Home ದೆಹಲಿ ಭಾರತದ ಚುನಾವಣಾ ವ್ಯವಸ್ಥೆ ಜಗತ್ತಿನಲ್ಲೇ ಅತ್ಯಂತ ಪಾರದರ್ಶಕ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪ್ರತಿಪಾದನೆ

ಭಾರತದ ಚುನಾವಣಾ ವ್ಯವಸ್ಥೆ ಜಗತ್ತಿನಲ್ಲೇ ಅತ್ಯಂತ ಪಾರದರ್ಶಕ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪ್ರತಿಪಾದನೆ

0

ಮತದಾರರ ಪಟ್ಟಿ ಸಿದ್ಧತೆಯಿಂದ ಹಿಡಿದು ಮತಗಳ ಎಣಿಕೆಯವರೆಗೆ ಪ್ರತಿಯೊಂದು ಹಂತದಲ್ಲೂ ನಿರಂತರ ಪರಿಶೀಲನೆ ನಡೆಯುವುದರಿಂದ ಭಾರತದ ಚುನಾವಣಾ ಪ್ರಕ್ರಿಯೆಯು ಜಗತ್ತಿನಲ್ಲೇ ಅತ್ಯಂತ ಪಾರದರ್ಶಕವಾದ ವ್ಯವಸ್ಥೆಗಳಲ್ಲಿ ಒಂದಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಹೇಳಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಸಭಾಂಗಣದಲ್ಲಿ ನಡೆದ ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚುನಾವಣೆಯ ಪ್ರತಿಯೊಂದು ಹಂತದಲ್ಲೂ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಅಥವಾ ಅವರ ಏಜೆಂಟರು ಪ್ರಕ್ರಿಯೆಗಳನ್ನು ಕಣ್ಣಾರೆ ಕಂಡು ಪರಿಶೀಲಿಸುತ್ತಾರೆ ಎಂದು ಅವರು ವಿವರಿಸಿದರು. ಮತದಾನ ಆರಂಭವಾಗುವ ಮೊದಲು ಅಭ್ಯರ್ಥಿಗಳ ಪೋಲಿಂಗ್ ಏಜೆಂಟರ ಸಮ್ಮುಖದಲ್ಲಿ ಇವಿಎಂ ಮತ್ತು ವಿವಿಪ್ಯಾಟ್‌ಗಳ ಅಣಕು ಮತದಾನ (ಮಾಕ್ ಪೋಲ್) ನಡೆಸಲಾಗುತ್ತದೆ; ಮತದಾನ ಮುಗಿದ ನಂತರ ಇವಿಎಂ ಫಲಿತಾಂಶಕ್ಕೆ ಸಂಬಂಧಿಸಿದ ದಾಖಲೆಗಳಿಗೆ ಅವರ ಸಮ್ಮುಖದಲ್ಲೇ ಸಹಿ ಪಡೆಯಲಾಗುತ್ತದೆ ಹಾಗೂ ಮತ ಎಣಿಕೆಯ ವೇಳೆಯಲ್ಲೂ ಫಾರ್ಮ್ 17ಸಿ ಮತ್ತು ಇವಿಎಂ ಮತಗಳನ್ನು ತಾಳೆ ನೋಡಲಾಗುತ್ತದೆ ಎಂದು ತಿಳಿಸಿದರು.

ಮತದಾರರ ಪಟ್ಟಿಯ ನಿಖರತೆಗಾಗಿ ಕಾಲಕಾಲಕ್ಕೆ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್‌ಐಆರ್) ನಡೆಸಲಾಗುತ್ತಿದ್ದು, ಗೈರುಹಾಜರಿ, ಸ್ಥಳಾಂತರ, ಸಾವು, ನಕಲಿ ಹಾಗೂ ವಿದೇಶಿ ಮತದಾರರ (ASDDF) ಪರಿಶೀಲನೆ ನಡೆಸಿ ಅರ್ಹರ ಹೆಸರು ಉಳಿಸಿಕೊಳ್ಳುವುದು ಬಿಎಲ್‌ಒಗಳ ಜವಾಬ್ದಾರಿಯಾಗಿದೆ ಎಂದರು.

ಇದೇ ವೇಳೆ, ಅಹಮದಾಬಾದ್‌ನಲ್ಲಿ ನಡೆದ ‘ಚುನಾವಣಾ ಸಾಕ್ಷರತಾ ಕ್ಲಬ್‌ಗಳು ಮತ್ತು ಇಸಿಐನೆಟ್’ (ECINET) ಪ್ರಾದೇಶಿಕ ಸಮಾವೇಶದಲ್ಲೂ ಭಾಗವಹಿಸಿದ ಅವರು, ಯುವಜನರು ‘ಇಸಿಐನೆಟ್’ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ತಮ್ಮ ಕುಟುಂಬ ಮತ್ತು ಆಸುಪಾಸಿನ ಅರ್ಹ ಹೊಸ ಮತದಾರರ ನೋಂದಣಿಗೆ ನೆರವಾಗುವಂತೆ ಕರೆ ನೀಡಿದರು. ವಿಶ್ವದ 35 ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರಗಳನ್ನು ಒಳಗೊಂಡಿರುವ ‘ಇಂಟರ್‌ನ್ಯಾಷನಲ್ ಐಡಿಯಾ’ (International IDEA) ಸಂಸ್ಥೆಯ ಅಧ್ಯಕ್ಷತೆಯನ್ನು ಪ್ರಸ್ತುತ ಭಾರತ ವಹಿಸಿಕೊಂಡಿರುವುದು ದೇಶದ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣಾ ವ್ಯವಸ್ಥೆಗೆ ದೊರೆತ ಜಾಗತಿಕ ಮನ್ನಣೆಯಾಗಿದೆ ಎಂದು ಕುಮಾರ್ ಈ ಸಂದರ್ಭದಲ್ಲಿ ಉಲ್ಲೇಖಿಸಿದರು.

You cannot copy content of this page

Exit mobile version