Home ದೆಹಲಿ NEET ಪತ್ರಿಕೆ ಸೋರಿಕೆ ಪ್ರಕರಣ, ಮಧ್ಯವರ್ತಿಗಳ ಪಾತ್ರ ಬಯಲು – CBI ತನಿಖೆ ಚುರುಕು

NEET ಪತ್ರಿಕೆ ಸೋರಿಕೆ ಪ್ರಕರಣ, ಮಧ್ಯವರ್ತಿಗಳ ಪಾತ್ರ ಬಯಲು – CBI ತನಿಖೆ ಚುರುಕು

ನವದೆಹಲಿ : NEET UG ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (CBI) ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಹಲವು ಪ್ರಮುಖ ಮಾಹಿತಿಗಳು ಬಹಿರಂಗಗೊಂಡಿವೆ. ಪರೀಕ್ಷೆಗೆ ಮೂರು ದಿನಗಳ ಮುನ್ನವೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ವಾಟ್ಸಪ್‌, ಟೆಲಿಗ್ರಾಂ ಹಾಗೂ ಆಫ್‌ಲೈನ್‌ ವಿಶೇಷ ತರಗತಿಗಳ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸಲಾಗಿದೆ ಎಂದು ಸಿಬಿಐ ಆರೋಪಿಸಿದೆ.

ಪ್ರಕರಣದಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಗೆ ಸಂಬಂಧಿಸಿದ ವಿಷಯ ತಜ್ಞರು, ಕೋಚಿಂಗ್‌ ಕೇಂದ್ರಗಳ ನಿರ್ವಾಹಕರು, ಮಧ್ಯವರ್ತಿಗಳು ಸೇರಿದಂತೆ ಹಲವು ಮಂದಿ ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ತನಿಖೆಯ ಪ್ರಕಾರ, ರಸಾಯನಶಾಸ್ತ್ರ ತಜ್ಞ ಪಿ.ವಿ. ಕುಲಕರ್ಣಿ ಅವರು ಪುಣೆಯಲ್ಲಿ ನಡೆಸಿದ ವಿಶೇಷ ತರಗತಿಗಳಲ್ಲಿ ಪರೀಕ್ಷೆಯಲ್ಲಿ ಬಂದಿದ್ದ ಪ್ರಶ್ನೆಗಳು ಹಾಗೂ ಉತ್ತರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದ್ದರು ಎನ್ನಲಾಗಿದೆ. ವಿದ್ಯಾರ್ಥಿಗಳ ನೋಟ್‌ಬುಕ್‌ಗಳಲ್ಲಿ ಇದ್ದ ಪ್ರಶ್ನೆಗಳು ಸೋರಿಕೆಯಾದ ಪ್ರಶ್ನೆಪತ್ರಿಕೆಯೊಂದಿಗೆ ಹೊಂದಿಕೆಯಾಗಿವೆ ಎಂದು ಸಿಬಿಐ ತಿಳಿಸಿದೆ.

ಕುಲಕರ್ಣಿ ಅವರ ಮೊಬೈಲ್‌ನಿಂದ ಪ್ರಶ್ನೆಗಳ ಫೋಟೋಗಳು, ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗಿನ ಸಂಭಾಷಣೆಗಳು ಸೇರಿದಂತೆ ಡಿಜಿಟಲ್‌ ಸಾಕ್ಷ್ಯಗಳು ಪತ್ತೆಯಾಗಿವೆ ಎಂದು ತನಿಖೆಯಲ್ಲಿ ಹೇಳಲಾಗಿದೆ. ಪರೀಕ್ಷೆಯ ಬಳಿಕ, ಅವರು ಹೇಳಿದ ಪ್ರಶ್ನೆಗಳೇ ಬಂದಿದ್ದಕ್ಕಾಗಿ ಒಬ್ಬ ಪೋಷಕರು ಉಡುಗೊರೆ ನೀಡಲು ಮುಂದಾಗಿದ್ದರು ಎಂಬ ಅಂಶವೂ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ.

ಭೌತಶಾಸ್ತ್ರ ವಿಷಯದ ಪ್ರಶ್ನೆಗಳನ್ನು ಹಣ ಪಡೆದು ಸೋರಿಕೆ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಮನೀಷಾ ಹವಾಲ್ದಾರ್ ಎಂಬ ವಿಷಯ ತಜ್ಞರು ₹25 ಸಾವಿರ ಪಡೆದು ಪ್ರಶ್ನೆಗಳನ್ನು ಹಂಚಿಕೊಂಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ಮತ್ತೊಬ್ಬ ಆರೋಪಿ ಮನೀಷಾ ವಾಘ್ಮಾರೆ ಅವರು ವಿದ್ಯಾರ್ಥಿಗಳು ಮತ್ತು ತಜ್ಞರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಿದ್ದರು ಎಂದು ತನಿಖೆಯಲ್ಲಿ ತಿಳಿಸಲಾಗಿದೆ.

ಜೀವಶಾಸ್ತ್ರ ವಿಷಯದ ತರಗತಿಗಳನ್ನು ನಡೆಸುತ್ತಿದ್ದ ಮತ್ತೊಬ್ಬ ಆರೋಪಿ ಮನೀಷಾ ಗುರುನಾಥ್ ಮಂದಾರೆ ಅವರು ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಪಠ್ಯ ಭಾಗಗಳಿಂದ ಪ್ರಶ್ನೆಗಳನ್ನು ಸಿದ್ಧಪಡಿಸುತ್ತಿದ್ದರು ಹಾಗೂ ಸೋರಿಕೆಯಾದ ಪ್ರಶ್ನೆಗಳ ಪ್ರತಿಗಳನ್ನು ಪಡೆದಿದ್ದರು ಎಂದು ಸಿಬಿಐ ಹೇಳಿದೆ.

ರಾಜಸ್ಥಾನದ ಸೀಕರ್‌ನ ಕೋಚಿಂಗ್‌ ಜಾಲದ ಮೂಲಕವೂ ಪ್ರಶ್ನೆಗಳು ನೂರಾರು ವಿದ್ಯಾರ್ಥಿಗಳಿಗೆ ತಲುಪಿವೆ ಎಂದು ತನಿಖೆಯಲ್ಲಿ ಉಲ್ಲೇಖಿಸಲಾಗಿದೆ. ಪರೀಕ್ಷೆಗೆ ಮುನ್ನವೇ 40ರಿಂದ 50 ವಿದ್ಯಾರ್ಥಿಗಳಿಗೆ ಪ್ರಶ್ನೆಗಳಿದ್ದ ಪಿಡಿಎಫ್‌ ಫೈಲ್‌ ಹಂಚಲಾಗಿತ್ತು ಎನ್ನಲಾಗಿದೆ.

ಆರೋಪಿಗಳು ಗುರುತು ಮರೆಮಾಚಲು ವಿವಿಧ ವಾಟ್ಸಪ್‌ ಗುಂಪುಗಳು ಹಾಗೂ ಕೋಡ್‌ ಹೆಸರುಗಳನ್ನು ಬಳಸಿದ್ದರು ಎಂದು ಸಿಬಿಐ ತಿಳಿಸಿದೆ. ‘NEET 2026’, ‘FIFA World Cup 2026’ ಸೇರಿದಂತೆ ಹಲವು ಗುಂಪುಗಳಲ್ಲಿ ಮಾಹಿತಿ ಹಂಚಲಾಗುತ್ತಿತ್ತು ಎಂದು ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ.

ಪ್ರಶ್ನೆಪತ್ರಿಕೆ ಸೋರಿಕೆ ಸಂಚು 2025ರ ಅಕ್ಟೋಬರ್‌ನಲ್ಲೇ ಆರಂಭವಾಗಿತ್ತು ಎಂದು ಸಿಬಿಐ ಆರೋಪಿಸಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಲಕ್ಷಾಂತರ ರೂಪಾಯಿಗಳನ್ನು ಸಂಗ್ರಹಿಸಲಾಗಿದ್ದು, ಹಣವನ್ನು ನಗದು ಮತ್ತು ಆನ್‌ಲೈನ್‌ ಮೂಲಕ ಪಡೆದಿರುವ ಮಾಹಿತಿ ತನಿಖೆಯಲ್ಲಿ ಲಭ್ಯವಾಗಿದೆ ಎಂದು ತಿಳಿಸಿದೆ.

ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಮತ್ತು ಭಾಷಾಂತರಿಸುವ ಪ್ರಕ್ರಿಯೆಯಲ್ಲಿದ್ದ ಭದ್ರತಾ ಲೋಪಗಳನ್ನೇ ಆರೋಪಿಗಳು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸಿಬಿಐ ಹೇಳಿದೆ. ಒಬ್ಬನೇ ತಜ್ಞನಿಗೆ ಹಲವು ಮಾಸ್ಟರ್‌ ಸೆಟ್‌ಗಳಿಗೆ ಪ್ರವೇಶವಿದ್ದದ್ದು ಹಾಗೂ ಸಮರ್ಪಕ ಮೇಲ್ವಿಚಾರಣೆ ಕೊರತೆಯೂ ಸೋರಿಕೆಗೆ ಕಾರಣವಾಗಿರಬಹುದು ಎಂದು ತನಿಖೆಯಲ್ಲಿ ಉಲ್ಲೇಖಿಸಲಾಗಿದೆ.

You cannot copy content of this page

Exit mobile version