ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ, ಹಾಸನ ಸಂಸದ ಪ್ರಜ್ವಲ್ ರೇವಣ್ಣನನ್ನು ಕೊನೆಗೂ ಎಸ್‌ಐಟಿ ಬಂಧಿಸಿದೆ. ಚುನಾವಣೆ ಮುಗಿಯುತ್ತಿದ್ದಂತೆ ವಿದೇಶಕ್ಕೆ ಪರಾರಿಯಾಗಿದ್ದ ಈತನನ್ನು ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಡರಾತ್ರಿ ಬಂದಿಳಿಯುತ್ತಿದ್ದಂತೆ ಎಸ್‌ಐಟಿ ವಶಕ್ಕೆ ಪಡೆದಿದೆ..
ಜರ್ಮನಿಯ ಮ್ಯೂನಿಕ್ ನಗರದಿಂದ ಗುರುವಾರ ಮಧ್ಯಾಹ್ನ ಹೊರಟಿದ್ದ ಪ್ರಜ್ವಲ್ ರೇವಣ್ಣ ರಾತ್ರಿ 12:40ಕ್ಕೆ ಬೆಂಗಳೂರಿಗೆ ಆಗಮಿಸಿದ್ದಾನೆ. ಆತನನ್ನು ವಶಕ್ಕೆ ಪಡೆದುಕೊಂಡ ಎಸ್‌ಐಟಿ ವಿಮಾನ ನಿಲ್ದಾಣದಿಂದ ಎಸ್‌ಐಟಿ ಕಚೇರಿಗೆ ಕರೆತಂದಿದೆ. ಚಾಲುಕ್ಯ ಸರ್ಕಲ್ ಎಸ್‌ಐಟಿ ಕಚೇರಿ ಬಳಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಇಂದು ಪ್ರಜ್ವಲ್ ನನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ಯಲಿದ್ದು, ನಂತರ ಕೋರ್ಟ್ ಗೆ ಹಾಜರುಪಡಿಸಿ ವಿಚಾರಣೆಗೆ ಕಸ್ಟಡಿಗೆ ಪಡೆಯಲು ಎಸ್‌ಐಟಿ ಮುಂದಾಗಿದೆ.
ಈ ನಡುವೆ ಇಂದು ಪ್ರಜ್ವಲ್ ಮತ್ತು ಭವಾನಿ ರೇವಣ್ಣ ಇಬ್ಬರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಪ್ರಜ್ವಲ್ ತಾಯಿ ಭವಾನಿಗೂ ಬಂಧನದ ಭೀತಿ ಎದುರಾಗಿದೆ. ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ಪಾತ್ರವೇ ಹೆಚ್ಚು ಎಂದು ಎಸ್‌ಐಟಿ ವಾದ ಮಂಡಿಸಿದೆ. ಹಾಗೊಂದು ವೇಳೆ ಭವಾನಿಗೆ ಜಾಮೀನು ಸಿಗದೇ ಹೋದರೆ ತಾಯಿ ಮಗ ಇಬ್ಬರೂ ಜೈಲು ವಾಸ ಫಿಕ್ಸ್ ಎನ್ನುವಂತಾಗಿದೆ.