ಬೆಂಗಳೂರು : ಕೋಟ್ಯಂತರ ರೂಪಾಯಿ ಮೌಲ್ಯದ ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಶ್ರೀ ಕೃಷ್ಣ ಅಲಿಯಾಸ್ ಶ್ರೀಕಿ, ರಾಬಿನ್ ಖಂಡೇವಾಲ ಮತ್ತು ಸುನೀಶ್ ಹೆಗಡೆ ಎಂಬ ಮೂವರು ಇಡಿ ಬಲೆಗೆ ಬಿದ್ದಿದ್ದಾರೆ.
ಏನಿದು ಆರೋಪ?
ಬಿಟ್‌ಕಾಯಿನ್ ವಿನಿಮಯ ಕೇಂದ್ರಗಳನ್ನು ಹ್ಯಾಕ್ ಮಾಡಿ ಭಾರಿ ಪ್ರಮಾಣದ ಡಿಜಿಟಲ್ ಹಣ ಲೂಟಿ ಮಾಡಿದ ಆರೋಪ ಇವರ ಮೇಲಿದೆ. ಅಷ್ಟೇ ಅಲ್ಲ, ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಅನ್ನು ಹ್ಯಾಕ್ ಮಾಡಿ ಅಕ್ರಮ ಹಣ ವರ್ಗಾವಣೆ ನಡೆಸಿದ ಗಂಭೀರ ಆರೋಪವೂ ಮುಖ್ಯ ಆರೋಪಿ ಶ್ರೀಕಿ ಮತ್ತು ಆತನ ತಂಡದ ಮೇಲಿದೆ.
ರಾಬಿನ್ ಖಂಡೇವಾಲ ಮತ್ತು ಸುನೀಶ್ ಹೆಗಡೆ, ಕಳ್ಳತನದ ಬಿಟ್‌ಕಾಯಿನ್‌ಗಳನ್ನು ನಗದೀಕರಿಸುವ ಕಾರ್ಯದಲ್ಲಿ ನೆರವಾಗುತ್ತಿದ್ದರು ಎಂಬ ಬಲವಾದ ಶಂಕೆ ತನಿಖಾಧಿಕಾರಿಗಳಿಗೆ ಇದೆ. ಅಕ್ರಮ ಗಳಿಕೆಯನ್ನು ಬೇರೆ ಬೇರೆ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲಾಗಿದ್ದು, ಆ ಮೂಲಗಳ ಪತ್ತೆಗೆ ಇಡಿ ತನಿಖೆ ಮುಂದುವರಿದಿದೆ.
ಈ ಹಿಂದೆ ಸಿಸಿಬಿ (ಸೆಂಟ್ರಲ್ ಕ್ರೈಂ ಬ್ರಾಂಚ್) ಪೊಲೀಸರು ನಡೆಸಿದ್ದ ತನಿಖೆಯ ಆಧಾರದ ಮೇಲೆ ಇಡಿ ತನ್ನ ಕಾರ್ಯಾಚರಣೆಯನ್ನು ವ್ಯಾಪಕವಾಗಿ ವಿಸ್ತರಿಸಿತ್ತು. ಕಳೆದ ಕೆಲವು ವರ್ಷಗಳಿಂದ ಜಾಡು ಹಿಡಿದಿದ್ದ ಅಧಿಕಾರಿಗಳು ಇದೀಗ ನಿರ್ಣಾಯಕ ಹೆಜ್ಜೆ ಇಟ್ಟಿದ್ದಾರೆ.
ತೀವ್ರ ವಿಚಾರಣೆ ಆರಂಭ
ಬಂಧಿತ ಮೂವರನ್ನು ರಹಸ್ಯ ಸ್ಥಳದಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಈ ಹಗರಣದ ಹಿಂದೆ ಇರುವ ಪ್ರಭಾವಿ ವ್ಯಕ್ತಿಗಳ ಪತ್ತೆ, ಲೂಟಿ ಹಣ ಯಾರ ಕೈ ಸೇರಿದೆ ಎಂಬ ಮಾಹಿತಿ ಕಲೆಹಾಕುವ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.
ಈ ಬಂಧನದಿಂದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಹತ್ವದ ಮಾಹಿತಿ ಹೊರಬರುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.
