Home ಬ್ರೇಕಿಂಗ್ ಸುದ್ದಿ ನಿಧಾನವಾಗಿ ಹೋಗು ಎಂದಿದ್ದಕ್ಕೆ ಕಾರು ಹರಿಸಿ – ಯುವಕನ ಕೊಲೆ

ನಿಧಾನವಾಗಿ ಹೋಗು ಎಂದಿದ್ದಕ್ಕೆ ಕಾರು ಹರಿಸಿ – ಯುವಕನ ಕೊಲೆ

ಹಾಸನ : ಕಾರನ್ನು ನಿಧಾನವಾಗಿ ಚಲಾಯಿಸುವಂತೆ ಹೇಳಿದ ವಿಚಾರಕ್ಕೆ ಯುವಕನ ಮೇಲೆ ಕಾರು ಹಾಯಿಸಿ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಸೂರನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮನು (27) ಮೃತಪಟ್ಟ ಯುವಕನಾಗಿದ್ದು, ನಿನ್ನೆ ರಾತ್ರಿ ಸುಮಾರು 12 ಗಂಟೆ ವೇಳೆಗೆ ಘಟನೆ ಸಂಭವಿಸಿದೆ. ಗ್ರಾಮದಲ್ಲಿ ಮಾತನಾಡುತ್ತ ನಿಂತಿದ್ದ ಮನು, ಅಭಿಷೇಕ್, ರಾಕೇಶ್ ಹಾಗೂ ಕುಶಾಲ್ ಅವರ ಬಳಿ KA-01-MF-2883 ಸಂಖ್ಯೆಯ ಕಾರು ಅತಿ ವೇಗದಲ್ಲಿ ಬಂದಿದ್ದು, ಇದನ್ನು ಗಮನಿಸಿದ ಯುವಕರು ಕಾರು ಚಾಲಕನಿಗೆ ನಿಧಾನವಾಗಿ ಹೋಗುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ಇದರಿಂದ ಆಕ್ರೋಶಗೊಂಡ ಆರೋಪಿಯು ಸ್ವಲ್ಪ ದೂರ ಹೋಗಿ ಕಾರನ್ನು ತಿರುಗಿಸಿಕೊಂಡು ಬಂದು ಮಾತನಾಡುತ್ತ ನಿಂತಿದ್ದ ಯುವಕರಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಮನು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಅಭಿಷೇಕ್ ಹಾಗೂ ರಾಕೇಶ್ ಗಂಭೀರವಾಗಿ ಗಾಯಗೊಂಡಿದ್ದು, ಕುಶಾಲ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ವರು ಯುವಕರು ಪರಸ್ಪರ ಸಂಬಂಧಿಕರಾಗಿದ್ದಾರೆ.

ಡಿಕ್ಕಿ ಹೊಡೆದ ಬಳಿಕ ಕಾರು ನಿಲ್ಲಿಸದೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.

You cannot copy content of this page

Exit mobile version