Home Uncategorized ನ್ಯಾಯಾಧೀಶೆ ತಬಸ್ಸುಮ್ ಖಾನ್ | ತೀರ್ಪು ಒಂದು ವರ್ಗಕ್ಕೆ ಇಷ್ಟವಾಗಿಲ್ಲ ಎಂದ ಮಾತ್ರಕ್ಕೆ ಬೆದರಿಕೆ ಒಡ್ಡುವುದನ್ನು...

ನ್ಯಾಯಾಧೀಶೆ ತಬಸ್ಸುಮ್ ಖಾನ್ | ತೀರ್ಪು ಒಂದು ವರ್ಗಕ್ಕೆ ಇಷ್ಟವಾಗಿಲ್ಲ ಎಂದ ಮಾತ್ರಕ್ಕೆ ಬೆದರಿಕೆ ಒಡ್ಡುವುದನ್ನು ಒಪ್ಪಲು ಸಾಧ್ಯವಿಲ್ಲ: ಮಧ್ಯಪ್ರದೇಶ ಹೈಕೋರ್ಟ್

0

ದೆಹಲಿ: ನರ್ಮದಾಪುರಂ ಜಿಲ್ಲಾ ನ್ಯಾಯಾಧೀಶರಾದ ತಬಸ್ಸುಮ್ ಖಾನ್ ಅವರಿಗೆ ಬೆದರಿಕೆ ಹಾಕಿ, ನಿಂದಿಸುತ್ತಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಧ್ಯಪ್ರದೇಶ ಹೈಕೋರ್ಟ್, ಅವರಿಗೆ ಸೂಕ್ತ ರಕ್ಷಣೆ ನೀಡುವಂತೆ ಮತ್ತು ಆರೋಪಿಗಳ ಬಂಧನಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ವಿವರಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ನ್ಯಾಯಾಲಯದ ಆದೇಶಗಳ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಆದರೆ, ನ್ಯಾಯಾಧೀಶರು “ತಮ್ಮ ವಿವೇಚನೆಗೆ ಅನುಗುಣವಾಗಿ ನೀಡಿದ ತೀರ್ಪು ಸಮಾಜದ ಒಂದು ವರ್ಗಕ್ಕೆ ಇಷ್ಟವಾಗಲಿಲ್ಲ ಎಂಬ ಕಾರಣಕ್ಕೆ ಅವರಿಗೆ ಬೆದರಿಕೆ ಹಾಕಲು ಸಾಧ್ಯವಿಲ್ಲ” ಎಂದು ನ್ಯಾಯಮೂರ್ತಿಗಳಾದ ವಿವೇಕ್ ಅಗರ್ವಾಲ್ ಮತ್ತು ಅವನೀಂದ್ರ ಸಿಂಗ್ ಅವರ ಪೀಠವು ಹೇಳಿದೆ. ಜುಲೈ 1 ರಂದು ನೀಡಿರುವ ಆದೇಶದಲ್ಲಿ, ನ್ಯಾಯಾಧೀಶರಾದ ತಬಸ್ಸುಮ್ ಖಾನ್ ಅವರನ್ನು ಗುರಿಯಾಗಿಸಿಕೊಂಡಿರುವುದು “ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ನ್ಯಾಯಾಂಗ ಅಧಿಕಾರಿಗಳ ನಿರ್ಭೀತ ಕಾರ್ಯವೈಖರಿಗೆ ನೇರವಾಗಿ ಧಕ್ಕೆ ತರುತ್ತದೆ” ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ.

ನ್ಯಾಯಾಧೀಶರ ನಿಂದನೆಗೆ ಕಾರಣರಾದವರನ್ನು ಬಂಧಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಮೂರು ದಿನಗಳ ಒಳಗೆ ನ್ಯಾಯಾಲಯಕ್ಕೆ ಮಾಹಿತಿ ನೀಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಮತ್ತು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ/ಮುಖ್ಯ ಕಾರ್ಯದರ್ಶಿಗೆ ಪೀಠವು ಆದೇಶಿಸಿದೆ. ಹಾಗೆಯೇ, ನರ್ಮದಾಪುರಂ ಪೊಲೀಸ್ ವರಿಷ್ಠಾಧಿಕಾರಿಗಳ ಮೂಲಕ ನ್ಯಾಯಾಧೀಶರಿಗೆ ರಕ್ಷಣೆ ಒದಗಿಸುವಂತೆ ಸೂಚಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಡೆಪ್ಯುಟಿ ಅಡ್ವೊಕೇಟ್ ಜನರಲ್ ಅಭಿಜೀತ್ ಅವಸ್ತಿ, ಈಗಾಗಲೇ ಜಿಲ್ಲಾ ನ್ಯಾಯಾಧೀಶರಿಗೆ ರಕ್ಷಣೆ ನೀಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದ್ದಾರೆ.

2022 ರಲ್ಲಿ ನರ್ಮದಾಪುರಂನಲ್ಲಿ ನಡೆದಿದ್ದ ಜಾನುವಾರು ಸಾಗಣೆದಾರನ ಮೇಲಿನ ದಾಳಿ (ಲಿಂಚಿಂಗ್) ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 12 ರಂದು ಏಳು ಮಂದಿ ಗೋರಕ್ಷಕರಿಗೆ ತಬಸ್ಸುಮ್ ಖಾನ್ ಅವರು ಜೀವಾವಧಿ ಶಿಕ್ಷೆ ವಿಧಿಸಿದ್ದರು. ಈ ತೀರ್ಪು ಪ್ರಕಟವಾದ ನಂತರ ಅವರಿಗೆ ಬೆದರಿಕೆಗಳು ಬರಲಾರಂಭಿಸಿದ್ದವು. ಅಪರಾಧಿಗಳನ್ನು ಬಿಡುಗಡೆ ಮಾಡದಿದ್ದರೆ ಭೀಕರ ಹತ್ಯಾಕಾಂಡ ನಡೆಸುವುದಾಗಿ ವ್ಯಕ್ತಿಯೊಬ್ಬ ವಿಡಿಯೋ ಮೂಲಕ ಬೆದರಿಕೆ ಹಾಕಿದ್ದರೆ, ಮತ್ತೊಂದು ಸಾಮಾಜಿಕ ಜಾಲತಾಣ ಖಾತೆಯಿಂದ ನ್ಯಾಯಾಧೀಶರನ್ನು ದೇಶದಿಂದಲೇ ಓಡಿಸುವಂತೆ ಕರೆ ನೀಡಲಾಗಿತ್ತು. ಇನ್ನು ಕೆಲವರು ಅವರ ಧರ್ಮವನ್ನು ಉಲ್ಲೇಖಿಸಿ ತೀರ್ಪಿನ ವಿರುದ್ಧ ಅಪಪ್ರಚಾರ ನಡೆಸಿದ್ದರು.

“ನ್ಯಾಯಾಧೀಶರು ಕಾನೂನಿನ ಚೌಕಟ್ಟಿನಲ್ಲಿ ನೀಡುವ ತೀರ್ಪುಗಳಿಗೆ ವೈಯಕ್ತಿಕವಾಗಿ ಪರಿಣಾಮ ಎದುರಿಸಬೇಕಾಗಿ ಬಂದರೆ, ಅದು ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಬೆನ್ನೆಲುಬಾಗಿರುವ ಜಿಲ್ಲಾ ನ್ಯಾಯಾಲಯಗಳ ಸ್ವಾತಂತ್ರ್ಯ ಮತ್ತು ಕಾರ್ಯನಿರ್ವಹಣೆಯ ಮೇಲೆ ತೀವ್ರ ನಕಾರಾತ್ಮಕ ಪರಿಣಾಮ ಬೀರುತ್ತದೆ” ಎಂದು ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್ ಆನ್ ರೆಕಾರ್ಡ್ ಅಸೋಸಿಯೇಷನ್ ಬುಧವಾರ ಆತಂಕ ವ್ಯಕ್ತಪಡಿಸಿದೆ.

ಯುನೈಟೆಡ್ ಕ್ರಿಶ್ಚಿಯನ್ ಫೋರಂ (ಯುಸಿಎಫ್) ಕೂಡ ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿದ್ದು, ನ್ಯಾಯಾಧೀಶರಾದ ತಬಸ್ಸುಮ್ ಖಾನ್ ಅವರಿಗೆ ಬೆಂಬಲ ಸೂಚಿಸಿದೆ ಮತ್ತು ಅವರ ವಿರುದ್ಧ ನಡೆಯುತ್ತಿರುವ ದ್ವೇಷದ ಅಭಿಯಾನವನ್ನು ಖಂಡಿಸಿದೆ. ದೇಶದ ಸ್ವತಂತ್ರ ನ್ಯಾಯಾಂಗದ ಮೇಲೆ ತಮಗೆ ಪೂರ್ಣ ನಂಬಿಕೆಯಿದೆ ಎಂದು ಹೇಳಿರುವ ಸಂಘಟನೆ, ನ್ಯಾಯಾಧೀಶರಿಗೆ ತಕ್ಷಣವೇ ಸಮಗ್ರ ಭದ್ರತೆಯನ್ನು ಒದಗಿಸುವುದರ ಜೊತೆಗೆ ದ್ವೇಷ ಪ್ರಚೋದಿಸುತ್ತಿರುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದೆ.

ಇದು ಕೇವಲ ಒಬ್ಬ ನ್ಯಾಯಾಧೀಶರ ಸುರಕ್ಷತೆಯ ಪ್ರಶ್ನೆಯಲ್ಲ, ಬದಲಿಗೆ ಪ್ರಜಾಪ್ರಭುತ್ವದ ಅತ್ಯಂತ ಪ್ರಮುಖ ಅಂಗವನ್ನು ರಕ್ಷಿಸುವ ವಿಷಯವಾಗಿದೆ ಎಂದು ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಮೈಕಲ್ ವಿಲಿಯಮ್ಸ್ ಹೇಳಿದ್ದಾರೆ. ಮುಂದುವರಿದು, ನ್ಯಾಯಾಧೀಶರು ಯಾವುದೇ ಬಾಹ್ಯ ಪ್ರಭಾವ, ಪ್ರಲೋಭನೆ ಅಥವಾ ಬೆದರಿಕೆಗಳಿಲ್ಲದೆ ಮುಕ್ತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ರಾಜ್ಯ ಸರ್ಕಾರಗಳು ಪೂರಕ ವಾತಾವರಣವನ್ನು ಖಾತರಿಪಡಿಸಬೇಕು ಎಂಬ ವಿಶ್ವಸಂಸ್ಥೆಯ ಮೂಲಭೂತ ತತ್ವಗಳನ್ನು ಸಂಘಟನೆ ನೆನಪಿಸಿದೆ.

You cannot copy content of this page

Exit mobile version