ಅಯೋಧ್ಯಾ: ಅಯೋಧ್ಯಾ ರಾಮಮಂದಿರದ ಕಳ್ಳತನ ಪ್ರಕರಣದ ಎಂಟು ಮಂದಿ ಆರೋಪಿಗಳ ಪೈಕಿ ಕನಿಷ್ಠ ಐದು ಜನರು ದೇಣಿಗೆ ಎಣಿಕೆಯ ಸಮಯದಲ್ಲಿ ನೋಟಿನ ಕಂತೆಗಳನ್ನು ಬಚ್ಚಿಡುತ್ತಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದೆ.
ಅಯೋಧ್ಯಾ ಪೊಲೀಸರ ನಂಬಿಕಸ್ತ ಮೂಲಗಳ ಮಾಹಿತಿಯ ಪ್ರಕಾರ… ಐದು ಮಂದಿ ಆರೋಪಿಗಳು ತಮ್ಮ ಬಟ್ಟೆಗಳು ಅಥವಾ ಸಾಕ್ಸ್‌ಗಳಲ್ಲಿ ನೋಟಿನ ಕಂತೆಗಳನ್ನು ಬಚ್ಚಿಟ್ಟಿರುವುದು ಕಂಡುಬಂದಿದೆ. ಮಂದಿರದ ಆಡಳಿತ ಮಂಡಳಿಯು 45 ದಿನಗಳಿಗಿಂತ ಹೆಚ್ಚಿನ ಸಿಸಿಟಿವಿ ದೃಶ್ಯಾವಳಿಗಳನ್ನು (ಫುಟೇಜ್) ತಮ್ಮ ಬಳಿ ಇಟ್ಟುಕೊಳ್ಳುವುದಿಲ್ಲ, ಇದರಿಂದಾಗಿ ಈ ಕಳ್ಳತನವು ಯಾವಾಗಿನಿಂದ ನಡೆಯುತ್ತಿದೆ ಎಂಬುದನ್ನು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಮಂದಿರದ ಆಡಳಿತವು ತಾತ್ಕಾಲಿಕ ವ್ಯವಸ್ಥೆಯಡಿಯಲ್ಲಿ ನಡೆಯುತ್ತಿದೆ. ನೋಟುಗಳ ಎಣಿಕೆಗಾಗಿ ಅನೇಕ ಜನರನ್ನು ತಾತ್ಕಾಲಿಕ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿದೆ. ಅವರನ್ನು ನೇಮಿಸಿಕೊಳ್ಳುವ ಮುನ್ನ ಅವರ ಹಿನ್ನೆಲೆಯನ್ನು ಸರಿಯಾಗಿ ಪರಿಶೀಲಿಸಿಲ್ಲ. ಎಣಿಕಾ ಕೇಂದ್ರದಲ್ಲಿ ಸರಿಯಾದ ತಪಾಸಣೆ ಮತ್ತು ಶೋಧನೆಗಳನ್ನು ಒಳಗೊಂಡ ಬಲಿಷ್ಠ ಪ್ರವೇಶ ನಿಯಂತ್ರಣ ವ್ಯವಸ್ಥೆ ಇರಲಿಲ್ಲ’ ಎಂದು ಅವರು ಹೇಳಿದ್ದಾರೆ.
ಅಯೋಧ್ಯಾ ರಾಮಮಂದಿರದ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಆಪ್ (AAP) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಶುಕ್ರವಾರ ತೀವ್ರ ಆರೋಪ ಮಾಡಿದ್ದಾರೆ. ಗೋವಾದ ಡೋನಾ ಪೌಲಾದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣಕ್ಕಾಗಿ 2021 ರಲ್ಲಿ ಭೂಮಿ ಖರೀದಿಸಿದಾಗಿನಿಂದಲೂ ಆರ್ಥಿಕ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದರು.
‘2 ಕೋಟಿ ರೂ. ಮೌಲ್ಯದ ಭೂಮಿಯನ್ನು ಮಂದಿರದ ಟ್ರಸ್ಟ್ ಕೇವಲ 10 ನಿಮಿಷಗಳಲ್ಲಿ 18 ಕೋಟಿ ರೂ.ಗೆ ಖರೀದಿಸಿದೆ. 14 ಕೋಟಿ ರೂ. ಮೌಲ್ಯದ ಭೂಮಿಯನ್ನು 95 ಕೋಟಿ ರೂ.ಗೆ ಖರೀದಿಸಿದೆ’ ಎಂದು ಅವರು ಬಹಿರಂಗಪಡಿಸಿದ್ದಾರೆ. ಮಂದಿರ ನಿರ್ಮಾಣದ ಪ್ರತಿಯೊಂದು ಟೆಂಡರ್‌ನಲ್ಲಿ ಶೇಕಡಾ 40 ರಷ್ಟು ಕಮಿಷನ್ ತೆಗೆದುಕೊಳ್ಳಲಾಗಿದೆ ಎಂದು ಇಂಜಿನಿಯರ್‌ಗಳೇ ತಿಳಿಸಿದ್ದಾರೆ ಎಂದಿದ್ದಾರೆ. ಅವರು ದೇವರನ್ನೇ ವಂಚಿಸಿದ ರೀತಿ ಇದು ಎಂದು ಟೀಕಿಸಿದ್ದಾರೆ.
