ಚಿಕ್ಕಬಳ್ಳಾಪುರ : ದೇವರ ಮೆರವಣಿಗೆ ವಿಚಾರವಾಗಿ ದಲಿತರು (Dalit) ಮತ್ತು ಸವರ್ಣೀಯರ ನಡುವೆ ವೈಮನಸ್ಸು ಉಂಟಾದ ಘಟನೆ ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಆನೆಮಡಗು ಕೊತ್ತೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಗಂಗಮ್ಮ ಮತ್ತು ಮಾರಮ್ಮ ದೇವಿಯ ಮೆರವಣಿಗೆ ನಡೆಸುವ ಸಂದರ್ಭದಲ್ಲಿ, ದೇವಿಯ ಪಲ್ಲಕ್ಕಿಯನ್ನು ಹೊರಲು ದಲಿತ ಸಮುದಾಯದವರಿಗೆ ಅವಕಾಶ ನೀಡಲು ಸವರ್ಣೀಯರು ನಿರಾಕರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಎರಡೂ ಸಮುದಾಯಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ದಲಿತ ಸಮುದಾಯದವರು ಮೆರವಣಿಗೆ ನಡೆಸಲು ಮುಂದಾದಾಗ, ಸವರ್ಣೀಯರು ದೇವರ ಮೂರ್ತಿಗಳನ್ನು ಸ್ಥಳದಲ್ಲೇ ಬಿಟ್ಟು ತೆರಳಿದ್ದಾರೆ ಎಂದು ಹೇಳಲಾಗಿದೆ. ಬಳಿಕ ದಲಿತ ಯುವಕರು ದೇವರ ಮೂರ್ತಿಗಳನ್ನು ದೇವಸ್ಥಾನಕ್ಕೆ ತಂದು ಪ್ರತಿಷ್ಠಾಪಿಸಿದ್ದಾರೆ.
ಈ ಬೆಳವಣಿಗೆಗೆ ದಲಿತ ಸಮುದಾಯದ ಯುವಕರು ಸವರ್ಣೀಯರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಖಂಡಿಸಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
