Home ಅಪರಾಧ ಪ್ರಜ್ವಲ್ ರೇವಣ್ಣ ಬಳಿ ವಶಕ್ಕೆ ಪಡೆದ ಮೊಬೈಲ್, ಪೆನ್‌ಡ್ರೈವ್‌ನಲ್ಲೂ ಅಶ್ಲೀಲ ವಿಡಿಯೋ ಪತ್ತೆ,

ಪ್ರಜ್ವಲ್ ರೇವಣ್ಣ ಬಳಿ ವಶಕ್ಕೆ ಪಡೆದ ಮೊಬೈಲ್, ಪೆನ್‌ಡ್ರೈವ್‌ನಲ್ಲೂ ಅಶ್ಲೀಲ ವಿಡಿಯೋ ಪತ್ತೆ,

0

ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಇರಿಸಲಾಗಿರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಿಸಿಬಿ ಪೊಲೀಸರು ನಡೆಸಿದ ದಾಳಿಯಲ್ಲಿ ಮೊಬೈಲ್ ಫೋನ್ ಹಾಗೂ ಪೆನ್‌ಡ್ರೈವ್ ಪತ್ತೆಯಾಗಿರುವ ಪ್ರಕರಣ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಕಾರಾಗೃಹದ ವಿಐಪಿ ಸೆಲ್‌ನಲ್ಲಿ ತಪಾಸಣೆ ನಡೆಸಿದ ವೇಳೆ ನೀಲಿ ಬಣ್ಣದ ರೆಡ್ಮಿ 5G ಮೊಬೈಲ್, ಚಾರ್ಜರ್, ನೀಲಿ ಬಣ್ಣದ ಪಾಕೆಟ್ ನೋಟ್‌ಬುಕ್ ಹಾಗೂ ಕಪ್ಪು ಬಣ್ಣದ ಸ್ಯಾಂಡಿಸ್ಕ್ ಪೆನ್‌ಡ್ರೈವ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಪತ್ತೆಯಾದ ಮೊಬೈಲ್ ಹಾಗೂ ಪೆನ್‌ಡ್ರೈವ್‌ ಪರಿಶೀಲನೆ ನಡೆಸಿದಾಗ ಅಶ್ಲೀಲ ವಿಡಿಯೋಗಳು ಹಾಗೂ ಯುವತಿಯರ ಅಶ್ಲೀಲ ಚಿತ್ರಗಳಿದ್ದವು ಎನ್ನಲಾಗಿದ್ದು, ಈ ಅಂಶ ಕಾರಾಗೃಹ ಅಧಿಕಾರಿಗಳನ್ನೇ ಬೆಚ್ಚಿಬೀಳಿಸಿದೆ. ಮೊಬೈಲ್‌ನಲ್ಲಿ ಕೆಲ ಆಡಿಯೋ ಸಂಭಾಷಣೆಗಳೂ ಪತ್ತೆಯಾಗಿದ್ದು, ಅಪರಿಚಿತ ವ್ಯಕ್ತಿಯೊಂದಿಗೆ ನಡೆದಿರುವ ಮಾತುಕತೆಗಳು ತನಿಖಾಧಿಕಾರಿಗಳ ಗಮನ ಸೆಳೆದಿವೆ.

ಮೊಬೈಲ್ ಕೊಟ್ಟವರು ಯಾರು?
ಜೈಲಿನೊಳಗೆ ಮೊಬೈಲ್ ಹಾಗೂ ಪೆನ್‌ಡ್ರೈವ್‌ ಹೇಗೆ ಪ್ರವೇಶಿಸಿತು ಮತ್ತು ಅವುಗಳನ್ನು ಪ್ರಜ್ವಲ್ ರೇವಣ್ಣ ಅವರಿಗೆ ಯಾರು ಒದಗಿಸಿದರು ಎಂಬುದು ಇದೀಗ ಪ್ರಮುಖ ಪ್ರಶ್ನೆಯಾಗಿದೆ. ಈ ಕುರಿತು ವಿಚಾರಣೆ ನಡೆಸಿದಾಗಲೂ ಪ್ರಜ್ವಲ್ ರೇವಣ್ಣ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ ಎನ್ನಲಾಗಿದೆ.

ಕಳೆದ ಆಗಸ್ಟ್ 6ರಂದು ಜೈಲಾಧಿಕಾರಿಗಳು ನಡೆಸಿದ್ದ ತಪಾಸಣೆಯಲ್ಲಿ ಮೊಬೈಲ್ ಪತ್ತೆಯಾಗಿರಲಿಲ್ಲ. ಇದೀಗ ಮತ್ತೆ ನಡೆಸಿದ ತಪಾಸಣೆಯಲ್ಲಿ ಮೊಬೈಲ್ ಹಾಗೂ ಪೆನ್‌ಡ್ರೈವ್ ಪತ್ತೆಯಾಗಿರುವುದು ಕಾರಾಗೃಹ ಭದ್ರತಾ ವ್ಯವಸ್ಥೆಯ ಬಗ್ಗೆಯೇ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ವಿಐಪಿ ಸೆಲ್‌ನಿಂದ ಸಾಮಾನ್ಯ ಸೆಲ್‌ಗೆ
ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ವಿಐಪಿ ಸೆಲ್‌ನಿಂದ ಸಾಮಾನ್ಯ ಸಜಾ ಬಂಧಿಗಳ ಸೆಲ್‌ಗೆ ಸ್ಥಳಾಂತರಿಸಲಾಗಿದೆ.

ವಿಐಪಿ ಸೆಲ್‌ನಲ್ಲಿ ಪ್ರಜ್ವಲ್ ರೇವಣ್ಣ ಅವರೊಂದಿಗೆ ಮತ್ತೊಬ್ಬ ವಿಚಾರಣಾಧೀನ ಕೈದಿ ಪ್ರತಾಪ್ ರಾಯ್ ಇದ್ದರು ಎನ್ನಲಾಗಿದೆ. ಇದೀಗ ಪ್ರಜ್ವಲ್ ಅವರನ್ನು ಸುಮಾರು 20 ಮಂದಿ ಕೈದಿಗಳಿರುವ ಸಾಮಾನ್ಯ ಸೆಲ್‌ಗೆ ಸ್ಥಳಾಂತರಿಸಲಾಗಿದ್ದು, ಕಡ್ಡಾಯ ಜೈಲು ಸಮವಸ್ತ್ರ ಧರಿಸುವಂತೆ ಸೂಚಿಸಲಾಗಿದೆ.

ಅಲ್ಲದೆ, ಜೈಲಿನ ನಿಯಮಾನುಸಾರ ಲೈಬ್ರರಿ ಕೆಲಸ ನಿರ್ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ ಎನ್ನಲಾಗಿದೆ.

ಜೈಲು ಅಧಿಕಾರಿಗಳಿಗೆ ನೋಟಿಸ್
ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆಯಾದ ಹಿನ್ನೆಲೆಯಲ್ಲಿ ಕಾರಾಗೃಹ ಇಲಾಖೆಯಲ್ಲೂ ಕ್ರಮಕ್ಕೆ ಚಾಲನೆ ನೀಡಲಾಗಿದೆ. ಕರ್ತವ್ಯ ಲೋಪದ ಆರೋಪದ ಹಿನ್ನೆಲೆಯಲ್ಲಿ ಜೈಲಿನ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಈರಣ್ಣ ರಂಗಾಪುರ ಅವರನ್ನು ಅಮಾನತುಗೊಳಿಸಲಾಗಿದೆ.
ಇದೇ ವೇಳೆ ಜೈಲು ಎಸ್‌ಪಿ ಅನ್ಶುಕುಮಾರ್ ಅವರಿಗೂ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಡಿಜಿಪಿ ಅಲೋಕ್ ಕುಮಾರ್ ನೋಟಿಸ್ ಜಾರಿ ಮಾಡಿ, ಕರ್ತವ್ಯ ಲೋಪಕ್ಕೆ ಕಾರಣ ನೀಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ಜೈಲಿನೊಳಗೆ ಮೊಬೈಲ್ ಹಾಗೂ ಪೆನ್‌ಡ್ರೈವ್‌ ಪ್ರವೇಶಿಸಿದ ಪ್ರಕರಣದ ಹಿಂದೆ ಯಾರಿದ್ದಾರೆ? ಅವುಗಳನ್ನು ಪ್ರಜ್ವಲ್ ರೇವಣ್ಣ ಅವರಿಗೆ ತಲುಪಿಸಿದವರು ಯಾರು? ಪತ್ತೆಯಾದ ಡಿಜಿಟಲ್ ಸಾಧನಗಳಲ್ಲಿ ನಿಜಕ್ಕೂ ಯಾವೆಲ್ಲ ಮಾಹಿತಿ ಇದೆ? ಎಂಬುದರ ಕುರಿತು ತನಿಖೆ ಮುಂದುವರಿದಿದೆ.

You cannot copy content of this page

Exit mobile version