Home ದೇಶ ಐದು ವರ್ಷಗಳಿಗೂ ಹೆಚ್ಚು ಕಾಲ ತಿರುಪತಿಗೆ ಕಲಬೆರಕೆ ತುಪ್ಪ ಪೂರೈಕೆ: ಎಸ್‌ಐಟಿ ವರದಿ

ಐದು ವರ್ಷಗಳಿಗೂ ಹೆಚ್ಚು ಕಾಲ ತಿರುಪತಿಗೆ ಕಲಬೆರಕೆ ತುಪ್ಪ ಪೂರೈಕೆ: ಎಸ್‌ಐಟಿ ವರದಿ

0

ಹೈದರಾಬಾದ್: ತುಪ್ಪದಲ್ಲಿನ ಕಲಬೆರಕೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳವು (SIT) ತಿರುಮಲ ತಿರುಪತಿ ದೇವಸ್ಥಾನಂಗೆ (TTD) ಐದು ವರ್ಷಗಳಿಗೂ ಹೆಚ್ಚು ಕಾಲ ಕಲಬೆರಕೆ ತುಪ್ಪದ ಪೂರೈಕೆ ಮಾಡಲಾಗಿದೆ ಎಂದು ಕಂಡುಕೊಂಡಿದೆ.

ಮೂಲಗಳ ಪ್ರಕಾರ, ಸಿಬಿಐನಿಂದ ಫೆಬ್ರವರಿಯಲ್ಲಿ ಬಂಧಿಸಲ್ಪಟ್ಟಿರುವ ಮೆ. ಭೋಲೆ ಬಾಬಾ ಆರ್ಗ್ಯಾನಿಕ್ ಡೈರಿ ಮಿಲ್ಕ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾದ ಪೋಮಿಲ್ ಜೈನ್ ಮತ್ತು ವಿಪಿನ್ ಜೈನ್ ಅವರು ಉತ್ತರಾಖಂಡದ ರೂಡ್ಕೀ ಬಳಿಯ ಭಗವಾನ್‌ಪುರದಲ್ಲಿರುವ ತಮ್ಮ ಘಟಕದಲ್ಲಿ ಕಲಬೆರಕೆ ತುಪ್ಪವನ್ನು ಉತ್ಪಾದಿಸುತ್ತಿದ್ದರು.

ತನಿಖೆಯಲ್ಲಿ ತಿಳಿದುಬಂದಿರುವ ಅಂಶವೆಂದರೆ, ಆರೋಪಿಗಳು ಗೋವಿನ ತುಪ್ಪದ ಬದಲಿಗೆ, ಕೋಲ್ಕತ್ತಾದ ಬುಗ್ ಬಜ್ ಕಂಪನಿಯಿಂದ ಸಂಗ್ರಹಿಸಿದ ಪಾಮ್ ಆಯಿಲ್, ಪಾಮ್ ಕರ್ನಲ್ ಆಯಿಲ್ ಮತ್ತು ಪಾಮೊಲಿನ್ ನಂತಹ ಕಲಬೆರಕೆ ವಸ್ತುಗಳನ್ನು ಬಳಸಿದ್ದಾರೆ.

ಪ್ರಯೋಗಾಲಯ ಪರೀಕ್ಷೆಗಳನ್ನು ಪಾಸ್‌ ಮಾಡಲು ಮತ್ತು ಪರಿಮಳವನ್ನು ಉಳಿಸಿಕೊಳ್ಳಲು ಈ ವಸ್ತುಗಳನ್ನು ಸ್ವಲ್ಪ ಪ್ರಮಾಣದ ಶುದ್ಧ ತುಪ್ಪದೊಂದಿಗೆ ಬೆರೆಸಿ ಬೀಟಾ-ಕ್ಯಾರೋಟಿನ್, ಅಸಿಟಿಕ್ ಆಸಿಡ್ ಎಸ್ಟರ್ ಮತ್ತು ಕೃತಕ ತುಪ್ಪದ ಪರಿಮಳದಂತಹ ರಾಸಾಯನಿಕಗಳೊಂದಿಗೆ ಮಿಶ್ರಣ ಮಾಡಲಾಗುತ್ತಿತ್ತು. ಒಬ್ಬ ಆರೋಪಿಯನ್ನು ಬಂಧಿಸಿದ ನಂತರ ಈ ಅಂಶಗಳನ್ನು ಆಂಧ್ರಪ್ರದೇಶದ ಸ್ಥಳೀಯ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ತಮ್ಮ ಯೋಜನೆಯ ಭಾಗವಾಗಿ, ಪೋಮಿಲ್ ಮತ್ತು ವಿಪಿನ್ ಜೈನ್ ಭೋಲೆ ಬಾಬಾ ಆರ್ಗ್ಯಾನಿಕ್ ಡೈರಿ ಮಿಲ್ಕ್ ಪ್ರೈ.ಲಿ ಮತ್ತು ಶ್ರೀಕಾಳಹಸ್ತಿ ಬಳಿಯ ಮೆ. ಶ್ರೀ ವೈಷ್ಣವಿ ಡೈರಿ ಸ್ಪೆಷಾಲಿಟೀಸ್ ಪ್ರೈ.ಲಿ, ಪುಣೆ ಬಳಿಯ ಮೆ. ಮಲಗಂಗಾ ಮಿಲ್ಕ್ ಆಂಡ್ ಅಗ್ರೋ ಪ್ರಾಡಕ್ಟ್ಸ್ ಪ್ರೈ.ಲಿ ಮತ್ತು ತಮಿಳುನಾಡಿನ ದಿಂಡಿಗಲ್‌ನಲ್ಲಿರುವ ಮೆ. ಎಆರ್ ಡೈರಿ ಫುಡ್ಸ್ ಪ್ರೈ.ಲಿ ಸೇರಿದಂತೆ ಇತರೆ ಸಂಸ್ಥೆಗಳ ಮೂಲಕ ಟಿಟಿಡಿಗೆ ಕಲಬೆರಕೆ ತುಪ್ಪವನ್ನು ಪೂರೈಸಿದ್ದಾರೆ.

ಈ ಸಂಸ್ಥೆಗಳು ಒಟ್ಟಾಗಿ 2019 ಮತ್ತು 2024 ರ ನಡುವೆ ಸುಮಾರು ₹ 240 ಕೋಟಿ ಮೌಲ್ಯದ, ಅಂದಾಜು 60,37,351 ಕೆ.ಜಿ. ತುಪ್ಪವನ್ನು ಪೂರೈಕೆ ಮಾಡಿದ್ದವು. ತಿರುಮಲ ಲಡ್ಡು ಮತ್ತು ಇತರ ಪ್ರಸಾದಗಳನ್ನು ತಯಾರಿಸಲು ಗೋವಿನ ತುಪ್ಪವು ಒಂದು ಪ್ರಮುಖ ಅಂಶವಾಗಿದ್ದು, ಸರಾಸರಿ ದೈನಂದಿನ ಅವಶ್ಯಕತೆ ಸುಮಾರು 15,000 ಕೆ.ಜಿ. ಇರುತ್ತದೆ.

ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯ (CFTRI) 2022ರ ಆಗಸ್ಟ್‌ನ ಪರೀಕ್ಷಾ ವರದಿಗಳು ತುಪ್ಪದಲ್ಲಿ ತರಕಾರಿ ಎಣ್ಣೆಯ ಕಲಬೆರಕೆ ಇರುವುದನ್ನು ಸ್ಪಷ್ಟವಾಗಿ ದೃಢಪಡಿಸಿವೆ ಎಂದು ಎಸ್‌ಐಟಿ ಕಂಡುಕೊಂಡಿದೆ.

ಆದರೆ ಈ ಅಂಶಗಳು ಆಗಿನ ಟಿಟಿಡಿ ಅಧ್ಯಕ್ಷರಾಗಿದ್ದ ವೈ. ವಿ. ಸುಬ್ಬಾ ರೆಡ್ಡಿ ಅವರಿಗೆ ತಿಳಿಸಲಾಗಿದ್ದರೂ, ಪೂರೈಕೆದಾರರ ವಿರುದ್ಧ ಯಾವುದೇ ಕ್ರಮವನ್ನು ಪ್ರಾರಂಭಿಸಲಾಗಿಲ್ಲ. ಅದೇ ಕಂಪನಿಗಳು 2024 ರವರೆಗೆ ಟಿಟಿಡಿಗೆ ತುಪ್ಪವನ್ನು ಪೂರೈಕೆಯನ್ನು ಮುಂದುವರಿಸಿದ್ದವು ಎಂದು ಸಿಬಿಐ ತನ್ನ ರಿಮಾಂಡ್ ವರದಿಯಲ್ಲಿ ಗಮನಿಸಿದೆ. ಭೋಲೆ ಬಾಬಾ ಆರ್ಗ್ಯಾನಿಕ್ ಡೈರಿ ಮಿಲ್ಕ್ ಪ್ರೈ.ಲಿ. ಕಂಪನಿಯು ಅಕ್ಟೋಬರ್ 2022 ರವರೆಗೆ ಪೂರೈಕೆ ಮಾಡಿತ್ತು.

ಸುಬ್ಬಾ ರೆಡ್ಡಿ ಅವರ ವೈಯಕ್ತಿಕ ಸಹಾಯಕ (PA) ಕದೂರು ಚಿನ್ನಪ್ಪಣ್ಣ ಅವರು 2019 ಮತ್ತು 2023 ರ ನಡುವೆ ತುಪ್ಪ ಪೂರೈಕೆದಾರರಿಂದ ಪಾವತಿಗಳನ್ನು ಪಡೆದಿರುವುದಾಗಿ ಎಸ್‌ಐಟಿ ವರದಿ ಮಾಡಿದೆ. ಆಗಿನ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಚಿಕ್ಕಪ್ಪನಾದ ಸುಬ್ಬಾ ರೆಡ್ಡಿ ಅವರು 2019 ರಿಂದ 2023 ರವರೆಗೆ ಟಿಟಿಡಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

You cannot copy content of this page

Exit mobile version