ದೆಹಲಿಯಲ್ಲಿ ನಡೆದ ಕಾಕ್‌ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 14 ವರ್ಷದ ಬಾಲಕಿ ನಿಶು ಆಜಾದ್‌ಗೆ ಸಮಾಜಘಾತುಕರು ಅತ್ಯಾಚಾರ ಮತ್ತು ಜೀವ ಬೆದರಿಕೆ ಹಾಕಿರುವ ಹಾಗೂ ಆಕೆಯ ಮನೆಯ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆಯನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ನ್ಯಾಯಕ್ಕಾಗಿ ಕಾನೂನು ಕ್ರಮ ಕೈಗೊಳ್ಳುವಂತೆ ಕೋರುವ ಸಂತ್ರಸ್ತೆ ಅಥವಾ ಆಕೆಯ ಕುಟುಂಬವನ್ನು ಬೆದರಿಸಲು ಯಾರಿಗೂ ಅವಕಾಶ ನೀಡಲಾಗದು ಎಂದು ನ್ಯಾಯಾಲಯ ಖಡಕ್ ಎಚ್ಚರಿಕೆ ನೀಡಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ಕುರಿತು ವಿಚಾರಣೆ ನಡೆಸಿತು. ನಿಶು ಆಜಾದ್ ದಾಖಲಿಸಿರುವ ಎಫ್‌ಐಆರ್, ಆಕೆಗೆ ಮತ್ತು ಆಕೆಯ ಕುಟುಂಬಕ್ಕೆ ಒದಗಿಸಲಾದ ಭದ್ರತಾ ವ್ಯವಸ್ಥೆ ಹಾಗೂ ಬೆದರಿಕೆ ಮತ್ತು ಹಲ್ಲೆಯಲ್ಲಿ ಭಾಗಿಯಾದವರ ವಿರುದ್ಧ ಕೈಗೊಂಡ ಕ್ರಮಗಳ ಕುರಿತು ವಸ್ತುಸ್ಥಿತಿ ವರದಿ (Status Report) ಸಲ್ಲಿಸುವಂತೆ ಉತ್ತರ ಪ್ರದೇಶ ಸರ್ಕಾರ ಹಾಗೂ ದೆಹಲಿ ಪೊಲೀಸರಿಗೆ ಪೀಠ ನಿರ್ದೇಶಿಸಿದೆ.
ಸಿಜೆಪಿ ಪ್ರತಿಭಟನೆಯ ವೇಳೆ ನಿಶು ಅವರ ದಲಿತ ತಂದೆ ಸಂಜಯ್ ಮೇಲೆ ಹಿಂದುತ್ವ ಪರ ಕಾರ್ಯಕರ್ತ ಸ್ವತಂತ್ರ ಭಾರದ್ವಾಜ್ ಹಲ್ಲೆ ನಡೆಸಿದ್ದ. ತಿಂಗಳುಗಳ ನಂತರ ಪಾಡ್‌ಕ್ಯಾಸ್ಟ್ ಸಂದರ್ಶನವೊಂದರಲ್ಲಿ ಭಾರದ್ವಾಜ್ ತಾನೇ ಹಲ್ಲೆ ನಡೆಸಿರುವುದಾಗಿ ಬಡಾಯಿ ಕೊಚ್ಚಿಕೊಂಡಿದ್ದ. ಈ ವಿಡಿಯೋ ವೈರಲ್ ಆದ ನಂತರ ಸಿಜೆಪಿ, ಬಿಎಸ್‌ಪಿ ಹಾಗೂ ಭೀಮ್ ಪಾರ್ಟಿ ಸಂಘಟನೆಗಳು ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ ಪರಿಣಾಮ ಭಾರದ್ವಾಜ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಇದೇ ವಿಚಾರವಾಗಿ ಮಾತನಾಡಿದ್ದಕ್ಕೆ ಭಾರದ್ವಾಜ್ ಬೆಂಬಲಿಗರಿಂದ ತಮಗೆ ನಿರಂತರ ಬೆದರಿಕೆ ಕರೆಗಳು, ಅಶ್ಲೀಲ ಸಂದೇಶಗಳು ಬರುತ್ತಿವೆ ಎಂದು ನಿಶು ಮತ್ತೊಂದು ದೂರು ದಾಖಲಿಸಿದ್ದರು. ಅಲ್ಲದೆ, ಅಪರಿಚಿತರು ಮನೆಗೆ ಕಲ್ಲು ತೂರುತ್ತಿರುವ ವಿಡಿಯೋಗಳನ್ನೂ ಆಕೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
ವಿದ್ಯಾರ್ಥಿ ಪ್ರತಿಭಟನೆಗಳಿಗೆ ಸಂಬಂಧಿಸಿದ ವಿಚಾರಣೆಯ ಸಂದರ್ಭದಲ್ಲಿ ವಕೀಲರು ನಿಶು ಅವರ ಜೀವಕ್ಕಿರುವ ಬೆದರಿಕೆಯನ್ನು ನ್ಯಾಯಾಲಯದ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಸೂರ್ಯಕಾಂತ್, “ಮಗುವಿನ ಮೇಲೆ ಹಿಂಸಾಚಾರ ನಡೆಸಿ, ಆ ಮಗುವನ್ನೇ ಬೆದರಿಸಲು ಸಮಾಜಘಾತುಕ ಶಕ್ತಿಗಳು ರಾಜಾರೋಷವಾಗಿ ತಿರುಗಾಡುತ್ತಿದ್ದರೆ ಅದು ಗಂಭೀರ ವಿಚಾರ. ಮಗು ಮಗುವೇ; ಆ ಮಗುವಿನ ರಕ್ಷಣೆಗೆ ತಕ್ಷಣ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೂಚಿಸಿದರು.
ಎಫ್‌ಐಆರ್ ಆಧರಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು ಹಾಗೂ ಯುಪಿ ಪೊಲೀಸರು ಸಂತ್ರಸ್ತೆ ಮತ್ತು ಆಕೆಯ ಕುಟುಂಬಕ್ಕೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಬೇಕು ಎಂದು ಪೀಠವು ಆದೇಶಿಸಿದೆ.
