲಿ ಬಿಡುಗಡೆ ಆದೇಶಗಳ ವಿರುದ್ಧ ಸುಪ್ರೀಂ ಕೋರ್ಟ್‌ಗೆ ತೆರಳಿದ್ದರು.

Related Articles

ಇತ್ತೀಚಿನ ಸುದ್ದಿಗಳು