Home ದೇಶ ರಾಮನ ದುಡ್ಡು ತಿಂದವರು ಒಂದು ವರ್ಷದೊಳಗೆ ಕ್ಯಾನ್ಸರ್ ಬಂದು ಸಾಯಲಿದ್ದಾರೆ: ಬಿಜೆಪಿ ಶಾಸಕ ಅನಿಲ್ ಸಿಂಗ್

ರಾಮನ ದುಡ್ಡು ತಿಂದವರು ಒಂದು ವರ್ಷದೊಳಗೆ ಕ್ಯಾನ್ಸರ್ ಬಂದು ಸಾಯಲಿದ್ದಾರೆ: ಬಿಜೆಪಿ ಶಾಸಕ ಅನಿಲ್ ಸಿಂಗ್

0

ಉನ್ನಾವೋ (ಉತ್ತರ ಪ್ರದೇಶ): ಅಯೋಧ್ಯೆಯ ರಾಮ ಮಂದಿರದ ದೇಣಿಗೆ ದುರುಪಯೋಗ ಮತ್ತು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವವರು ಕ್ಯಾನ್ಸರ್‌ನಿಂದ ಬಳಲಿ, ಅತ್ಯಂತ ನೋವಿನಿಂದಲೇ ಸಾವನ್ನಪ್ಪುತ್ತಾರೆ ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕರೊಬ್ಬರು ನೀಡಿರುವ ಹೇಳಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿದೆ.

ಉನ್ನಾವೋ ಜಿಲ್ಲೆಯ ಪೂರ್ವಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಸಿಂಗ್ ಭಾನುವಾರ ಮೌರವಾನ್‌ನಲ್ಲಿ ನಡೆದ ಪಕ್ಷದ ಕಾರ್ಯಕ್ರಮವೊಂದರಲ್ಲಿ ಈ ಹೇಳಿಕೆ ನೀಡಿದ್ದಾರೆ.

“ರಾಮನ ದೇವಸ್ಥಾನದಲ್ಲಿ ಕಳ್ಳತನ ಮಾಡಿದವರಿಗೆ ನೇರವಾಗಿ ಕ್ಯಾನ್ಸರ್ ಬರುತ್ತದೆ. ಇದು ದೇವರಿಂದಲೇ ಸಿಗುವ ಮರಣದಂಡನೆಯಾಗಿದೆ. ನೀವು ಕೇವಲ ಒಂದು ವರ್ಷ ಕಾಯಿರಿ, ಈ ಕೃತ್ಯ ಎಸಗಿದವರಿಗೆಲ್ಲಾ ಕ್ಯಾನ್ಸರ್ ಬರುತ್ತದೆ,” ಎಂದು ಅನಿಲ್ ಸಿಂಗ್ ಹೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರವು ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದೆ ಎಂದ ಅವರು, “ಆದರೆ ಭಗವಾನ್ ರಾಮನು ಅವರನ್ನು ತೀವ್ರ ನೋವಿನಿಂದ ಸಾಯುವಂತೆ ಶಿಕ್ಷಿಸುತ್ತಾನೆ. ಅವರ ಮುಂದಿನ ಏಳು ತಲೆಮಾರುಗಳು ಈ ದೇವಾಲಯದ ಕಳ್ಳತನದ ದುಷ್ಪರಿಣಾಮಗಳನ್ನು ನೆನಪಿಸಿಕೊಳ್ಳಲಿವೆ” ಎಂದು ಶಾಪ ಹಾಕಿದ್ದಾರೆ.

ಅಯೋಧ್ಯೆಯ ರಾಮ ಮಂದಿರದಲ್ಲಿ ದೇಣಿಗೆ ಹಣ ಕಳ್ಳತನವಾಗಿದೆ ಎಂಬ ಆರೋಪವು ಸದ್ಯ ಉತ್ತರ ಪ್ರದೇಶ ರಾಜಕೀಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ದೇಣಿಗೆ ದುರುಪಯೋಗದ ಆರೋಪಗಳು ಕೇಳಿಬಂದ ತಕ್ಷಣ, ದೇವಾಲಯ ಟ್ರಸ್ಟ್‌ನ ಕೋರಿಕೆಯ ಮೇರೆಗೆ ಉತ್ತರ ಪ್ರದೇಶ ಸರ್ಕಾರವು ಜೂನ್ 13 ರಂದು ವಿಶೇಷ ತನಿಖಾ ತಂಡವನ್ನು (SIT) ರಚಿಸಿತ್ತು.

ಎಸ್‌ಐಟಿ ನಡೆಸಿದ ಪ್ರಾಥಮಿಕ ತನಿಖೆಯ ವರದಿ ಆಧಾರದ ಮೇಲೆ ಪೊಲೀಸರು ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವ್ ಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮ್ ಶಂಕರ್ ಮಿಶ್ರಾ, ಸುಭಾಷ್ ಶ್ರೀವಾಸ್ತವ ಮತ್ತು ರಾಮಶಂಕರ್ ಅಲಿಯಾಸ್ ಟಿನ್ನು ಯಾದವ್ ಸೇರಿದಂತೆ ಎಂಟು ಜನರನ್ನು ಈಗಾಗಲೇ ಬಂಧಿಸಿದ್ದಾರೆ.

ಆದಾಗ್ಯೂ, ಈ ಪ್ರಕರಣದಲ್ಲಿ ಕೇವಲ ಸಣ್ಣಪುಟ್ಟ ವ್ಯಕ್ತಿಗಳ ಮೇಲೆ ಮಾತ್ರ ಕ್ರಮ ಕೈಗೊಳ್ಳಲಾಗುತ್ತಿದ್ದು, ಹಗರಣದ ಮುಖ್ಯ ಸೂತ್ರಧಾರರು ಮತ್ತು ಪ್ರಮುಖ ಅಪರಾಧಿಗಳು ಇನ್ನೂ ಮುಕ್ತವಾಗಿ ಓಡಾಡುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ.

ಇದೇ ಕಾರ್ಯಕ್ರಮದಲ್ಲಿ ಸಮಾಜವಾದಿ ಪಕ್ಷವನ್ನು (SP) ತೀವ್ರವಾಗಿ ಗುರಿಯಾಗಿಸಿಕೊಂಡ ಶಾಸಕ ಸಿಂಗ್, ಎಸ್‌ಪಿ ನಾಯಕರು ಬಡವರ ಭೂಮಿಯನ್ನು ಕಬಳಿಸುವಲ್ಲಿ, ನಿರ್ಗತಿಕರಿಗೆ ಮೀಸಲಾದ ಪಡಿತರವನ್ನು ಕದ್ದು ಮಾರಾಟ ಮಾಡುವಲ್ಲಿ ಮತ್ತು ಅವರ ಹಕ್ಕುಗಳನ್ನು ಕಸಿದುಕೊಳ್ಳುವಲ್ಲಿ ನಿರತರಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಈಗಾಗಲೇ ಸಿಬಿಐ (CBI) ತನಿಖೆಯನ್ನು ಎದುರಿಸುತ್ತಿದ್ದಾರೆ ಮತ್ತು ತಮ್ಮ ರಾಜಕೀಯ ಲಾಭಕ್ಕಾಗಿ ಈಗ ‘ಭಗವಾನ್ ರಾಮನ ಹೆಸರನ್ನು ಅನಗತ್ಯವಾಗಿ ಎಳೆದು ತರುತ್ತಿದ್ದಾರೆ’ ಎಂದು ಅನಿಲ್ ಸಿಂಗ್ ಕಿಡಿಕಾರಿದ್ದಾರೆ.

You cannot copy content of this page

Exit mobile version