Home ಇನ್ನಷ್ಟು ಕೋರ್ಟು - ಕಾನೂನು ಕೇಸುಗಳಿದ್ದರೆ ನೀವೂ ಪಕ್ಷ ಬದಲಿಸಿ! ಅಲ್ಲಿ ವಾಷಿಂಗ್ ಮೆಷಿನ್ ಇದೆ: ಪಕ್ಷಾಂತರದ ಕುರಿತು ಬಾಂಬೆ ಹೈಕೋರ್ಟ್...

ಕೇಸುಗಳಿದ್ದರೆ ನೀವೂ ಪಕ್ಷ ಬದಲಿಸಿ! ಅಲ್ಲಿ ವಾಷಿಂಗ್ ಮೆಷಿನ್ ಇದೆ: ಪಕ್ಷಾಂತರದ ಕುರಿತು ಬಾಂಬೆ ಹೈಕೋರ್ಟ್ ನ್ಯಾಯಾಧೀಶರ ವ್ಯಂಗ್ಯ

0

ಮುಂಬೈ: ಮಹಾರಾಷ್ಟ್ರ ಸೇರಿದಂತೆ ದೇಶಾದ್ಯಂತ ಶಾಸಕರ ಪಕ್ಷಾಂತರ ಪ್ರಕ್ರಿಯೆ ಜೋರಾಗಿ ನಡೆಯುತ್ತಿರುವ ಈ ಸಂದರ್ಭದಲ್ಲಿ ಬಾಂಬೆ ಹೈಕೋರ್ಟ್‌ನ ನ್ಯಾಯಾಧೀಶರಾದ ಜಸ್ಟಿಸ್ ಮಾಧವ್ ಜಾಮ್‌ದಾರ್ ಮಹತ್ವದ ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ಮಾತನಾಡಿದ ನ್ಯಾಯಾಧೀಶರು, ತಮ್ಮ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ರದ್ದಪಡಿಸಲು ಅರ್ಜಿದಾರರು ಪಕ್ಷ ಬದಲಾಯಿಸುವ ಬಗ್ಗೆ ಯೋಚಿಸಬಹುದು ಎಂದು ವ್ಯಂಗ್ಯವಾಡಿದ್ದಾರೆ. ನೀವು ಕೂಡ ಪಕ್ಷ ಬದಲಾಯಿಸಬೇಕು. ಹೇಗಿದ್ದರೂ ಮಹಾರಾಷ್ಟ್ರದಾದ್ಯಂತ ಕುದುರೆ ವ್ಯಾಪಾರ ನಡೆಯುತ್ತಿದೆ. ನಿಮ್ಮ ಮೇಲೂ ಕೆಲವು ಎಫ್‌ಐಆರ್‌ಗಳಿವೆ. ಪಕ್ಷ ಬದಲಾಯಿಸುವ ಬಗ್ಗೆ ಯೋಚಿಸಿ. ಅಲ್ಲಿ ಒಂದು ವಾಷಿಂಗ್ ಮೆಷಿನ್ ಇದೆಯಲ್ಲ ಎಂದು ತಮಾಷೆ ಮಾಡಿದ್ದಾರೆ.

ಬಹಿಷ್ಕಾರದ (ಗಡಿಪಾರು) ಆದೇಶಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಹೈಕೋರ್ಟ್ ಈ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಸರ್ಕಾರದ ವಿರುದ್ಧ ಟೀಕೆ ಮಾಡುವ ಹಕ್ಕು ನಾಗರಿಕರಿಗೆ ಇಲ್ಲವೇ ಎಂದು ಕೋರ್ಟ್ ಪ್ರಶ್ನಿಸಿದೆ. ಕೇಂದ್ರ ಸರ್ಕಾರ, ಬಿಜೆಪಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಪ್ರತಿಭಟನೆ ನಡೆಸಿ, ಘೋಷಣೆಗಳನ್ನು ಕೂಗಿದ್ದಕ್ಕಾಗಿ ತಮ್ಮ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಿದ ನಂತರ ಸರ್ಕಾರ ಹೊರಡಿಸಿದ್ದ ಬಹಿಷ್ಕಾರದ ಆದೇಶವನ್ನು ಸವಾಲು ಮಾಡಿ ಸಯೀದ್ ಅಹಮದ್ ಅಬ್ದುಲ್ ವಾಹಿದ್ ಚೌಧರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.

ಸ್ಥಳೀಯ ರಾಜಕಾರಣಿಯಾದ ಚೌಧರಿ ಅವರ ಮೇಲೆ ಒಂದು ವರ್ಷದ ಅವಧಿಗೆ ಗಡಿಪಾರು ವಿಧಿಸಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್, ನಾಗರಿಕರನ್ನು ಸರ್ಕಾರದ ಗುಲಾಮರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ. ಕೇವಲ ತಮ್ಮ ವಿರುದ್ಧದ ಆಂದೋಲನಗಳು ಮತ್ತು ಪ್ರತಿಭಟನೆಗಳಲ್ಲಿ ಭಾಗವಹಿಸಿದ ಕಾರಣಕ್ಕಾಗಿ ಒಬ್ಬ ವ್ಯಕ್ತಿಯನ್ನು ಸರ್ಕಾರ ಬಹಿಷ್ಕರಿಸಿ ಆದೇಶ ಹೊರಡಿಸಲು ಸಾಧ್ಯವಿಲ್ಲ ಎಂದು ಜಸ್ಟಿಸ್ ಮಾಧವ್ ಜಾಮ್‌ದಾರ್ ನೇತೃತ್ವದ ಏಕಸದಸ್ಯ ಪೀಠವು ವ್ಯಾಖ್ಯಾನಿಸಿದೆ. ಸರ್ಕಾರದ ಆದೇಶವು ಅರ್ಜಿದಾರ ಚೌಧರಿ ಅವರ ಮೂಲಭೂತ ಹಕ್ಕುಗಳು, ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಗೌರವಯುತವಾಗಿ ಬದುಕುವ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಹೈಕೋರ್ಟ್ ತಿಳಿಸಿದೆ.

You cannot copy content of this page

Exit mobile version