Home ರಾಜ್ಯ ಬಾಲಗಂಗಾಧರನಾಥ ನಿರ್ಮಲಾನಂದ ಸ್ವಾಮಿಯ ಫೋನ್‌ ಟ್ಯಾಪ್‌ ಮಾಡಿದವರು ನನ್ನನ್ನು ಬಿಡುತ್ತಾರೆಯೇ? ಕುಮಾರಸ್ವಾಮಿ ವಿರುದ್ಧ ಡಿಕೆಶಿ ಗರಂ

ಬಾಲಗಂಗಾಧರನಾಥ ನಿರ್ಮಲಾನಂದ ಸ್ವಾಮಿಯ ಫೋನ್‌ ಟ್ಯಾಪ್‌ ಮಾಡಿದವರು ನನ್ನನ್ನು ಬಿಡುತ್ತಾರೆಯೇ? ಕುಮಾರಸ್ವಾಮಿ ವಿರುದ್ಧ ಡಿಕೆಶಿ ಗರಂ

0

ಕಾನೂನು ಚೌಕಟ್ಟಿನಲ್ಲೇ ತಾವು ಆಸ್ತಿ ಸಂಪಾದನೆ ಮಾಡಿದ್ದು, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ಉಂಟಾಗಿರುವ ಬಿರುಕು ಮತ್ತು ನಾಯಕತ್ವದ ಪೈಪೋಟಿಯಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹತಾಶರಾಗಿ ತಮ್ಮ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ಆರೋಪಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. ರೈತನ ಮಗ ಹಾಗೂ ಉದ್ಯಮಿಯಾದ ತಮಗೆ ಆಸ್ತಿ ಸಂಪಾದಿಸುವ ಮತ್ತು ತಮ್ಮ ಮಕ್ಕಳಿಗೆ ಆಸ್ತಿ ಖರೀದಿಸುವ ಹಕ್ಕಿದೆ. ಕುಮಾರಸ್ವಾಮಿ ಅವರೇನು ಆದಾಯ ತೆರಿಗೆ ಅಧಿಕಾರಿಯೇ ಎಂದು ಪ್ರಶ್ನಿಸಿದ ಅವರು, ತಾವೇನೂ ಕದ್ದುಮುಚ್ಚಿ ಆಸ್ತಿ ಮಾಡಿಲ್ಲ, ಎಲ್ಲ ಆಸ್ತಿಯನ್ನು ಈಗಾಗಲೇ ಕಾನೂನುಬದ್ಧವಾಗಿ ಘೋಷಿಸಿಕೊಂಡಿರುವುದಾಗಿ ಸ್ಪಷ್ಟಪಡಿಸಿದರು. ಕುಮಾರಸ್ವಾಮಿಯವರ ಕುಟುಂಬವು ಬೇರೆ ಊರಿನಿಂದ ಬಂದು ಬೆಂಗಳೂರು ಸುತ್ತಮುತ್ತ ಆಸ್ತಿ ಮಾಡಿಲ್ಲವೇ, ಬಿಡದಿ ಟೌನ್‌ಶಿಪ್ ಮತ್ತು ಬಿಎಂಐಸಿಎಪಿಎ ವ್ಯಾಪ್ತಿಯಲ್ಲಿ ಅವರ ಆಸ್ತಿ ಹೇಗೆ ಬಂತು ಎಂದು ಪ್ರಶ್ನಿಸಿದರು.

ಹಿಂದೆ ಅಧಿಕಾರದಲ್ಲಿದ್ದಾಗ ಟೋಲ್ ರದ್ದು ಮಾಡದವರು ಈಗ ದೇಶಾದ್ಯಂತ ಟೋಲ್ ರದ್ದುಗೊಳಿಸಲು ಪ್ರಧಾನಿ ಮೋದಿಯವರಿಗೆ ಹೇಳಲಿ ಎಂದು ತಿವಿದ ಶಿವಕುಮಾರ್, ಇಂತಹ ನಾಟಕ, ಬ್ಲ್ಯಾಕ್‌ಮೇಲ್ ಹಾಗೂ ಗೊಡ್ಡು ಬೆದರಿಕೆಗಳಿಗೆ ಡಿ.ಕೆ. ಶಿವಕುಮಾರ್ ಹೆದರುವುದಿಲ್ಲ ಎಂದರು. ಬಾಲಗಂಗಾಧರನಾಥ ಸ್ವಾಮೀಜಿ, ನಿರ್ಮಲಾನಂದನಾಥ ಸ್ವಾಮೀಜಿಯವರ ಫೋನ್‌ಗಳನ್ನೇ ಟ್ಯಾಪ್ ಮಾಡಿಸಿದವರು ತಮ್ಮನ್ನು ಬಿಡುತ್ತಾರೆಯೇ ಎಂದು ಕಿಡಿಕಾರಿದ ಅವರು, ಸ್ವಂತ ಕುಟುಂಬದವರನ್ನೇ ಜೀರ್ಣಿಸಿಕೊಳ್ಳಲಾಗದವರು ರಾಜ್ಯ ಸರ್ಕಾರದ ಜನಪ್ರಿಯತೆ ಸಹಿಸಲಾಗದೆ ಅಸೂಯೆಯಿಂದ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

You cannot copy content of this page

Exit mobile version