ಚಂಡೀಗಢ: ಪಶ್ಚಿಮ ಬಂಗಾಳ ಚುನಾವಣೆಯ ಬಳಿಕ ಇದೀಗ ಪಂಜಾಬ್ ಕಡೆಗೆ ಬಿಜೆಪಿ ತನ್ನ ರಾಜಕೀಯ ಚಟುವಟಿಕೆಯನ್ನು ಕೇಂದ್ರೀಕರಿಸುತ್ತಿರುವ ಸೂಚನೆಗಳು ಕಾಣಿಸುತ್ತಿದ್ದು, ಪಂಜಾಬ್ ನ ಚಂಡೀಗಢದಲ್ಲಿರುವ ಬಿಜೆಪಿ ರಾಜ್ಯ ಕಚೇರಿಯ ಹೊರಗೆ ಅಳವಡಿಸಲಾದ ಕೇಸರಿ ಬಣ್ಣದ ಭಾರೀ ಪೋಸ್ಟರ್‌ಗಳು ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಹುಟ್ಟು ಹಾಕಿದೆ.
“ಬಂಗಾಳ ನೆ ದಿಟ್ಟಿ ಭಾಜಪ ನು ಸೇವಾ, ಹುನ್ ಪಂಜಾಬ್ ದಿ ಹೈ ವರಿ” (ಬಂಗಾಳ ಬಿಜೆಪಿಗೆ ಸೇವೆ ಮಾಡಲು ಅವಕಾಶ ನೀಡಿತು, ಈಗ ಪಂಜಾಬ್‌ನ ಸರದಿ) ಎಂಬ ಘೋಷಣೆಯೊಂದಿಗೆ ಅಳವಡಿಸಲಾದ ಪೋಸ್ಟರ್‌ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಳೆತ್ತರದ ಕಟೌಟ್ ಕೂಡ ಗಮನ ಸೆಳೆಯಿತು. ಬಂಗಾಳದಲ್ಲಿ ಪಕ್ಷದ ಸಾಧನೆಯ ನಂತರ ಪಂಜಾಬ್‌ನಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶವನ್ನು ಬಿಜೆಪಿ ಬಹಿರಂಗಪಡಿಸಿದಂತಾಗಿದೆ.
ಬಿಜೆಪಿ ಪಂಜಾಬ್ ಘಟಕದ ವಕ್ತಾರ ಪ್ರೀತ್ಪಾಲ್ ಸಿಂಗ್ ಬಲಿಯಾವಾಲ್ ಮಾತನಾಡಿ, “ಬಂಗಾಳದ ಬಳಿಕ ಈಗ ಪಂಜಾಬ್ ನಮ್ಮ ಪ್ರಮುಖ ಗುರಿಯಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳ ಜನರನ್ನು ತಲುಪುವ ಅಭಿಯಾನ ಆರಂಭಗೊಂಡಿದೆ,” ಎಂದು ಹೇಳಿದ್ದಾರೆ. ಇದೇ ರೀತಿಯ ಪೋಸ್ಟರ್‌ಗಳನ್ನು ಪಂಜಾಬ್‌ನ ವಿವಿಧ ಜಿಲ್ಲೆಗಳ ಬಿಜೆಪಿ ಕಚೇರಿಗಳ ಹೊರಗೂ ಅಳವಡಿಸಲಾಗುವುದು ಎಂದು ತಿಳಿಸಿದ್ದಾರೆ.
ಬಿಜೆಪಿಯ ಪಂಜಾಬ್ ಘಟಕ ತನ್ನ ಅಧಿಕೃತ X ಖಾತೆಯಲ್ಲಿ ಪೋಸ್ಟರ್‌ಗಳ ಚಿತ್ರಗಳನ್ನು ಹಂಚಿಕೊಂಡಿದ್ದು, “ಸಿದ್ಧರಾಗಿ… ಧುರಂಧರ್” ಎಂಬ ಸಂದೇಶದ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸುವ ಪ್ರಯತ್ನ ನಡೆಸಿದೆ.
ಇತ್ತೀಚೆಗೆ ಪಂಜಾಬ್ ಬಿಜೆಪಿ ಅಧ್ಯಕ್ಷ ಸುನೀಲ್ ಜಖಾರ್ ಕೂಡ “ಬಂಗಾಳದಲ್ಲಿ ಬಿಜೆಪಿ ಯಶಸ್ಸು ಸಾಧಿಸಿದಂತೆ ಪಂಜಾಬ್‌ನಲ್ಲೂ ಪಕ್ಷ ಅಧಿಕಾರಕ್ಕೆ ಬರಬಹುದು” ಎಂದು ಹೇಳಿಕೆ ನೀಡಿದ್ದರು. ಪ್ರಧಾನಿ ಮೋದಿ ಅವರಿಗೆ ಪಂಜಾಬ್ ಬಗ್ಗೆ ವಿಶೇಷ ಕಾಳಜಿ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು.
ಇದಕ್ಕೆ ತೀವ್ರ ಪ್ರತಿಕ್ರಿಯೆ ನೀಡಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್, ಬಿಜೆಪಿ ವಿಭಜಕ ರಾಜಕೀಯ ನಡೆಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. “ಇಂತಹ ರಾಜಕೀಯ ಬೇರೆ ರಾಜ್ಯಗಳಲ್ಲಿ ಕೆಲಸ ಮಾಡಬಹುದು. ಆದರೆ ಪಂಜಾಬ್‌ನಲ್ಲಿ ಜನರು ಒಗ್ಗಟ್ಟಿನಿಂದ ಬದುಕುತ್ತಾರೆ. ಬಂಗಾಳದಂತ ಹಿಂಸಾತ್ಮಕ ಪರಿಸ್ಥಿತಿಗೆ ಇಲ್ಲಿ ಅವಕಾಶ ನೀಡುವುದಿಲ್ಲ,” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ರಾಜಕೀಯ ವಲಯದಲ್ಲಿ ಈ ಬೆಳವಣಿಗೆಗಳು ಪಂಜಾಬ್‌ನಲ್ಲಿ ಮುಂದಿನ ಚುನಾವಣಾ ರಾಜಕೀಯಕ್ಕೆ ಹೊಸ ತಿರುವು ನೀಡುವ ಸೂಚನೆಗಳಾಗಿ ಕಾಣಿಸುತ್ತಿವೆ.
