ಹಾವೇರಿ : ಜಿಲ್ಲೆಯ ನರೇಗಲ್ ಕೋಮುಗಲಭೆಯ ಕಾವು ಇನ್ನೂ ಆರುವ ಮುನ್ನವೇ ಹಾವೇರಿಯಲ್ಲಿ ಮತ್ತೊಂದು ಆಘಾತಕಾರಿ (Crime) ಘಟನೆ ಸಂಭವಿಸಿದೆ. ಕೇವಲ ಹಣದ ಚಿಲ್ಲರೆ ವಿಚಾರದ ಕ್ಷುಲ್ಲಕ ಕಾರಣಕ್ಕಾಗಿ ಬೀದಿ ಬದಿ ವ್ಯಾಪಾರಿಯೊಬ್ಬರ ಮೇಲೆ ಭೀಕರವಾಗಿ ಹಲ್ಲೆ (Assault) ನಡೆಸಿ ಕೊಲೆ ಮಾಡಿರುವ ಘಟನೆ ಹಾವೇರಿ (Haveri) ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದಲ್ಲಿ ನಡೆದಿದೆ. ಹಲ್ಲೆಯ ತೀವ್ರತೆಗೆ ತುತ್ತಾದ ಬೀದಿ ಬದಿ ವ್ಯಾಪಾರಿ ಶಿವಾಜಿರಾವ್ ಬೈರೋಜಿ (55) ಎಂಬುವವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ರಟ್ಟಿಹಳ್ಳಿ ಪಟ್ಟಣದಲ್ಲಿ ಶಿವಾಜಿರಾವ್ ಅವರು ಮೊಟ್ಟೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಇಂದು ಎಂದಿನಂತೆ ವ್ಯಾಪಾರ ನಡೆಸುತ್ತಿದ್ದಾಗ ಮೊಟ್ಟೆ ಖರೀದಿಸಲು ನಾಲ್ವರು ಯುವಕರ ತಂಡವೊಂದು ಅಂಗಡಿಗೆ ಆಗಮಿಸಿತ್ತು. ಈ ವೇಳೆ ಮೊಟ್ಟೆ ಪಡೆದ ಬಳಿಕ ಹಣ ನೀಡುವಾಗ ವಾಸೀಮ್ ಮುಲ್ಲಾ ಎಂಬ ಯುವಕ “ನಾನು ನಿಮಗೆ 500 ರೂಪಾಯಿ ನೋಟು ಕೊಟ್ಟಿದ್ದೇನೆ” ಎಂದು ಅಂಗಡಿಯಲ್ಲಿದ್ದ ಶಿವಾಜಿರಾವ್ ಮಗ ಭರತ್ ಜೊತೆ ಜಗಳ ತೆಗೆದಿದ್ದಾನೆ. ಆದರೆ ಭರತ್ “ನೀವು ಕೊಟ್ಟಿದ್ದು ಕೇವಲ 100 ರೂಪಾಯಿ ಮಾತ್ರ” ಎಂದು ಸ್ಪಷ್ಟಪಡಿಸಿದ್ದಾನೆ. ಈ ಚಿಲ್ಲರೆ ವಿಚಾರದ ಜಗಳ ವಿಕೋಪಕ್ಕೆ ತಿರುಗಿ ಯುವಕರ ತಂಡ ವ್ಯಾಪಾರಿಯ ಮಗನ ಮೇಲೆ ತಿರುಗಿಬಿದ್ದಿದೆ.
ಮಗನನ್ನು ಬಚಾವ್ ಮಾಡಲು ಬಂದ ತಂದೆಯ ಕೊಲೆ
ಮಗ ಭರತ್‌ನನ್ನು ಯುವಕರು ತಳ್ಳಾಡುತ್ತಿರುವುದನ್ನು ಕಂಡು ಗಲಾಟೆ ಬಿಡಿಸಲು ತಂದೆ ಶಿವಾಜಿರಾವ್ ಬೈರೋಜಿ ಅವರು ಮಧ್ಯಪ್ರವೇಶಿಸಿದ್ದಾರೆ. ಈ ವೇಳೆ ತೀವ್ರ ಆಕ್ರೋಶಗೊಂಡ ಯುವಕರು ಶಿವಾಜಿರಾವ್ ಅವರ ಎದೆಗೆ ಕಾಲಿನಿಂದ ಬಲವಾಗಿ ಒದ್ದು, ಮನಸ್ಸೋಇಚ್ಛೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ. ವೃದ್ಧ ಶಿವಾಜಿರಾವ್ ಅವರ ಎದೆಯ ಭಾಗಕ್ಕೆ ತೀವ್ರ ಏಟು ಬಿದ್ದ ಕಾರಣ ಅವರು ಸ್ಥಳದಲ್ಲೇ ಕುಸಿದು ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ವ್ಯಾಪಾರಿ ಸ್ಥಳದಲ್ಲೇ ಮೃತಪಡುತ್ತಿದ್ದಂತೆ ಹಲ್ಲೆ ನಡೆಸಿದ ನಾಲ್ವರು ಆರೋಪಿಗಳು ಅಲ್ಲಿಂದ ಕಾಲು ಕಿತ್ತಿದ್ದಾರೆ.
ನಾಲ್ವರ ವಿರುದ್ಧ ಪ್ರಕರಣ ದಾಖಲು, ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಭೇಟಿ
ಘಟನೆಯಲ್ಲಿ ಮೃತಪಟ್ಟ ಶಿವಾಜಿರಾವ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಮೃತ ವ್ಯಾಪಾರಿಯ ಮಗ ಭರತ್ ನೀಡಿದ ದೂರಿನನ್ವಯ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ವಾಸೀಮ್ ಮುಲ್ಲಾ, ಸರ್ಪರಾಜ್ ಮುಲ್ಲಾ, ಸಾದಿಕ್ ಮುಲ್ಲಾ ಹಾಗೂ ಶಿರಾಜ್ ಮುಲ್ಲಾ ಎಂಬ ನಾಲ್ವರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಐಜಿ ರವಿಕಾಂತೇಗೌಡ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಯಶೋದಾ ವಂಟಗೋಡಿ ಅವರು ರಟ್ಟಿಹಳ್ಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕೊಲೆಯಿಂದಾಗಿ ರಟ್ಟಿಹಳ್ಳಿ ಪಟ್ಟಣದಲ್ಲಿ ಸದ್ಯ ತೀವ್ರ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಪೊಲೀಸರು ಆರೋಪಿಗಳ ಪತ್ತೆಗಾಗಿ ತೀವ್ರ ಜಾಲ ಬೀಸಿದ್ದಾರೆ.
