ಮೋದಿ ಸಂಪುಟದಲ್ಲಿ 7 ವರ್ಷಗಳ ಕಾಲ ಸಚಿವರಾಗಿ ಹಾಗೂ ಗೃಹ ಮತ್ತು ರಕ್ಷಣೆ ಸಚಿವಾಲಯಗಳಲ್ಲಿ ಸುಮಾರು 15 ವರ್ಷಗಳ ಕಾಲ ಸೇವೆ ಸಲ್ಲಿಸಿದ ಆರ್.ಕೆ. ಸಿಂಗ್ ಅವರೇ ಲಡಾಖ್ ನಂತರ ಈಗ ಅರುಣಾಚಲ ಪ್ರದೇಶದಲ್ಲೂ ಚೀನಾ ಭಾರತದ ಗಡಿಯೊಳಗೆ ನುಗ್ಗಿ ಭೂಮಿಯನ್ನು ವಶಪಡಿಸಿಕೊಳ್ಳುತ್ತಿದೆ ಎಂದು ಹೇಳುತ್ತಿರುವಾಗ, ಮೋದಿ ಸರ್ಕಾರ ಏಕೆ ಮೌನವಾಗಿದೆ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಪ್ರಶ್ನಿಸಿದ್ದಾರೆ. ಸತ್ಯವನ್ನು ತಿಳಿಯುವ ಪೂರ್ಣ ಹಕ್ಕು ದೇಶಕ್ಕಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ನಮ್ಮ ಯೋಧರ ಶೌರ್ಯ, ಸಾಮರ್ಥ್ಯ ಮತ್ತು ಸಂಕಲ್ಪದ ಮೇಲೆ ಸಂಪೂರ್ಣ ನಂಬಿಕೆಯಿದೆ ಎಂದಿರುವ ಅವರು, ಭಾರತೀಯ ಸೇನೆಯ ಕೈಗಳನ್ನು ಕಟ್ಟಿಹಾಕಿರುವ ಮೋದಿ ಸರ್ಕಾರದ ನೀತಿ, ನಿಯತ್ತು ಮತ್ತು ಹೊಣೆಗಾರಿಕೆಯನ್ನಷ್ಟೇ ತಾವು ಪ್ರಶ್ನಿಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಕೇಂದ್ರ ಸರ್ಕಾರವನ್ನು ನೇರವಾಗಿ ಪ್ರಶ್ನಿಸಿರುವ ಸುರ್ಜೇವಾಲಾ, ಕೆಳಗಿನ ಪ್ರಮುಖ ವಿಷಯಗಳಿಗೆ ಸ್ಪಷ್ಟನೆ ಕೋರಿದ್ದಾರೆ:
- ಅರುಣಾಚಲ ಪ್ರದೇಶದ ತಕ್ಸಿಂಗ್ ಬಳಿ ಪಿಎಲ್‌ಎ (PLA) ಭಾರತೀಯ ಪ್ರದೇಶದಲ್ಲಿ ಮುನ್ನುಗ್ಗಿ ಕ್ಯಾಂಪ್‌ಗಳನ್ನು ನಿರ್ಮಿಸುತ್ತಿದೆಯೇ? ಸ್ಥಳೀಯರ ಸಾಂಪ್ರದಾಯಿಕ ಮೇಯಿಸುವಿಕೆ ಮತ್ತು ಬೇಟೆಯಾಡುವ ಪ್ರದೇಶಗಳಿಗೆ ಪ್ರವೇಶ ಕಡಿಮೆಯಾಗುತ್ತಿದೆಯೇ?
- ಭಾರತ ನಿಗದಿಪಡಿಸಿದ್ದ ಗಸ್ತು ಪಾಯಿಂಟ್ ‘ಶೇರಾ 5’ ರಲ್ಲಿ 2023 ರ ಚೀನಾ ಜಟಾಪಟಿಯ ನಂತರ ಭಾರತೀಯ ಸೇನೆಯ ನಿಯಮಿತ ಗಸ್ತು ಪ್ರಕ್ರಿಯೆ ಮರುಸ್ಥಾಪನೆಯಾಗಿದೆಯೇ?
- ನಹಾ ಮತ್ತು ಮಾರಾ ಸಮುದಾಯಗಳು ತಲೆತಲಾಂತರದಿಂದ ಬೇಟೆಯಾಡುತ್ತಿದ್ದ ‘ನಾಂಗಾ ಪಹಾಡ್’ ಪ್ರದೇಶದಿಂದ ಸ್ಥಳೀಯರನ್ನು ದೂರವಿಡಲಾಗಿದೆಯೇ? ಇದು ಪಿಎಲ್‌ಎ ಮುನ್ನುಗ್ಗಲು ಕಾರಣವಾಯಿತೇ?
- ಈ ಭಾಗದಲ್ಲಿ ಭಾರತೀಯ ಸೇನೆಯ ಗಸ್ತು ಕೇವಲ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ಮಾತ್ರ ಸೀಮಿತವಾಗಿದ್ದು, ಚೀನಾ ವರ್ಷಪೂರ್ತಿ ಸಕ್ರಿಯವಾಗಿರುವುದನ್ನು ತಡೆಯಲು ಸರ್ಕಾರ ಏನು ಮಾಡಿದೆ?
- ಜೂನ್ 2026 ರಲ್ಲಿ ಗಡಿ ಭಾಗದ ಜನರು ತಮ್ಮ ಭೂಮಿ ಉಳಿಸಿಕೊಡುವಂತೆ ಮನವಿ ಮಾಡುತ್ತಿದ್ದಾಗ, ಜೂನ್ 28 ರಂದು ಚೀನಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಕ್ಸಿನ್ಹುವಾ (Xinhua) ಜೊತೆ ಮಾತುಕತೆ ನಡೆಸುತ್ತಿದ್ದುದು ಏಕೆ?
- 2017 ರಿಂದ ಅರುಣಾಚಲ ಪ್ರದೇಶದ 112 ಸ್ಥಳಗಳ ಹೆಸರು ಬದಲಾಯಿಸಲು ಯತ್ನಿಸಿದ ಹಾಗೂ 2022 ರಲ್ಲಿ ತವಾಂಗ್‌ನಲ್ಲಿ ಯಥಾಸ್ಥಿತಿ ಬದಲಿಸಲು ಯತ್ನಿಸಿದ ಚೀನಾದ ಎದುರು, ಮೇ 2020 ಕ್ಕಿಂತ ಮೊದಲಿಗಿದ್ದ ಪರಿಸ್ಥಿತಿ ಮರುಸ್ಥಾಪನೆಯಾಗಿದೆಯೇ ಇಲ್ಲವೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿಲ್ಲವೇಕೆ?
- ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೇಮಾ ಖಂಡು ಯಾವುದೇ ಅತಿಕ್ರಮಣವಾಗಿಲ್ಲ ಎನ್ನುತ್ತಿದ್ದರೂ, ಸ್ಥಳೀಯರು ಮತ್ತು ಮಾಜಿ ಹಿರಿಯ ಸಚಿವರೇ ಇಂತಹ ಗಂಭೀರ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಹೀಗಿರುವಾಗ ನೈಜ ಸತ್ಯವೇನು?
- 2020 ರ ಗಲ್ವಾನ್ ಘಟನೆಯ ನಂತರ “ಯಾರೂ ನಮ್ಮ ಗಡಿಯೊಳಗೆ ನುಗ್ಗಿಲ್ಲ” ಎಂದು ಪ್ರಧಾನಿ ಮೋದಿ ಚೀನಾಕ್ಕೆ ನೀಡಿದ್ದ ‘ಕ್ಲೀನ್ ಚಿಟ್’ ಹೇಳಿಕೆಯನ್ನೇ ಈಗ ಅವರದೇ ಮಾಜಿ ಸಚಿವರ ಆರೋಪಗಳು ಪ್ರಶ್ನಿಸುವಂತೆ ಮಾಡಿವೆ.
ಒಂದೆಡೆ ಚೀನಾದ ಹೂಡಿಕೆಗೆ ಕೆಂಪು ರತ್ನಗಂಬಳಿ ಹಾಸುತ್ತಾ, ಇನ್ನೊಂದೆಡೆ ನಮ್ಮ ಗಡಿ ಹಾಗೂ ಗಸ್ತು ಪಾಯಿಂಟ್‌ಗಳ ಮೇಲಿನ ಚೀನಾದ ಹಿಡಿತವನ್ನು ನಿರ್ಲಕ್ಷಿಸಲಾಗುತ್ತಿದೆಯೇ? ಚೀನಾದ ವಿರುದ್ಧ ಮೋದಿ ಸರ್ಕಾರದ ನಿಜವಾದ ನೀತಿಯೇನು ಎಂಬುದನ್ನು ದೇಶಕ್ಕೆ ಸ್ಪಷ್ಟಪಡಿಸಬೇಕು ಎಂದು ಸುರ್ಜೇವಾಲಾ ಆಗ್ರಹಿಸಿದ್ದಾರೆ.
