Sunday, April 28, 2024

ಸತ್ಯ | ನ್ಯಾಯ |ಧರ್ಮ

ಕೊಪ್ಪಳ: ಶಬರಿಮಲೆ ಯಾತ್ರಾರ್ಥಿಗಳಿಗೆ ಮುಸ್ಲಿಂ ವ್ಯಕ್ತಿಯಿಂದ ಅನ್ನ ಸಂತರ್ಪಣೆ

ಕೊಪ್ಪಳ: ಶಬರಿಮಲೆ ಯಾತ್ರಾರ್ಥಿಗಳಿಗೆ ಮುಸ್ಲಿಂ ಕುಟುಂಬವೊಂದು ‘ಅನ್ನ ಸಂತರ್ಪಣೆ’ ಆಯೋಜಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಈ ನಡೆ ರಾಜ್ಯದಾದ್ಯಂತ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಪಿಂಜಾರ ಸಮುದಾಯದ ಜಿಲ್ಲಾಧ್ಯಕ್ಷರಾದ ಖಾಶಿಂ ಅಲಿ ಮುದ್ದಾಬಳ್ಳಿ ಅವರು ಉತ್ತರ ಕರ್ನಾಟಕದ ಕೊಪ್ಪಳ ನಗರದ ಜಯನಗರ ಬಡಾವಣೆಯಲ್ಲಿರುವ ತಮ್ಮ ಮನೆಯಲ್ಲಿ ಶಬರಿಮಲೆ ಯಾತ್ರಾರ್ಥಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಯಾತ್ರಾರ್ಥಿಗಳು ಅವರ ಮನೆಯಲ್ಲಿ ಭಜನೆಗಳನ್ನು ಹಾಡಿ ನಂತರ ಪೂಜೆ ಮಾಡಿದರು. ಖಾಶಿಂ ಅವರ ಕುಟುಂಬವು ನೂರಾರು ‘ಮಾಲೆಧಾರಿಗಳ’ ಜೊತೆಗೆ ಭಜನೆ ಮತ್ತು ಪೂಜೆಯಲ್ಲಿ ಭಾಗವಹಿಸಿದರು.

ಎಲ್ಲ ಧರ್ಮಗಳು ಒಂದೇ, ಎಲ್ಲ ಧರ್ಮಗಳ ಸಾರವನ್ನು ಅರಿಯಬೇಕು ಎಂದು ಖಾಶಿಂ ಹೇಳಿದರು.

ಇತ್ತೀಚೆಗೆ ಕೇರಳದ ಶಬರಿಮಲೆ ದೇಗುಲಕ್ಕೆ ತೆರಳುತ್ತಿದ್ದ ಉತ್ತರ ಕರ್ನಾಟಕದ ಆರು ಮಂದಿ ಹಿಂದೂ ಯಾತ್ರಾರ್ಥಿಗಳ ತಂಡವೊಂದು ರಾತ್ರಿ ವೇಳೆ ವನ್ಯಜೀವಿ ದಾಳಿಯ ಭೀತಿ ಎದುರಿಸಿತ್ತು. ಕೊಡಗು ಜಿಲ್ಲೆಯ ಮಸೀದಿ ಆವರಣದಲ್ಲಿ ತಂಗಲು ಅವಕಾಶ ನೀಡಿದ ಬಳಿಕ ನಿರಾಳರಾದರು.

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಎಡತಾರ ಗ್ರಾಮದ ಲಿವಾವುಲ್ ಹುದಾ ಜುಮ್ಮಾ ಮಸೀದಿ ಮತ್ತು ಮದರಸಾದ ಆಡಳಿತ ಮಂಡಳಿ ಹಾಗೂ ಧಾರ್ಮಿಕ ಬೋಧಕರು ಹಿಂದೂ ಯಾತ್ರಾರ್ಥಿಗಳಿಗೆ ವಸತಿ ಕಲ್ಪಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದರು.

ಬೆಳಗಾವಿ ಜಿಲ್ಲೆಯ ಗೋಕಾಕ ಸಮೀಪದ ಗ್ರಾಮದಿಂದ ಬಂದಿದ್ದ ಹಿಂದೂ ಯಾತ್ರಾರ್ಥಿಗಳು ಬೈಕ್‌ನಲ್ಲಿ ಶಬರಿಮಲೆಗೆ ಯಾತ್ರೆ ಕೈಗೊಂಡಿದ್ದರು. ದಟ್ಟ ಅರಣ್ಯದ ನಡುವೆ ಇರುವ ಎಡತ್ತರ ಗ್ರಾಮವನ್ನು ತಲುಪಿದ ಅವರಿಗೆ ಅಲ್ಲಿ ಆನೆಗಳು ದಾಳಿ ಮಾಡುತ್ತವೆ ಎನ್ನುವ ವಿಷಯ ತಿಳಿಯಿತು.

ಮಸೀದಿಯನ್ನು ಗಮನಿಸಿದ ಅವರು, ಆಡಳಿತ ಮಂಡಳಿಗೆ ತಂಗಲು ಅವಕಾಶ ನೀಡುವಂತೆ ಮನವಿ ಮಾಡಿದರು. ಮಸೀದಿಯ ಅಧ್ಯಕ್ಷ ಉಸ್ಮಾನ್ ಮತ್ತು ಪದಾಧಿಕಾರಿ ಖತೀಬ್ ಕ್ವಾಮರುದ್ದೀನ್ ಅನ್ವರಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಮಸೀದಿಯಲ್ಲಿ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿದರು. ಯಾತ್ರಾರ್ಥಿಗಳಾದ ಕಮಲೇಶ್ ಗೌರಿ, ಭೀಮಪ್ಪ ಸನದಿ, ಶಿವಾನಂದ ನಾವೇದಿ, ಗಂಗಾಧರ ಬಡಿದೆ, ಸಿದ್ದರೋಡ್ ಸನದಿ ಅವರಿಗೂ ಮಸೀದಿ ಆವರಣದಲ್ಲಿ ಪೂಜೆ ಸಲ್ಲಿಸಲು ಅನುಮತಿ ನೀಡಲಾಗಿದೆ.

ಮಸ್ಜಿದ್ ಆಡಳಿತ ಮಂಡಳಿಯ ಸಹೃದತೆಯನ್ನು ಜನರು ಈಗ ಹಾಡಿ ಹೊಗಳುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು