ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಾಂದ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ತಮ್ಮ ಹೆಸರು ಮತದಾರರ ಪಟ್ಟಿಯಿಂದ ತೆಗೆದುಹಾಕಲ್ಪಟ್ಟಿದೆ (ಡಿಲೀಟ್) ಎಂದು ಆರೋಪಿಸಿ ಬಿಸಿ ವಾತಾವರಣ ಸೃಷ್ಟಿಸಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್, ಇದೀಗ ಬಿಬಿಎಂಪಿ ಮತ್ತು ಚುನಾವಣಾ ಆಯೋಗದ ವಿರುದ್ಧ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ತಮ್ಮ ಮೊದಲ ವಿಡಿಯೋ ಕೋಟ್ಯಂತರ ಜನರನ್ನು ತಲುಪಿದ ಕೆಲವೇ ಗಂಟೆಗಳಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು ತಮಗೆ ಕರೆ ಮಾಡಿ, “ತಪ್ಪಾಗಿದೆ, ಸರಿಪಡಿಸುತ್ತೇವೆ. ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿ” ಎಂದು ವಿನಂತಿಸಿದ್ದರು. ಆದರೆ, ಸಂಜೆಯ ವೇಳೆಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿ, ತಮ್ಮ ವೆಬ್‌ಸೈಟ್‌ನಲ್ಲಿ ‘ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ’ (Permanently Shifted) ಎಂಬುದನ್ನು ಬದಲಾಯಿಸಿ ಕೇವಲ ‘ಸ್ಥಳಾಂತರಗೊಂಡಿದ್ದಾರೆ’ (Shifted) ಎಂದು ತಿದ್ದುಪಡಿ ಮಾಡಿ ‘ಮಹಜರು ನಡೆಸಲಾಗಿದೆ’ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಪ್ರಕಾಶ್ ರಾಜ್ ವಾಗ್ದಾಳಿ ನಡೆಸಿದ್ದಾರೆ.
“ಆಡಳಿತ ಯಂತ್ರವು ವಿಷಯ ಕೈಮೀರಿ ಹೋದ ನಂತರ ರಾತ್ರಿ 8:30 ಕ್ಕೆ ಬಿಎಲ್‌ಒ (BLO) ಅವರನ್ನು ಹಳೆಯ ವಿಳಾಸಕ್ಕೆ ಕ್ಯಾಮೆರಾದೊಂದಿಗೆ ಕಳುಹಿಸಿ, ನೆರೆಹೊರೆಯವರನ್ನು ಕರೆದು ಮಹಜರು ನಡೆಸುವ ನಾಟಕವಾಡಿದೆ. ಇದನ್ನು ‘ಗೋದಿ ಮೀಡಿಯಾ’ ಹಾಗೂ ಬಿಜೆಪಿ ಹ್ಯಾಂಡಲ್‌ಗಳಿಗೆ ಕಳುಹಿಸಿ ಪ್ರಕಾಶ್ ರಾಜ್ ತಪ್ಪು ಎಂದು ಬಿಂಬಿಸಲು ಯತ್ನಿಸುತ್ತಿದ್ದೀರಿ” ಎಂದು ಅವರು ಕಿಡಿಕಾರಿದ್ದಾರೆ.
ತಾವು ಓರ್ವ ಪ್ರಸಿದ್ಧ ನಟನಾಗಿರುವುದರಿಂದ ಆಡಳಿತ ಯಂತ್ರ ಸ್ಪಂದಿಸಿರಬಹುದು, ಆದರೆ ಓರ್ವ ಸಾಮಾನ್ಯ ಪ್ರಜೆಯ ಸ್ಥಿತಿ ಏನು ಎಂದು ಪ್ರಶ್ನಿಸಿದ ಅವರು, “ಈ ಹೋರಾಟ ಪ್ರತಿಯೊಬ್ಬ ನಾಗರಿಕನ ಗೌರವದ ಹೋರಾಟವಾಗಿದೆ. 5 ವರ್ಷಗಳಿಗೊಮ್ಮೆ ವೋಟಿಗಾಗಿ ಬಾಗಿಲಿಗೆ ಬರುವ ನೀವು, ಈಗ ತಮ್ಮ ಮತದಾನದ ಹಕ್ಕು ಉಳಿಸಿಕೊಳ್ಳಲು ಸಾರ್ವಜನಿಕರನ್ನು ಕ್ಯೂನಲ್ಲಿ ನಿಲ್ಲಿಸಿ ಭಿಕ್ಷೆ ಬೇಡುವಂತೆ ಮಾಡುತ್ತಿದ್ದೀರೇ?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಕಾಲ್ ರೆಕಾರ್ಡ್‌ಗಳು ತಮ್ಮ ಬಳಿ ಇದ್ದು, ಶೀಘ್ರದಲ್ಲೇ ದೊಡ್ಡ ಮಟ್ಟದ ಪತ್ರಿಕಾಗೋಷ್ಠಿ ನಡೆಸಿ ಸತ್ಯಾಸತ್ಯತೆಯನ್ನು ಬಿಚ್ಚಿಡುವುದಾಗಿ ಪ್ರಕಾಶ್ ರಾಜ್ ಎಚ್ಚರಿಸಿದ್ದಾರೆ.
