ದೆಹಲಿ: ಅಯೋಧ್ಯೆಯ ರಾಮಮಂದಿರದ ದೇಣಿಗೆ ಕಳ್ಳತನದ ಆರೋಪದ ಕುರಿತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಶುಕ್ರವಾರ ಕೊನೆಗೂ ಮೌನ ಮುರಿದಿದ್ದು, ಅದಕ್ಕೆ ಕಾರಣರಾದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಮತ್ತು ಮಂದಿರದ ಆಡಳಿತ ವ್ಯವಸ್ಥೆಯಲ್ಲಿ ವ್ಯಾಪಕ ಸುಧಾರಣೆಗಳನ್ನು ತರಬೇಕು ಎಂದು ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ವಿಡಿಯೋ ಸಂದೇಶದ ಮೂಲಕ ಕರೆ ನೀಡಿದ್ದಾರೆ.
ಮಂದಿರದ ಕಾಣಿಕೆ ಪೆಟ್ಟಿಗೆಗಳಿಂದ ನಡೆದಿದೆ ಎನ್ನಲಾದ ಕಳ್ಳತನವನ್ನು “ಅತ್ಯಂತ ದುರದೃಷ್ಟಕರ” ಎಂದು ಬಣ್ಣಿಸಿದ ಹೊಸಬಾಳೆ, ಈ ಘಟನೆಯು ಕೋಟ್ಯಂತರ ರಾಮಭಕ್ತರ ಮತ್ತು ಸಮಸ್ತ ಹಿಂದೂ ಸಮಾಜದ ಭಾವನೆ ಹಾಗೂ ನಂಬಿಕೆಗೆ ಧಕ್ಕೆ ತಂದಿದೆ ಎಂದು ಹೇಳಿದ್ದಾರೆ.
ತಲೆಮಾರುಗಳ ಹೋರಾಟ ಹಾಗೂ ಲಕ್ಷಾಂತರ ರಾಮಭಕ್ತರ ಸಮರ್ಪಣೆ, ತ್ಯಾಗ ಮತ್ತು ಭಕ್ತಿಯ ನಂತರ ನಿರ್ಮಾಣಗೊಂಡ ಭವ್ಯ ರಾಮಮಂದಿರವು ಇಡೀ ಹಿಂದೂ ಸಮುದಾಯದ ನಂಬಿಕೆ ಮತ್ತು ಪೂಜನೀಯ ಕೇಂದ್ರವಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ತನಿಖೆಯನ್ನು ಉಲ್ಲೇಖಿಸಿದ ಹೊಸಬಾಳೆ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸುವಂತೆ ಉತ್ತರ ಪ್ರದೇಶ ಸರ್ಕಾರವನ್ನು ಒತ್ತಾಯಿಸಿತ್ತು, ಅದರಂತೆ ತನಿಖಾ ತಂಡದ ಶಿಫಾರಸುಗಳ ಆಧಾರದ ಮೇಲೆ ಕಾನೂನು ಪ್ರಕ್ರಿಯೆಗಳು ಪ್ರಾರಂಭವಾಗಿವೆ ಎಂದು ಹೇಳಿದ್ದಾರೆ. ತನಿಖೆಯಲ್ಲಿ ತಪ್ಪಿತಸ್ಥರೆಂದು ಕಂಡುಬರುವ ಎಲ್ಲರಿಗೂ ಕಠಿಣ ಶಿಕ್ಷೆಯಾಗಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.
ಈ ಘಟನೆಯನ್ನು ಒಂದು ಅಸಾಧಾರಣ ಲೋಪ ಎಂದು ಪರಿಗಣಿಸಿ, ಮಂದಿರದ ನಿರ್ವಹಣೆ ಮತ್ತು ಕಾರ್ಯಾಚರಣಾ ವ್ಯವಸ್ಥೆಯಲ್ಲಿನ ನ್ಯೂನತೆಗಳನ್ನು ತೆಗೆದುಹಾಕಲು ಟ್ರಸ್ಟ್ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಆರ್‌ಎಸ್‌ಎಸ್ ಹಾಗೂ ಇಡೀ ಹಿಂದೂ ಸಮಾಜವು ಸಹಜವಾಗಿಯೇ ನಿರೀಕ್ಷಿಸುತ್ತದೆ ಎಂದು ಹೊಸಬಾಳೆ ಹೇಳಿದ್ದಾರೆ.
“ಪ್ರಸ್ತುತ ಇರುವ ಗೊಂದಲ ಮತ್ತು ಅನಿಶ್ಚಿತತೆಯ ವಾತಾವರಣ ಕೊನೆಗೊಳ್ಳಬೇಕು,” ಎಂದು ಹೇಳಿದ ಅವರು, ಸಾರ್ವಜನಿಕರ ವಿಶ್ವಾಸವನ್ನು ಮರುಸ್ಥಾಪಿಸಲು ಮಂದಿರದ ಆಡಳಿತ ಮಂಡಳಿ ಮತ್ತು ಸರ್ಕಾರ ನೇಮಿಸಿದ ಎಸ್‌ಐಟಿ ಎರಡೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಾರದರ್ಶಕ ಹಣಕಾಸು ನಿರ್ವಹಣೆ, ದಕ್ಷ ಆಡಳಿತ ಮತ್ತು ಪವಿತ್ರತೆ, ಸಮಗ್ರತೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮೇಲಿನ ಭಕ್ತರ ನಂಬಿಕೆಯನ್ನು ಉಳಿಸಿಕೊಳ್ಳಲು ಅತ್ಯಗತ್ಯ ಎಂದು ಅವರು ತಿಳಿಸಿದ್ದಾರೆ.
ತಮ್ಮ ಸಂದೇಶದಲ್ಲಿ ಹೊಸಬಾಳೆ ಅವರು, ತನಿಖೆ ನಡೆಯುತ್ತಿರುವಾಗ ತಾಳ್ಮೆ ಮತ್ತು ಸಂಯಮ ಕಾಯ್ದುಕೊಳ್ಳುವಂತೆ ಹಿಂದೂ ಸಮುದಾಯಕ್ಕೆ ಮನವಿ ಮಾಡಿದ್ದಾರೆ. ಅಲ್ಲದೆ, ಹಿಂದೂ ಸಮಾಜ ಮತ್ತು ನಂಬಿಕೆಯನ್ನು ಹಾಳು ಮಾಡಲು “ಹಿಂದೂ ವಿರೋಧಿ ಮತ್ತು ದೇಶ ವಿರೋಧಿ ಶಕ್ತಿಗಳು” ಈ ಘಟನೆಯನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿವೆ ಎಂದು ಎಚ್ಚರಿಸಿರುವ ಅವರು, ಅಂತಹ ಪ್ರಯತ್ನಗಳು ಯಶಸ್ವಿಯಾಗಲು ಬಿಡಬಾರದು ಎಂದು ಜನರನ್ನು ಒತ್ತಾಯಿಸಿದ್ದಾರೆ.
ರಾಮಮಂದಿರದ ಕಾಣಿಕೆ ಪೆಟ್ಟಿಗೆಗಳಿಂದ ಸಂಗ್ರಹಿಸಿದ ದೇಣಿಗೆಯನ್ನು ನಿರ್ವಹಿಸುವಲ್ಲಿ ಅಕ್ರಮಗಳು ನಡೆದಿರುವುದನ್ನು ಎಸ್‌ಐಟಿ ತನಿಖೆಯು ಪತ್ತೆಹಚ್ಚಿದ ನಂತರ ಈ ವಿವಾದ ಭುಗಿಲೆದ್ದಿದೆ. ಇದುವರೆಗೆ ನಗದು ಎಣಿಕೆ ಪ್ರಕ್ರಿಯೆಗೆ ಸಂಬಂಧಿಸಿದ ಸಿಬ್ಬಂದಿ ಸೇರಿದಂತೆ ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆಯ ವೇಳೆ ಪೊಲೀಸರು ಸುಮಾರು 80 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ. ದುರುಪಯೋಗ ಮತ್ತು ಭದ್ರತಾ ಲೋಪಗಳ ಕುರಿತು ತನಿಖೆ ಮುಂದುವರಿದಿದೆ.
