ಬೆಂಗಳೂರು: ಹೈಕಮಾಂಡ್ ಸಚಿವ ಸ್ಥಾನ ಬಿಟ್ಟು ಪಕ್ಷದ ಕೆಲಸ ಮಾಡುವಂತೆ ಸೂಚಿಸಿದರೆ ತಾವು ಸೇರಿದಂತೆ ಎಲ್ಲರೂ ಅದನ್ನು ಪಾಲಿಸಬೇಕಾಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನೂತನ ಸಚಿವರಿಗೆ ಖಾತೆ ಹಂಚಿಕೆ ವಿಳಂಬವಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಯಾವ ಸಚಿವರಿಗೆ ಯಾವ ಜವಾಬ್ದಾರಿ ನೀಡಬೇಕು ಎಂಬುದನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ಜೊತೆ ಚರ್ಚಿಸಿ ತೀರ್ಮಾನಿಸುತ್ತಾರೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದರು. ಸಚಿವ ಸಂಪುಟದಲ್ಲಿರುವ ಇಬ್ಬರಿಗೆ ರಾಜೀನಾಮೆ ನೀಡುವ ವಿಚಾರದ ಬಗ್ಗೆ ಮಾತನಾಡಿದ ಅವರು, 33 ಸಚಿವ ಸ್ಥಾನಗಳಷ್ಟೇ ಇರುವುದರಿಂದ ಎಲ್ಲರಿಗೂ ಅವಕಾಶ ನೀಡುವುದು ಸಾಧ್ಯವಿಲ್ಲ. ಸಾಮಾಜಿಕ ನ್ಯಾಯ ಹಾಗೂ ಪ್ರಾದೇಶಿಕ ಪ್ರಾತಿನಿಧ್ಯವನ್ನು ಸಮತೋಲನಗೊಳಿಸುವುದು ಕಷ್ಟದ ಕೆಲಸವಾದರೂ, ಎಲ್ಲರೂ ಸೇರಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು.
“ಹೈಕಮಾಂಡ್ ನನಗೆ ಸಚಿವ ಸ್ಥಾನ ಬಿಟ್ಟು ಪಕ್ಷದ ಕೆಲಸ ಮಾಡಿ ಎಂದರೂ ನಾನು ಅದಕ್ಕೆ ಬದ್ಧನಿದ್ದೇನೆ. ಪಕ್ಷದ ಜವಾಬ್ದಾರಿ ನೀಡಿದರೆ ಸ್ವೀಕರಿಸಲು ಸಿದ್ಧ,” ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು. ಖಾತೆ ಹಂಚಿಕೆ ಕುರಿತು ಮಾತನಾಡಿದ ಅವರು, ಅಧಿವೇಶನ ನಡೆಯುತ್ತಿದ್ದು, ಒಂದು ವಾರ ಸಮಯ ಸಿಕ್ಕರೆ ಇಲಾಖೆ ಬಗ್ಗೆ ತಿಳಿದುಕೊಳ್ಳಬಹುದು. ಶೀಘ್ರದಲ್ಲೇ ಖಾತೆ ಹಂಚಿಕೆ ನಡೆಯಲಿದೆ ಎಂದರು.
ಕುರುಬ ಸಮುದಾಯದ ಕೆಲವು ಶಾಸಕರ ಅಸಮಾಧಾನದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಾಮಾಜಿಕ ನ್ಯಾಯ ನೀಡುವುದು ಸವಾಲಿನ ಕೆಲಸ. ಎಲ್ಲ ಸಮುದಾಯಗಳ ಬೇಡಿಕೆಗಳಿದ್ದು, ಸಂವಿಧಾನದ ಪ್ರಕಾರ ಶೇ.15ರಷ್ಟು ಮಂದಿಗೆ ಮಾತ್ರ ಸಚಿವ ಸ್ಥಾನ ನೀಡಲು ಅವಕಾಶವಿದೆ ಎಂದು ಹೇಳಿದರು. ತಿಮ್ಮಾಪುರ್-ನಂಜಯ್ಯಮಠ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಛಲವಾದಿ ನಾರಾಯಣಸ್ವಾಮಿ ಅವರು ದೂರು ನೀಡಿದರೆ ಪರಿಶೀಲಿಸಲಾಗುವುದು ಎಂದ ಅವರು, ಎಲ್ಲರ ಹೇಳಿಕೆ ಆಧರಿಸಿ ಸುಮೋಟೋ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ಪ್ರಕರಣ ಗಂಭೀರವಾಗಿದ್ದರೆ ಸೂಕ್ತ ದೂರು ನೀಡಬೇಕು ಎಂದು ತಿಳಿಸಿದರು.
ಹಿಂದೆ ಪಿಎಸ್‌ಐ ಹಗರಣದ ವಿಚಾರದಲ್ಲಿ ಮಾಧ್ಯಮ ವರದಿಗಳ ಆಧಾರದ ಮೇಲೆ ಮಾತನಾಡಿದ್ದಕ್ಕೆ ಸಿಐಡಿ ಮೂರು ಬಾರಿ ನೋಟಿಸ್ ನೀಡಿತ್ತು. ಆದರೆ ಶಾಸಕರಾದ ಛಲವಾದಿ ನಾರಾಯಣಸ್ವಾಮಿ ಅವರಿಗೆ ಅದೇ ರೀತಿಯಲ್ಲಿ ನಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
