Home ದೆಹಲಿ ಅಪರಾಧ ಹಿನ್ನೆಲೆಯುಳ್ಳ ಅಭ್ಯರ್ಥಿಗಳ ವಿವರ ಬಹಿರಂಗಪಡಿಸದ ಬಿಜೆಪಿ, ಕಾಂಗ್ರೆಸ್, ಆಪ್ ಮತ್ತಿತರ ಪಕ್ಷಗಳು: ಎಡಿಆರ್ ವಿಶ್ಲೇಷಣೆ

ಅಪರಾಧ ಹಿನ್ನೆಲೆಯುಳ್ಳ ಅಭ್ಯರ್ಥಿಗಳ ವಿವರ ಬಹಿರಂಗಪಡಿಸದ ಬಿಜೆಪಿ, ಕಾಂಗ್ರೆಸ್, ಆಪ್ ಮತ್ತಿತರ ಪಕ್ಷಗಳು: ಎಡಿಆರ್ ವಿಶ್ಲೇಷಣೆ

0

ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಕ್ರಿಮಿನಲ್ ಹಿನ್ನೆಲೆಯುಳ್ಳ ಅಭ್ಯರ್ಥಿಗಳ ವಿವರಗಳನ್ನು ಬಿಜೆಪಿ, ಕಾಂಗ್ರೆಸ್, ಆಪ್ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳು ನಿಯಮಾನುಸಾರ ಬಹಿರಂಗಪಡಿಸದೆ ನಿಯಮ ಉಲ್ಲಂಘಿಸಿವೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ಬಹಿರಂಗಪಡಿಸಿದೆ.

ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ 191 ಅಪರಾಧ ಹಿನ್ನೆಲೆಯುಳ್ಳ ಅಭ್ಯರ್ಥಿಗಳ ಕುರಿತು ಪಕ್ಷಗಳು ಕಡ್ಡಾಯ ಮಾಹಿತಿಯನ್ನು ಸಾರ್ವಜನಿಕಗೊಳಿಸಿಲ್ಲ ಎಂದು ಸಂಸ್ಥೆ ತಿಳಿಸಿದೆ.

ಸುಪ್ರೀಂ ಕೋರ್ಟ್‌ನ ಕಟ್ಟುನಿಟ್ಟಿನ ಆದೇಶದಂತೆ, ಬಾಕಿ ಇರುವ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವ ವ್ಯಕ್ತಿಗಳನ್ನು ಚುನಾವಣಾ ಕಣಕ್ಕಿಳಿಸಿದಾಗ, ರಾಜಕೀಯ ಪಕ್ಷಗಳು ‘ಫಾರ್ಮ್ ಸಿ7’ ಸಲ್ಲಿಸುವುದು ಕಡ್ಡಾಯವಾಗಿದೆ. ಈ ನಮೂನೆಯಲ್ಲಿ ಅಂತಹ ವ್ಯಕ್ತಿಗಳನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲು ಕಾರಣವೇನು ಹಾಗೂ ಯಾವುದೇ ಅಪರಾಧ ಹಿನ್ನೆಲೆಯಿಲ್ಲದ ಇತರ ಪರ್ಯಾಯ ವ್ಯಕ್ತಿಗಳನ್ನು ಏಕೆ ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ ಎಂಬುದಕ್ಕೆ ಪಕ್ಷಗಳು ಸಮರ್ಥನೀಯ ವಿವರಣೆ ನೀಡಬೇಕಿರುತ್ತದೆ. ಆದರೆ ಹಲವು ರಾಜಕೀಯ ಪಕ್ಷಗಳು ಈ ನಿಯಮವನ್ನು ಸಂಪೂರ್ಣವಾಗಿ ಗಾಳಿಗೆ ತೂರಿವೆ.

ಐದು ರಾಜ್ಯಗಳ ಚುನಾವಣೆಯಲ್ಲಿ 51 ರಾಜಕೀಯ ಪಕ್ಷಗಳಿಂದ ಕಣಕ್ಕಿಳಿದಿದ್ದ ಒಟ್ಟು 3,539 ಅಭ್ಯರ್ಥಿಗಳ ಅಫಿಡವಿಟ್‌ಗಳನ್ನು ಎಡಿಆರ್ ಕೂಲಂಕಷವಾಗಿ ಪರಿಶೀಲಿಸಿದೆ. ಇವರಲ್ಲಿ 1,405 ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿರುವುದಾಗಿ ಘೋಷಿಸಿಕೊಂಡಿದ್ದರು. ಆದರೆ, ರಾಜಕೀಯ ಪಕ್ಷಗಳು ಕೇವಲ 1,214 ಅಭ್ಯರ್ಥಿಗಳಿಗೆ ಮಾತ್ರ ‘ಫಾರ್ಮ್ ಸಿ7’ ಸಲ್ಲಿಸಿದ್ದು, ಬಾಕಿ ಉಳಿದ 191 ಮಂದಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆ ಅಥವಾ ಕಾರಣಗಳನ್ನು ಸಲ್ಲಿಸಿಲ್ಲ.

ಪಕ್ಷವಾರು ವಿವರಗಳನ್ನು ಗಮನಿಸಿದರೆ, ಬಿಜೆಪಿ ಕ್ರಿಮಿನಲ್ ಹಿನ್ನೆಲೆಯುಳ್ಳ 302 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಈ ಪೈಕಿ ಎಂಟು ಮಂದಿಯ ವಿವರಗಳನ್ನು ಮುಚ್ಚಿಟ್ಟಿದೆ. ಇನ್ನು ಕಾಂಗ್ರೆಸ್ 13, ತಮಿಳುನಾಡಿನ ಟಿವಿಕೆ 29, ಡಿಎಂಕೆ 22 ಹಾಗೂ ತಮಿಳಗ ವಾಳ್ವುರಿಮೈ ಕಚ್ಚಿ 28 ಅಪರಾಧ ಹಿನ್ನೆಲೆಯುಳ್ಳ ಅಭ್ಯರ್ಥಿಗಳ ವಿವರ ಮತ್ತು ಆಯ್ಕೆಗೆ ಕಾರಣಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ ಎಂದು ಎಡಿಆರ್ ವಿಶ್ಲೇಷಣೆ ತಿಳಿಸಿದೆ.

You cannot copy content of this page

Exit mobile version