ಪೆಟ್ರೋಲ್‌ನಲ್ಲಿ ಶೇಕಡಾ 20 ರಷ್ಟು ಎಥನಾಲ್ ಮಿಶ್ರಣ ಮಾಡುವ ಪ್ರಕ್ರಿಯೆಯು ಇನ್ನೂ ಪ್ರಾಯೋಗಿಕ ಹಂತದಲ್ಲೇ ಇದ್ದು, ಇದರ ಸಂಪೂರ್ಣ ಫಲಿತಾಂಶಗಳು ಮುಂದಿನ ವರ್ಷದ ವೇಳೆಗೆ ಹೆಚ್ಚು ಸ್ಪಷ್ಟವಾಗಲಿವೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಎಥನಾಲ್ ಮಿಶ್ರಣದ ಕುರಿತು ದೇಶಾದ್ಯಂತ ವ್ಯಾಪಕ ಚರ್ಚೆ ಮತ್ತು ಆತಂಕಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಸ್ಪಷ್ಟನೆ ನೀಡಿದೆ. ಪೆಟ್ರೋಲ್‌ನಲ್ಲಿ ಹೆಚ್ಚಿನ ಪ್ರಮಾಣದ ಎಥನಾಲ್ ಮಿಶ್ರಣ ಮಾಡುವುದರಿಂದ ಹಳೆಯ ವಾಹನಗಳ ಎಂಜಿನ್‌ಗಳು ಹಾನಿಗೊಳಗಾಗುತ್ತವೆ ಮತ್ತು ಇಂಧನ ದಕ್ಷತೆ (ಮೈಲೇಜ್) ಕಡಿಮೆಯಾಗುತ್ತದೆ ಎಂದು ಹಲವರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಈ20 (E20) ಪೆಟ್ರೋಲ್ ಬಳಕೆಯಿಂದ ವಾಹನಗಳಿಗೆ ಯಾವುದೇ ತಾಂತ್ರಿಕ ಹಾನಿಯಾಗುತ್ತಿದೆ ಎಂಬುದಕ್ಕೆ ಬಲವಾದ ಪುರಾವೆಗಳಿಲ್ಲ ಎಂದು ಸರ್ಕಾರ ಪ್ರತಿಪಾದಿಸಿದೆ. ಅಲ್ಲದೆ, ಈ ನೀತಿಯು ಭಾರತದ ಇಂಧನ ಭದ್ರತೆ, ಪರಿಸರ ಮತ್ತು ರೈತರಿಗೆ ಒಟ್ಟಾರೆಯಾಗಿ ಪ್ರಯೋಜನಕಾರಿಯಾಗಿದೆ ಎಂದು ಕೋರ್ಟ್‌ಗೆ ವಿವರಿಸಿದೆ.
2025-26ರ ಪೂರೈಕೆ ವರ್ಷಕ್ಕೆ ಸಂಬಂಧಿಸಿದಂತೆ ಎಥನಾಲ್ ಹಂಚಿಕೆ ಕುರಿತು ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಾರ್ವಜನಿಕ ವಲಯದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ಟೆಂಡರ್ ಪ್ರಕ್ರಿಯೆ ಅಂತಿಮಗೊಳ್ಳುವ ಮುನ್ನವೇ ತಮಗೆ ಎಥನಾಲ್ ಹಂಚಿಕೆಯನ್ನು ಹೆಚ್ಚಿಸಬೇಕೆಂಬ ಡಿಸ್ಟಿಲರಿಯೊಂದರ ಮನವಿಯನ್ನು ಪರಿಶೀಲಿಸುವಂತೆ ಜೂನ್ 23 ರ ತನ್ನ ಆದೇಶದಲ್ಲಿ ಹೈಕೋರ್ಟ್ ತೈಲ ಮಾರುಕಟ್ಟೆ ಕಂಪನಿಗಳಾದ ಬಿಪಿಸಿಎಲ್, ಎಚ್‌ಪಿಸಿಎಲ್ ಮತ್ತು ಐಒಸಿಎಲ್‌ಗೆ ಸೂಚಿಸಿತ್ತು.
ಹೈಕೋರ್ಟ್‌ನ ಈ ಆದೇಶವು ದೇಶಾದ್ಯಂತ ಜಾರಿಯಲ್ಲಿರುವ ಈ-20 ಪೆಟ್ರೋಲ್ ಯೋಜನೆಯ ಮೇಲೆ ವ್ಯಾಪಕ ಪರಿಣಾಮ ಬೀರಬಹುದು ಎಂದು ಬಿಪಿಸಿಎಲ್ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಕೇಂದ್ರ ಸರ್ಕಾರದ ಪರವಾಗಿ ಹಾಜರಾಗಿದ್ದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು ವಾದ ಮಂಡಿಸಿ, ಎಥನಾಲ್ ಹಂಚಿಕೆ ಪ್ರಕ್ರಿಯೆಯು 2025 ರ ಅಕ್ಟೋಬರ್‌ನಲ್ಲೇ ಪೂರ್ಣಗೊಂಡಿದೆ. ಈಗ ವೈಯಕ್ತಿಕ ಬೇಡಿಕೆಗಳಿಗಾಗಿ ಹಂಚಿಕೆಯನ್ನು ಪುನಃ ಪರಿಶೀಲಿಸಲು ಹೋದರೆ ಅದು ಇಡೀ ರಾಷ್ಟ್ರೀಯ ಯೋಜನೆಗೆ ಅಡ್ಡಿಪಡಿಸಲಿದೆ ಎಂದು ಎಚ್ಚರಿಸಿದ್ದಾರೆ.
