ವಿಕ್ರಾಂತ್ ರೋಣ ಸಿನಿಮಾ ನೋಡಿ ಬಹುತೇಕ ಎಲ್ಲರೂ ಹೇಳ್ತಾ ಇರೋ ಮಾತನ್ನ ನಾನೂ ಮೊದ್ಲೇ ಹೇಳಿಬಿಡ್ತೀನಿ. ಹೌದು, ವಿಕ್ರಾಂತ್ ರೋಣ ಸಿನಿಮಾ ರಂಗಿತರಂಗ ಸಿನಿಮಾ ಥರನೇ ಇದೆ.
ಕೆಲವರು , ಅರೆ, ಅದು ನಿರ್ದೇಶಕರ ಜಾನರ್. ಅವರಿಗೆ ಈ ರೀತಿಯ ಸಿನಿಮಾಗಳು ಇಷ್ಟ ಅದಕ್ಕೇ ಮಾಡ್ತಾರೆ ಅಂತ ಸಮರ್ಥನೆ ಕೊಡ್ತಾ ಇದ್ದಾರೆ. ಆದರೆ, ಇಲ್ಲಿ ರಿಪೀಟ್ ಆಗಿರೋದು ಜಾನರ್ ಮಾತ್ರ ಅಲ್ಲ, ಇಡೀ ಕಥೆ. ಕಥೆಯ ಎಳೆ ಕೂಡಾ ಅಲ್ಲ, ಹೆಚ್ಚು ಕಮ್ಮಿ ಪೂರ್ತಿ ಬೆಳೆಯೇ ರಂಗಿತರಂಗ ಚಿತ್ರದ್ದು. ಇದೊಂಥರಾ, ಕಷ್ಟದಲ್ಲಿದ್ದಾಗ ಯಾರೂ ಸಪೋರ್ಟ್ ಮಾಡಲಿಲ್ಲ ಅಂದಾಗ ಸಿಂಪಲ್ ಆಗಿ ರಿಜಿಸ್ಟರ್ ಮ್ಯಾರೇಜ್ ಆಗಿ, ಆಮೇಲೆ ಎಲ್ಲವೂ ಸರಿ ಹೋದಾಗ, ಕೈಯಲ್ಲಿ ಸಾಕಷ್ಟು ದುಡಿದ್ದಾಗ, ಮತ್ತೊಮ್ಮೆ ಗ್ರ್ಯಾಂಡ್ ಆಗಿ ಮದುವೆ ಆಗ್ತಾರಲ್ಲ ಕೆಲವರು, ಹಾಗಿದೆ. ಆದರೆ, ವಿಕ್ರಾಂತ್ ರೋಣ ಸಿನಿಮಾ ತುಂಬ ಕತ್ತಲು ಕತ್ತಲೇ ತುಂಬಿರೋದ್ರಿಂದ ಇದು ಒಂಥರಾ ರಂಗೇ ಇಲ್ಲದ ರಂಗಿ ತರಂಗ ಅಂದ್ರೂ ತಪ್ಪಿಲ್ಲ. ಹಂಗಾಗಿ, ವಿಕ್ರಾಂತ್ ರೋಣ ಸಿನಿಮಾ ನೋಡುವಾಗ ಅದೇ ಭೂಮಿ, ಅದೇ ಬಾನು ಹಾಡು ನೆನಪಾದರೂ, 3 ಡಿ ಕನ್ನಡಕ ಇರೋದ್ರಿಂದನೋ ಏನೋ ಈ ನಯನ ನೂತನ ಅಂತ ಮಾತ್ರ ಅನ್ನಿಸುತ್ತೆ.
ರಂಗಿತರಂಗದ ಕಮರೊಟ್ಟು ಗ್ರಾಮ ಇಲ್ಲೂ ಇದೆ. ಆದರೆ ರಂಗಿತರಂಗದಲ್ಲಿ ಸಿಂಪಲ್ ಆಗಿದ್ದ ಹಳ್ಳಿ ಇಲ್ಲಿ ಮಾತ್ರ ಇಂದ್ರಪ್ರಸ್ಥದಂತೆ ಗ್ರ್ಯಾಂಡ್ ಆಗಿದೆ. ಹಾಗಂತ, ಅದಕ್ಕೆ ಸಿನಿಮಾ ನಿರ್ಮಾಪಕರು ಕಾರಣ, ಈ ಸಿನಿಮಾದಲ್ಲಿ ಬಜೆಟ್ ಇತ್ತು ಮಾಡಿದ್ರು ಅಂತ ಹೇಳಂಗಿಲ್ಲ. ಪಾಪ, ರಂಗಿತರಂಗ ರಿಲೀಸ್ ಆಗಿ 7 ವರ್ಷ ಆಯ್ತು. ಪಾಪ ನಮ್ಮ ಹಳ್ಳಿಗಳು ಉದ್ಧಾರ ಆಗಬಾರದೇನ್ರೀ..ಹಾಗಾಗಿ, ನಮ್ಮ ದೇಶದಲ್ಲಿ ಗ್ರಾಮೀಣಾಭಿವೃದ್ಧಿ ಆಗ್ತಾ ಇರೋದ್ರ ಸಂಕೇತ ಇದು ಅಂತನೂ ಅಂದುಕೊಳ್ಳಬಹುದು.
ಇನ್ನು ವಿ ಆರ್ ಅಂತ ಶಾರ್ಟ್ ಆಗಿ ಎಲ್ಲರ ಬಾಯಲ್ಲೂ ಕೇಳ್ತಾ ಇರೋ ವಿಕ್ರಾಂತ್ ರೋಣ 3ಡಿಯಲ್ಲಿ ಬಂದಿದೆ. ವಿಆರ್ ಟೆಕ್ನಾಲಜಿ ಅಲ್ಲ ಬರೀ 3ಡಿ ಅಷ್ಟೇ. 3 ಡಿ ಎಫೆಕ್ಟ್ ಅಷ್ಟೇನೂ ಅದ್ಭುತ ಅನ್ನಿಸೋದಿಲ್ಲ. ಔಟ್ ಡೋರ್ ಸೀನ್ ಗಳಲ್ಲಿ ಓಕೆ ಅನ್ನಿಸಿದ್ರೆ, ಇಂಡೋರ್ ಸೀನ್ ಗಳಲ್ಲಿ ಹಿಂದೆ ನಿಂತಿರೋರೆಲ್ಲ ಔಟ್ ಆಫ್ ಫೋಕಸ್ ಆಗಿದ್ದಾರೆ ಅನ್ನಿಸುತ್ತೆ.
ಇನ್ನು ಸಿನಿಮಾ ವಿಷಯಕ್ಕೆ ಬರೋದಾದ್ರೆ, ಇದು ರಂಗಿತರಂಗದ ಕಥೆ ಅಂದಮೇಲೆ ಹೆಚ್ಚೇನೂ ಕಥೆಯ ಬಗ್ಗೆ ಹೇಳೋ ಅವಶ್ಯಕತೆ ಇಲ್ಲ ಅಂದ್ಕೊತೀನಿ. ಆದರೆ, ಇಲ್ಲಿ ಮಗನಿಗಾಗಿ ಕಾಯುವ ಅಮ್ಮನ ಸೆಂಟಿಮೆಂಟ್ ಜೊತೆ ಗುಮ್ಮನ ಸೆಂಟಿಮೆಂಟ್ ಕೂಡಾ ಇದೆ.
ಅನೂಪ್ ಭಂಡಾರಿ ಅವರಿಗೆ ಪ್ರಯಾಣ ಅಂದ್ರೆ ಇಷ್ಟ ಅನ್ಸುತ್ತೆ. ಈ ಚಿತ್ರದಲ್ಲೂ ರಸ್ತೆ ದೃಶ್ಯಗಳು, ಅಲ್ಲಿಂದ ಇಲ್ಲಿಗೆ ಪ್ರಯಾಣ ಮಾಡುವಂಥ ದೃಶ್ಯಗಳು ಸಾಕಷ್ಟಿವೆ. ಅವರ ಟ್ರಾವೆಲ್ ಹಿಸ್ಟರಿ ತೆಗೆದು ನೋಡಿದ್ರೆ ಅವರ ಹಿಂದಿನ ಎರಡೂ ಸಿನಿಮಾಗಳಲ್ಲಿ ಇದು ಇತ್ತು. ಇಲ್ಲೂ ಇದೆ. ಆದರೆ, ಒಂದೆರಡು ಹಾಡುಗಳ ಪ್ಲೇಸ್ ಮೆಂಟ್ ಸರಿ ಇಲ್ಲ ಅನ್ನೋದ್ ಬಿಟ್ರೆ, ಅನೂಪ್ ಅವರ ನಿರೂಪಣೆಯ ಈ ಪಯಣದಲ್ಲಿ ವಿಕ್ರಾಂತ್ ಟೈರ್ಸ್ ಅನ್ನುವಂಥದ್ದೇನಿಲ್ಲ. ಸಂಚಾರ ಸುಗಮವಾಗೇ ಆಗುತ್ತದೆ.
ವಿಕ್ರಾಂತ್ ರೋಣ ಸಿನಿಮಾಗೆ ಮೊದಲು ಫ್ಯಾಂಟಮ್ ಅಂತ ಹೆಸರಿಟ್ಟಿದ್ರು. ಸದ್ಯ ಚೇಂಜ್ ಮಾಡಿದ್ದು ಒಳ್ಳೇದಾಯ್ತು. ಯಾಕಂದ್ರೆ ಅಂಥ ಯಾವ ಫ್ಯಾಂಟಸಿ ಎಲಿಮೆಂಟ್ಸೂ ಈ ಸಿನಿಮಾದಲ್ಲಿಲ್ಲ. ಒಂದು ಮರ್ಡರ್ ಮಿಸ್ಟ್ರಿ ಅದರ ಸುತ್ತ ಒಂದಷ್ಟು ಹಿಸ್ಟ್ರಿ. ನಿರೂಪಣೆಯಲ್ಲಿ ಸಿನಿಮಾದ ಎಲ್ಲ ಪಾತ್ರಗಳ ಮೇಲೂ ಅನುಮಾನ ಪಡೋ ಅದೇ ಹಳೇ ಕೆಮಿಸ್ಟ್ರಿ. ಈ ಅನುಮಾನ ಪರ್ವದಲ್ಲಿ ಚಿತ್ರದ ನಾಯಕ ಸುದೀಪ್ ಅವರನ್ನೂ ಬಿಡಲ್ಲ ನಿರ್ದೇಶಕರು. ಅನುಮಾನ ಪಡೋಕೆ ಅಂತನೇ ಇಲ್ಲಿ ಹಲವು ಪಾತ್ರಗಳಿವೆ. ಎಲ್ಲರ ಮೇಲೂ ಅನುಮಾನ ಬರುತ್ತೆ. ಆದರೆ ನಿರ್ದೇಶಕ ಯಾರ ಮೇಲೆ ಅನುಮಾನ ಬರುವಂತೆ ಮಾಡುತ್ತಾರೋ ಅವನು ಅಪರಾಧಿ ಅಲ್ಲ ಅಂತ ಪ್ರೇಕ್ಷಕನಿಗೆ ಸಹಜವಾಗಿಯೇ ಗೊತ್ತಾಗುತ್ತೆ. ಯಾಕಂದ್ರೆ ಸಿನಿಮಾ ಇಂಟರ್ ವಲ್ ಗೇ ಮುಗಿಯಲ್ಲವಲ್ಲ.
ಸಿನಿಮಾ ಪೂರ್ತಿ, ಲೈಟೇ ಇಲ್ಲ ಅನ್ನೋ ಕಾರಣಕ್ಕೆ, ಸಿನಿಮಾನ ಲೈಟ್ ಹಾರ್ಟೆಡ್ ಜನ ನೋಡೋದು ಕಷ್ಟ ಆಗಬಹುದು ಅಂತ ಹೇಳಿದ್ರೆ, ಅದಕ್ಕೆ ಚಿತ್ರದಲ್ಲಿರೋ ಭಯ ಹುಟ್ಟಿಸೋ ಸನ್ನಿವೇಶಗಳು ಕಾರಣ ಅಂತ ತಪ್ಪು ತಿಳ್ಕೊಬಾರದು.. ಸಿನಿಮಾದಲ್ಲಿ ಕ್ಯಾಮೆರಾ, ಆಕ್ಷನ್ ಎಲ್ಲಾ ಇದೆ, ಲೈಟಿಂಗೇ ಕಮ್ಮಿ. ಸುದೀಪ ಅವರ ಹೆಸರಲ್ಲೇ ದೀಪ ಇದೆ ಅಂತ ನಿರ್ದೇಶಕರು ಬರೀ ಕತ್ತಲಲ್ಲೇ ಸಿನಿಮಾ ತೋರಿಸಿದ್ದಾರೆ. ಯಾವ ಲೆವೆಲ್ಲಿಗೆ ಕತ್ತಲು ಇದೆ ಅಂದ್ರೆ, ಸ್ವತಃ ಸಿನಿಮಾ ನಾಯಕ ಕೂಡಾ ಆಲ್ಮೋಸ್ಟ್ ಯಾವಾಗ್ಲೂ ಬ್ಯಾಟರಿ ಹಿಡ್ಕೊಂಡೇ ಓಡಾಡ್ತಾನೆ. ಹಾಗಾಗಿ, ಸಿನಿಮಾದಲ್ಲಿ ಬ್ಯಾಟರಿ ಹಾಕ್ಕೊಂಡು ಹುಡುಕಿದ್ರೂ ಬೆಳಕು ಇರೋ ಸೀನ್ ಗಳು ಸಿಗೋದು ಕಷ್ಟ. ಒಂಥರಾ, ಬೆಳಕೇ ಇಲ್ಲದ ದಾರಿಯಲಿ ನಾನು ನಡೆಯಬಲ್ಲೆ ಅಂತ ತಮ್ಮ ಕನಸಿನ ಲೋಕವನ್ನ ತೋರಿಸೋ ಪ್ರಯತ್ನ ಮಾಡಿದ್ದಾರೆ ಅನೂಪ್ ಭಂಡಾರಿ.
ಕಾಮಿಡಿ ವಿಷಯದಲ್ಲಿ, ಮುಸ್ಲಿಮರಿಗೆ ಮಕ್ಕಳು ಜಾಸ್ತಿ ಅನ್ನೋದನ್ನು ಜೋಕು ಅಂದ್ಕೊಂಡ್ರೆ ನಗಬಹುದು. ಮಕ್ಕಳ ವಿಷಯದಲ್ಲಿ ಕ್ರಿಕೆಟ್ ಟೀಮ್ ಕಟ್ಟೋ ಫಕ್ರು ಪಾತ್ರ ಮಾತ್ರ ಸಿನಿಮಾದಲ್ಲಿ 12th ಮ್ಯಾನ್ ಥರ ಅನ್ಸುತ್ತೆ. ಮಕ್ಕಳು ಬಾವಿಗೆ ಬಿದ್ದು ಸಾಯೋ ಕಥೆ ಇರೋ ಸಿನಿಮಾ ಇದು ನಿಜ. ಆದ್ರೆ, ಮುಸ್ಲಿಮರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡೋ ಕೆಲವು ನಿರ್ದೇಶಕರಿಗೆ ಇದರಿಂದ ಹಿನ್ನಡೆ ಆಗಿಲ್ಲ ಅನ್ನೋದೇ ಇಂಥ ಧೈರ್ಯಕ್ಕೆ ಕಾರಣ. ಅಥವಾ ನಮ್ಮ ಕೆಲವು ಬಿಜೆಪಿ ನಾಯಕರು, ನಮಗೆ ಮುಸ್ಲಿಮರ ಓಟು ಬೇಕಿಲ್ಲ ಅಂತ ಹೇಳೋ ಥರ, ನಮಗೆ ಮುಸ್ಲಿಮರು ಸಿನಿಮಾ ನೋಡೋದು ಬೇಕಿಲ್ಲ ಅನ್ನೋ ಧೋರಣೆ ಸಿನಿಮಾ ಮಾಡಿದವರಿಗೆ ಇದ್ದರೆ ಏನೂ ಮಾಡೋಕಾಗಲ್ಲ.
ಇನ್ನು, ಸಿನಿಮಾದಲ್ಲಿ, ಆರ್ಟ್ ಡೈರೆಕ್ಟರ್ ಶಿವಕುಮಾರ್ ಕೆಲಸ ಚೆನ್ನಾಗಿದೆ. ಆದ್ರೆ, ಈ ಸಿನಿಮಾದಲ್ಲಿ, ನಿಜವಾದ ಸೆಟ್ ಯಾವುದು, ವಿಎಫ್ ಎಕ್ಸ್ ಗ್ರಾಫಿಕ್ಸ್ ನಲ್ಲಿ ಮಾಡಿರೋ ಸೀನ್ ಯಾವುದು ಅಂತ ವ್ಯತ್ಯಾಸ ಕಂಡು ಹಿಡಿಯೋದು ಕಷ್ಟ.
ಅಜನೀಶ್ ಲೋಕನಾಥ್ ಸಂಗೀತದಲ್ಲಿ ಗಡಂಗು ರಕ್ಕಮ್ಮ ಗಗುಂಗು ಹಿಡಿಸುತ್ತಾಳೆ. ಅದೇ ರೀತಿ ಹಿನ್ನೆಲೆ ಸಂಗೀತದಲ್ಲಿ ಕೂಡಾ ಅಜನೀಶ್ ಪ್ರೇಕ್ಷಕರಿಗೆ ತುಂಬಾನೇ ಹಿಡಿಸುತ್ತಾರೆ. ವಿಲಿಯಂ ಡೇವಿಡ್ ಛಾಯಾಗ್ರಹಣ ಒಂದು ಅಪರೂಪದ ಅನುಭವ ಕೊಡುತ್ತೆ.
ಅಂದಹಾಗೆ, ಕೆಲ ಸುದೀಪ್ ಅಭಿಮಾನಿಗಳು ಇದು ಸುದೀಪ್ ಗೆ ಸರಿಯಾದ ಪಾತ್ರ ಅಲ್ಲ ಅಂತ ನಿರ್ದೇಶಕರ ಮೇಲೆ ಆರೋಪ ಮಾಡ್ತಾ ಇದ್ದಾರೆ. ಆದರೆ, ಇಲ್ಲಿನ ನಾಯಕ ವಿಕ್ರಾಂತ್ ರೋಣ, ರೋಣದಿಂದ ಬಂದ ಕೆಂಪೇಗೌಡನ ಖದರ್ ಇರುವಂಥ ಪೊಲೀಸ್ ಅಲ್ಲ. ಆದರೆ, ಅವರ ಪಾತ್ರದಲ್ಲಿ ಎಲ್ಲ ರೀತಿಯ ಹೀರೋಯಿಸಂ ಇದೆ. ಕೇವಲ ಬೇರೆ ಹೀರೋಗಳಿಗೆ ಟಾಂಗ್ ಕೊಡೋದು, ನಾನ್ ಕೈ ಇಟ್ರೆ ಹಂಗೆ, ಕಾಲಿಟ್ರೆ ಹಿಂಗೆ ಅಂತ ಡೈಲಾಗ್ ಹೊಡೆಯೋದಷ್ಟೇ ಹೀರೋಯಿಸಂ ಅಲ್ಲ ಅನ್ನೋದನ್ನ ಅವರ ಅಭಿಮಾನಿಗಳು ಅರ್ಥ ಮಾಡ್ಕೊಬೇಕು. ಸುದೀಪ್ ತಮ್ಮ ಅಭಿನಯದಲ್ಲಿ ನಿಜಕ್ಕೂ ಖುಷಿ ಕೊಡ್ತಾರೆ. ಆದರೆ, ಪಾತ್ರಗಳ ಜೊತೆ ಮಾತಾಡುವಾಗ, ಆಯಾ ಪಾತ್ರಗಳ ಹೆಸರು ಹೇಳಿ , ಕೊನೆಯಲ್ಲಿ ಅವರೇ ಅಂತ ಸೇರಿಸುವ ಸುದೀಪ್ ಅವರ ಸಂಭಾಷಣೆ ಹೇಳೋ ಶೈಲಿ ಮಾತ್ರ, ಅವರ ಬಿಗ್ ಬಾಸ್ ನಿರೂಪಣೆಯನ್ನ ನೆನಪಿಸುತ್ತೆ.
ಅನೂಪ್ ಅವರ ನಿರೂಪಣೆಯಲ್ಲಿ ನಿರೂಪ್ ಭಂಡಾರಿ ಅವರಿಗೆ ಒಳ್ಳೆಯ ಪಾತ್ರ ಸಿಕ್ಕಿದೆ. ಅದನ್ನವರು ಸಮರ್ಥವಾಗಿ ನಿಭಾಯಿಸಿದ್ದಾರೆ. ನೀತಾ ಅಭಿನಯದಲ್ಲಿ ಲವಲವಿಕೆ, ಮಿಲನ ನಾಗರಾಜ್ ಅಭಿನಯದಲ್ಲಿ ಢವಢವಿಕೆ ಎರಡೂ ಇದೆ.
ಕ್ಲೈಮ್ಯಾಕ್ಸ್ ನಲ್ಲಿ ಟ್ವಿಸ್ಟ್ ಕೊಡಬೇಕು ಅಂತ ಇರೋ ಕಥೆ ಮತ್ತು ಪಾತ್ರಗಳ ಕ್ಯಾರೆಕ್ಟರ್ ಅನ್ನು ಬುಡ ಮೇಲು ಮಾಡುವ ಟೆಕ್ನಿಕ್ ಇಲ್ಲೂ ಇದೆ. ಆದರೆ, ಅದಕ್ಕೂ ಮುಂಚೆ ಮಾಡಿದ್ದ ಸೀನ್ ಗಳಿಗೆ ಇದು ಲಾಜಿಕ್ ಒದಗಿಸೋದಿಲ್ಲ ಅನ್ನೋದನ್ನ ನಿರ್ದೇಶಕರು ಇಂಥ ಚಿತ್ರಗಳಲ್ಲಿ ಮರೆತುಬಿಡುತ್ತಾರೆ. ಇಲ್ಲೂ ಅದೇ ಆಗಿದೆ. ಒಟ್ಟಾರೆ ಈ ಸಿನಿಮಾನ ರಂಗಿತರಂಗಕ್ಕಿಂತ ಮುಂಚೆನೇ ಮಾಡಿದ್ರೆ ಎಲ್ಲ ರೀತಿಯ ಪ್ರೇಕ್ಷಕರಿಗೂ ಇಷ್ಟ ಆಗ್ತಿತ್ತು ಅನ್ಸುತ್ತೆ. ಆದ್ರೆ ಈಗ್ಲೂ ಅಟ್ ಲೀಸ್ಟ್ 3 ಡಿ ವರ್ಷನ್ ನೋಡೋಕೆ ಅಷ್ಟೊಂದೇನೂ ಕಷ್ಟ ಆಗಲ್ಲ ಬಿಡಿ.