ಭೋಪಾಲ್: ಗೋ ಕಳ್ಳಸಾಗಣೆ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ಹತ್ಯೆ ಪ್ರಕರಣದಲ್ಲಿ ಏಳು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಬಳಿಕ, ಮಧ್ಯಪ್ರದೇಶದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ತಬಸ್ಸುಮ್ ಖಾನ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಆಧಾರಿತ ದ್ವೇಷ ಅಭಿಯಾನ ನಡೆಸಲಾಗುತ್ತಿರುವ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ನರ್ಮದಾಪುರಂ ಜಿಲ್ಲೆಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆಯಾಗಿರುವ ತಬಸ್ಸುಮ್ ಖಾನ್ ಅವರು, 2022ರಲ್ಲಿ ಟ್ರಕ್ ಚಾಲಕ ಶೇಖ್ ಲಾಲಾ ನಝೀರ್ ಅಹ್ಮದ್ ಹತ್ಯೆ ಪ್ರಕರಣದಲ್ಲಿ ಏಳು ಮಂದಿಯನ್ನು ತಪ್ಪಿತಸ್ಥರೆಂದು ಘೋಷಿಸಿ ಇತ್ತೀಚೆಗೆ ಜೀವಾವಧಿ ಶಿಕ್ಷೆ ವಿಧಿಸಿದ್ದರು. ತೀರ್ಪು ಹೊರಬಿದ್ದ ಬೆನ್ನಲ್ಲೇ ಶಿಕ್ಷೆಗೆ ಗುರಿಯಾದವರ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದು, ಅಪರಾಧಿಗಳನ್ನು ಜೈಲಿಗೆ ಕರೆದೊಯ್ಯುತ್ತಿದ್ದ ಪೊಲೀಸ್ ವಾಹನವನ್ನು ತಡೆಯಲು ಯತ್ನಿಸಿದ್ದರೆಂದು ವರದಿಯಾಗಿದೆ.
ತೀರ್ಪಿನ ಬಳಿಕ ನ್ಯಾಯಾಧೀಶೆಯ ಧಾರ್ಮಿಕ ಗುರುತನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಡಿಯೊಗಳು ಮತ್ತು ಪೋಸ್ಟ್‌ಗಳು ವೈರಲ್ ಆಗಿವೆ. ಈ ಹಿನ್ನೆಲೆಯಲ್ಲಿ ಸಿಯೋನಿ ಮಾಲ್ವಾ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿದ್ದಾರೆ.
ವೈರಲ್ ಆಗಿರುವ ವಿಡಿಯೊವೊಂದರಲ್ಲಿ ಗುಜರಾತ್ ಮೂಲದ ವಿಶಾಲ್ ಸಿಂಗ್ ಎಂದು ಗುರುತಿಸಲಾದ ವ್ಯಕ್ತಿಯೊಬ್ಬರು ನ್ಯಾಯಾಧೀಶೆಯ ವಿರುದ್ಧ ಅವಹೇಳನಕಾರಿ ಹಾಗೂ ಕೋಮು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿರುವುದು ಕಂಡುಬಂದಿದೆ. ಅಲ್ಲದೆ, ಶಿಕ್ಷೆಗೆ ಗುರಿಯಾದವರನ್ನು 10 ದಿನಗಳೊಳಗೆ ಬಿಡುಗಡೆ ಮಾಡುವಂತೆ ಒತ್ತಾಯಿಸಿರುವುದಾಗಿ ವರದಿಯಾಗಿದೆ.
ಇನ್ನೊಂದು ವಿಡಿಯೊದಲ್ಲಿ ಪಂಜಾಬ್‌ನ ಮೊಹಾಲಿ ಮೂಲದವರು ಎಂದು ಹೇಳಲಾಗುತ್ತಿರುವ ಕೆಲವರು ನ್ಯಾಯಾಧೀಶೆಯ ಪ್ರತಿಕೃತಿಯನ್ನು ದಹಿಸಿ, ಶಿಕ್ಷೆಗೆ ಗುರಿಯಾದವರ ಬಿಡುಗಡೆಗೆ ಆಗ್ರಹಿಸಿರುವ ದೃಶ್ಯಗಳು ಕಾಣಿಸಿಕೊಂಡಿವೆ. ‘ಹಿಂದೂನೇಷನ್’ ಹೆಸರಿನ ಎಕ್ಸ್ ಖಾತೆಯೊಂದರಲ್ಲಿ ನ್ಯಾಯಾಧೀಶೆ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪ ಮಾಡಲಾಗಿದ್ದು, ಅವರನ್ನು ಅಮಾನತುಗೊಳಿಸುವಂತೆ ಹಾಗೂ ತೀರ್ಪುಗಳನ್ನು ಮರುಪರಿಶೀಲಿಸುವಂತೆ ಒತ್ತಾಯಿಸಲಾಗಿದೆ.
ಈ ಬೆಳವಣಿಗೆಗೆ ಕಾನೂನು ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಸಿಯೋನಿ ಮಾಲ್ವಾ ಪ್ರದೇಶದ ವಕೀಲರು ಸೇರಿದಂತೆ ಹಲವರು, ನ್ಯಾಯಾಂಗ ಅಧಿಕಾರಿಯ ವಿರುದ್ಧ ನಡೆಯುತ್ತಿರುವ ಆನ್‌ಲೈನ್ ಕಿರುಕುಳವನ್ನು ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ರಾಜ್ಯಸಭಾ ಸದಸ್ಯ ಹಾಗೂ ಕಾಂಗ್ರೆಸ್ ನಾಯಕ ಪವನ್ ಖೇರಾ ಪ್ರತಿಕ್ರಿಯಿಸಿ, “ಪ್ರಕರಣದ ಅಪರಾಧಿಗಳನ್ನು ಅವರ ಧರ್ಮದ ಆಧಾರದ ಮೇಲೆ ಶಿಕ್ಷಿಸಲಾಗಿಲ್ಲ. ತನಿಖೆ ಮತ್ತು ಸಾಕ್ಷ್ಯಾಧಾರಗಳ ಆಧಾರದ ಮೇಲೆ ಅವರು ಕೊಲೆ ಸೇರಿದಂತೆ ಹಲವು ಅಪರಾಧಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದ್ದರಿಂದ ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಧೀಶೆ ಮುಸ್ಲಿಂ ಮಹಿಳೆ ಎಂಬ ಕಾರಣಕ್ಕೆ ಅವರನ್ನು ಗುರಿಯಾಗಿಸಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.
ಹಿರಿಯ ವಕೀಲ ವಿವೇಕ್ ಥಂಖಾ ಕೂಡ ಘಟನೆಯನ್ನು ಖಂಡಿಸಿ, “ಕಾನೂನಿನ ಆಡಳಿತವನ್ನು ಎತ್ತಿಹಿಡಿಯುವ ನ್ಯಾಯಾಧೀಶರನ್ನು ರಕ್ಷಿಸುವುದು ಸಮಾಜ ಮತ್ತು ಸರ್ಕಾರದ ಜವಾಬ್ದಾರಿ. ವಿಶೇಷವಾಗಿ ಕೆಳ ಹಂತದ ನ್ಯಾಯಾಂಗ ಅಧಿಕಾರಿಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.
ಹತ್ಯೆ ಪ್ರಕರಣದ ಹಿನ್ನೆಲೆ
2022ರ ಆಗಸ್ಟ್ 2 ಮತ್ತು 3ರ ಮಧ್ಯರಾತ್ರಿ ಈ ಘಟನೆ ನಡೆದಿತ್ತು. ಮಧ್ಯಪ್ರದೇಶದ ನರ್ಡರ್ವಾಡಾದಿಂದ ಮಹಾರಾಷ್ಟ್ರಕ್ಕೆ ಜಾನುವಾರುಗಳನ್ನು ಸಾಗಿಸುತ್ತಿದ್ದ ಶೇಖ್ ಲಾಲಾ ನಝೀರ್ ಅಹ್ಮದ್ ಮತ್ತು ಶೇಖ್ ಮುಷ್ತಾಕ್ ಅವರನ್ನು ಸಿಯೋನಿ ಮಾಲ್ವಾ ತಾಲೂಕಿನ ಬರಾಖಂಡ್ ಗ್ರಾಮದ ಬಳಿ ಕೆಲವರು ತಡೆದಿದ್ದರು. ಬಳಿಕ ಗುಂಪೊಂದು ಲಾಠಿ ಮತ್ತು ಮರದ ಕೋಲುಗಳಿಂದ ಹಲ್ಲೆ ನಡೆಸಿದ್ದು, ನಝೀರ್ ಅಹ್ಮದ್ ಸ್ಥಳದಲ್ಲೇ ಮೃತಪಟ್ಟಿದ್ದರು. ಶೇಖ್ ಮುಷ್ತಾಕ್ ಗಾಯಗೊಂಡು ಬದುಕುಳಿದಿದ್ದರು. ಈ ಪ್ರಕರಣದಲ್ಲೇ ಇದೀಗ ಏಳು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಅದರ ಬಳಿಕ ನ್ಯಾಯಾಧೀಶೆಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಅಭಿಯಾನ ಆರಂಭವಾಗಿದೆ.
