Home ಬೆಂಗಳೂರು ಆದಾಯ ಹೆಚ್ಚಿಸಲು ಬಿಎಂಟಿಸಿ ಬಸ್ಸುಗಳಲ್ಲಿ ಆಡಿಯೋ ಜಾಹೀರಾತು ಪ್ರಯಾಣಿಕರ – ಬಾರಿ ವಿರೋಧ 

ಆದಾಯ ಹೆಚ್ಚಿಸಲು ಬಿಎಂಟಿಸಿ ಬಸ್ಸುಗಳಲ್ಲಿ ಆಡಿಯೋ ಜಾಹೀರಾತು ಪ್ರಯಾಣಿಕರ – ಬಾರಿ ವಿರೋಧ 

ಬೆಂಗಳೂರು : ತೀವ್ರ ಆರ್ಥಿಕ ನಷ್ಟದಿಂದ ಕಂಗೆಟ್ಟಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ಸಾಲದ ಸುಳಿಯಿಂದ ಪಾರಾಗಲು ಈಗ ಹೊಸದೊಂದು ಆದಾಯದ ಮಾರ್ಗವನ್ನು ಕಂಡುಕೊಂಡಿದೆ. ಬಸ್‌ಗಳ ಹೊರಭಾಗ ಹಾಗೂ ಟಿಕೆಟ್‌ಗಳ ಹಿಂದೆ ಜಾಹೀರಾತು ನೀಡಲು ಈಗಾಗಲೇ ಟೆಂಡರ್ ಕರೆದಿರುವ ನಿಗಮ, ಇದೀಗ ದೇಶದಲ್ಲೇ ಮೊದಲ ಬಾರಿಗೆ ಬಸ್ಸಿನ ಒಳಗಿರುವ ಸ್ಪೀಕರ್‌ಗಳ (ಅನೌನ್ಸರ್‌ಗಳು) ಮೂಲಕ ಆಡಿಯೋ ಜಾಹೀರಾತು ಬಿತ್ತರಿಸಲು ಬಿಗ್ ಪ್ಲಾನ್ ಮಾಡಿದೆ. ಆದರೆ, ಬಿಎಂಟಿಸಿಯ ಈ ಹೊಸ ನೀತಿಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

ನಷ್ಟ ಸರಿದೂಗಿಸಲು ಸಾರಿಗೆ ಸಂಸ್ಥೆ ಹರಸಾಹಸ
ಕಳೆದ ಕೆಲ ಸಮಯದಿಂದ ಬಿಎಂಟಿಸಿ ಬಹಳ ಕಷ್ಟ ಅನುಭವಿಸುತ್ತಿದೆ. ಶಕ್ತಿ ಯೋಜನೆಯ ಬಾಕಿ ಮೊತ್ತ ಸಕಾಲಕ್ಕೆ ಕೈಸೇರದೆ ಮತ್ತು ಡೀಸೆಲ್ ದರ ಏರಿಕೆ ಕಾರಣದಿಂದ ಬಿಎಂಟಿಸಿ ತತ್ತರಿಸಿ ಹೋಗಿದೆ. ಈ ನಷ್ಟದಿಂದ ಹೊರಬರಲು ಈಗಾಗಲೇ ಟಿಕೆಟ್ ದರ ಹೆಚ್ಚಳ ಮಾಡುವಂತೆಯೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಸದ್ಯ ಸಂಸ್ಥೆಯ ಅಡಿಯಲ್ಲಿ ಸುಮಾರು 6,800 ಡೀಸೆಲ್ ಹಾಗೂ ಎಲೆಕ್ಟ್ರಿಕ್ ಬಸ್‌ಗಳು ಸಂಚರಿಸುತ್ತಿದ್ದು, ದಿನನಿತ್ಯ 45 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಇವುಗಳಲ್ಲಿ ಪ್ರಯಾಣಿಸುತ್ತಾರೆ. ಇಷ್ಟೊಂದು ದೊಡ್ಡ ಮಟ್ಟದ ಪ್ರಯಾಣಿಕರನ್ನು ತಲುಪುವ ಮೂಲಕ ಕೋಟ್ಯಂತರ ರೂಪಾಯಿ ಆದಾಯ ಗಳಿಸುವುದು ನಿಗಮದ ಉದ್ದೇಶವಾಗಿದೆ. ಈ ಆಡಿಯೋ ಜಾಹೀರಾತು ಪ್ರಸ್ತಾವನೆಯನ್ನು ಸಾರಿಗೆ ಸಚಿವರಿಗೆ ಸಲ್ಲಿಸಲಾಗಿದ್ದು, ಸದ್ಯದಲ್ಲೇ ಅನುಮೋದನೆ ಸಿಗುವ ನಿರೀಕ್ಷೆಯಿದೆ.

ಪ್ರಯಾಣಿಕರ ನೆಮ್ಮದಿಗೆ ಭಂಗ ತರುತ್ತಾ ಸ್ಪೀಕರ್ ಗದ್ದಲ?
ಬಿಎಂಟಿಸಿಯ ಈ ಹೊಸ ನಿರ್ಧಾರಕ್ಕೆ ನಿತ್ಯ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸ್‌ಗಳ ಒಳಗೆ ನಿರಂತರವಾಗಿ ಸ್ಪೀಕರ್ ಮೂಲಕ ಜಾಹೀರಾತುಗಳನ್ನು ಪ್ರಸಾರ ಮಾಡುವುದರಿಂದ ಪ್ರಯಾಣದ ನೆಮ್ಮದಿ ಹಾಳಾಗುತ್ತದೆ ಎಂಬುದು ಸಾರ್ವಜನಿಕರ ಪ್ರಮುಖ ದೂರಾಗಿದೆ.ಸಾಮಾನ್ಯವಾಗಿ ಬಿಎಂಟಿಸಿ ಬಸ್‌ಗಳಲ್ಲಿ ಬಡವರು ಹಾಗೂ ಮಧ್ಯಮ ವರ್ಗದ ಜನರು ಹೆಚ್ಚು ಪ್ರಯಾಣ ಮಾಡುತ್ತಾರೆ. ಈ ಬಸ್‌ಗಳಲ್ಲಿ ಜನ ಜಾಸ್ತಿ ಇರುವುದರಿಂದ ಗೊಂದಲಗಳು ಕೂಡ ಇರುತ್ತದೆ.  ಜನರ ಕಾರಣದಿಂದ ಗದ್ದಲ ಇರುತ್ತದೆ. ಇದರ ನಡುವೆ ಆಡಿಯೋ ಮೂಲಕ ನಿರಂತರವಾಗಿ ಜಾಹೀರಾತು ಹಾಕುತ್ತಾ ಹೋದರೆ, ಮುಂದಿನ ಸ್ಟಾಪ್ ಯಾವುದು, ಎಲ್ಲಿ ಇಳಿಯಬೇಕು ಎಂಬುದೇ ತಿಳಿಯುವುದಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.

ಒಟ್ಟಿನಲ್ಲಿ, ಸಂಸ್ಥೆಯನ್ನು ನಷ್ಟದಿಂದ ಮುನ್ನಡೆಸಲು ಬಿಎಂಟಿಸಿ ಹೊಸ ದಾರಿ ಹುಡುಕುತ್ತಿದ್ದರೆ, ಇತ್ತ ಪ್ರಯಾಣಿಕರು ಮಾತ್ರ ಈ ಶಬ್ದ ಮಾಲಿನ್ಯದ ಯೋಜನೆಗೆ ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ.

You cannot copy content of this page

Exit mobile version