ರಾಜ್ಯ ಬಿಜೆಪಿ ಈಗ ಅಕ್ಷರಶಃ ಒಡೆದ ಮನೆಯಂತಾಗಿದ್ದು ಪಕ್ಷದ ಒಳಗಿನ ಒಳಜಗಳ ಬೀದಿಗೆ ಬಂದು ನಿಂತಿದೆ. ಎರಡು ದಿನಗಳ ಹಿಂದಷ್ಟೇ ಬಾಗಲಕೋಟೆಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಮುರುಗೇಶ್ ನಿರಾಣಿಯ ಪರೋಕ್ಷ ವಾಕ್ಸಮರದ ಮುಂದುವರಿದ ಭಾಗವಾಗಿ ಈಗ ಮುರುಗೇಶ್ ನಿರಾಣಿ ಯತ್ನಾಳ್ ವಿರುದ್ಧ ನೇರವಾಗಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ಅಡ್ಜಸ್ಟಮೆಂಟ್ ಪಾಲಿಟಿಕ್ಸ್ ನ ಕೂಗಿನ ನಡುವೆ ಈಗ ನಿರಾಣಿ ಹಾಕಿರುವ ಬಾಂಬ್ ಪಕ್ಷದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಪಾಪದ ಕೊಡ ತುಂಬಿದೆ. ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಯತ್ನಾಳ್ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಮುರುಗೇಶ್ ನಿರಾಣಿ ಹೊಸ ಬಾಂಬ್ ಸಿಡಿಸಿದ್ದಾರೆ.
ಒಂದು ಕಾಲದಲ್ಲಿ ಜೆಡಿಎಸ್ ಸೇರಿ, ಮುಸಲ್ಮಾನರ ಟೋಪಿ ದರಿಸಿ ನಮಾಜ್ ಮಾಡಿದ ವ್ಯಕ್ತಿ ಈಗ ಹಿಂದೂ ಹುಲಿ ಎಂದು ಬಿಂಬಿಸಿಕೊಳ್ಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಇಂತಹ ವ್ಯಕ್ತಿಗಳು ಎಲ್ಲಿ ಇರುತ್ತಾರೋ ಅಲ್ಲಿಯ ವಾತಾವರಣಕ್ಕೆ ಬೇಗನೆ ಬದಲಾಗುತ್ತಾರೆ. ಇಂತಹ ವ್ಯಕ್ತಿಗಳ ಸೈದ್ಧಾಂತಿಕ ಬದ್ಧತೆ ಬಗ್ಗೆ ಸದಾ ಅನುಮಾನ ಇರಬೇಕು ಎಂಬುದಾಗಿ ನೇರವಾಗಿ ಬಸನಗೌಡ ಪಾಟೀಲ್ ಯತ್ನಾಳ್ ಮೇಲೆ ಕಿಡಿಕಾರಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿ 28 ಅಭ್ಯರ್ಥಿಗಳನ್ನು ಗೆಲ್ಲಿಸಲು ಕೆಲಸ ಮಾಡುತ್ತೇವೆ. ಆದರೆ ಅಡ್ಜಸ್ಟಮೆಂಟ್ ಪಾಲಿಟಿಕ್ಸ್ ಮಾಡುವ ಬಸನಗೌಡ ಯತ್ನಾಳ್ ಗೆ ಇದರ ಜವಾಬ್ದಾರಿ ಕೊಟ್ಟರೆ ತನ್ನ ಉದ್ದೇಶಪೂರ್ವಕ ಡ್ಯಾಮೇಜಿಂಗ್ ಸ್ಟೇಟ್ಮೆಂಟ್ ಗಳಿಂದಲೇ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಕಾರಣರಾಗುತ್ತಾರೆ. ನನ್ನ ಮೇಲೆ ಸಂದರ್ಭದಲ್ಲಿ ಆರೋಪ ಮಾಡುವ ಯತ್ನಾಳ್, ಮುರುಗೇಶ್ ನಿರಾಣಿ ಎಷ್ಟು ಅಭ್ಯರ್ಥಿಗಳ ಸೋಲಿಗೆ ಕಾರಣರಾಗಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಆರೋಪಿಸಿದ್ದಾರೆ.
2012 ರ ಸಾಲಿನಲ್ಲಿ ಬಿಜೆಪಿ ಪಕ್ಷಕ್ಕೆ ಸ್ಪಷ್ಟ ಬಹುಮತ ಇಲ್ಲದಾಗಲೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ವಿಜಯಪುರ ಜಿಲ್ಲೆಯ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಅತಿ ಹೆಚ್ಚು ಸದಸ್ಯರು ಆಯ್ಕೆ ಆಗುವಂತೆ ಮಾಡಿದ್ದೆ. ಹಿಂದೂ ಹುಲಿ ಎಂದು ಕರೆಸಿಕೊಳ್ಳುವ ಯತ್ನಾಳ್ ಇಂತಹ ಯಾವ ಕೆಲಸ ಮಾಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ನೇರವಾಗಿ ಆರೋಪಿಸಿದ್ದಾರೆ.
ಇದೇ ಯತ್ನಾಳ್ ಹಿಂದೆ ಕೇಂದ್ರ ಸಚಿವರಾಗಿದ್ದಾಗ ಅವರಿಗೆ ಕೊಟ್ಟ ಖಾತೆಗಳಾದ ಜವಳಿ ಮತ್ತು ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲೂ ಯಾವುದೇ ಕೆಲಸ ಮಾಡಲಿಲ್ಲ. ಅಧಿಕಾರ ಇದ್ದಾಗ ಕೆಲಸದ ಮೂಲಕ ನಮ್ಮ ಸಾಮರ್ಥ್ಯ ತೋರಿಸಬೇಕು. ಅದು ಬಿಟ್ಟು ಪಕ್ಷಕ್ಕೆ ಒಡಕು ಮೂಡಬಹುದಾದ ಸ್ಟೇಟ್ಮೆಂಟ್ ನೀಡಿದರೆ ಪಕ್ಷಕ್ಕೇ ಹೊಡೆತ. ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುವ ಯತ್ನಾಳ್ ಕಡೆಯಿಂದ ಪಕ್ಷಕ್ಕೆ ಯಾವ ಕೆಲಸ ಆಗಿದೆ ಎಂಬುದು ಮುಖ್ಯ ಪ್ರಶ್ನೆ ಎಂದು ಯತ್ನಾಳ್ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.
ಯತ್ನಾಳ್ ಈ ವರೆಗೂ ಬೇರೆ ಪಕ್ಷಗಳ ನಾಯಕರ ವಿರುದ್ಧ ಮಾತನಾಡಿದ್ದೇ ಕಡಿಮೆ. ಅವರು ಈವರೆಗೂ ಟೀಕಿಸಿರುವುದು ಯಡಿಯೂರಪ್ಪ, ಈಶ್ವರಪ್ಪ, ಶೋಭಾ ಕರಂದ್ಲಾಜೆ, ಜಗದೀಶ ಶೆಟ್ಟರ, ಪ್ರಹ್ಲಾದ ಜೋಶಿ, ವಿಜಯ ಸಂಕೇಶ್ವರರಂತಹ ಸ್ವಪಕ್ಷೀಯ ನಾಯಕರನ್ನು. ಈಗ ಈ ಸಾಲಿನಲ್ಲಿ ನಾನು ಇದ್ದೇನೆ. ಇದರಿಂದ ಪಕ್ಷಕ್ಕೇ ಕೆಟ್ಟ ಹೆಸರು ಎಂಬುದರ ಅರಿವು ಈ ವ್ಯಕ್ತಿಗೆ ಇಲ್ಲವಾಗಿದೆ. ಹಾಗಾಗಿ ಈ ವ್ಯಕ್ತಿ ಯಾವೊಬ್ಬ ಬಿಜೆಪಿ ನಾಯಕರ ಗೆಲುವಿಗೂ ಕಾರಣರಾಗಿಲ್ಲ ಎಂಬುದು ಸ್ಪಷ್ಟ ಎಂದು ಕಿಡಿಕಾರಿದ್ದಾರೆ.
ಒಟ್ಟಾರೆ ಬಿಜೆಪಿ ಪಕ್ಷದ ಒಳಗಿರುವ ಜಗಳ ಈಗ ಬೀದಿಗೆ ಬಂದು ನಿಂತಿದೆ. ಪ್ರತಾಪ್ ಸಿಂಹ ಮತ್ತು ಸಿ.ಟಿ.ರವಿ ಸಿಡಿಸಿರುವ ಅಡ್ಜಸ್ಟಮೆಂಟ್ ಪಾಲಿಟಿಕ್ಸ್ ನ ಬಾಂಬ್ ಈಗ ಯತ್ನಾಳ್ ಮತ್ತು ನಿರಾಣಿ ನಡುವಿನ ವಾಕ್ಸಮರಕ್ಕೆ ದೊಡ್ಡ ವೇದಿಕೆಯಾಗಿದೆ. ಇದರ ನಡುವೆ ಬಿಜೆಪಿ ಪಕ್ಷದ ಒಳಗಿನ ನಾಯಕತ್ವದ ಕೊರತೆಯಿಂದ ಈಗ ಪಕ್ಷ ಒಡೆದ ಮನೆಯಾಗಿದೆ. ಇನ್ನು ಈ ಒಳಜಗಳ ಎಲ್ಲಿಗೆ ಬಂದು ನಿಲ್ಲುತ್ತೋ ಕಾದು ನೋಡಬೇಕಿದೆ.