ಜಿಎಸ್‌ಟಿ ಸಂಗ್ರಹಣೆಯಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನದಲ್ಲಿದ್ದರೂ, ಕೇಂದ್ರ ಸರ್ಕಾರದ ಹೊಸ ನೀತಿಗಳಿಂದ ರಾಜ್ಯಕ್ಕೆ ಸುಮಾರು ₹10 ಸಾವಿರ ಕೋಟಿಯಷ್ಟು ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಮುಂದಿನ ವರ್ಷ ಇದು ₹15 ಸಾವಿರ ಕೋಟಿವರೆಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ರಾಜ್ಯದ ಆರ್ಥಿಕ ಸ್ಥಿತಿಗತಿ ಕುರಿತು ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯದ ವಿರುದ್ಧ ಮಲತಾಯಿ ಧೋರಣೆ ತೋರಿಸುತ್ತಿದೆ ಎಂದು ಆರೋಪಿಸಿದರು. ಆದರೂ ರಾಜ್ಯ ಬಜೆಟ್‌ನಲ್ಲಿ ವಿತ್ತೀಯ ಶಿಸ್ತಿನ ಉಲ್ಲಂಘನೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಜಿಎಸ್‌ಡಿಪಿ 2025-26ರಲ್ಲಿ 8.1% ಬೆಳವಣಿಗೆ ಸಾಧಿಸಿದ್ದು, ರಾಷ್ಟ್ರದ ಜಿಡಿಪಿ ಬೆಳವಣಿಗೆ 7.4% ಮಾತ್ರವಾಗಿದೆ. ಈ ಮೂಲಕ ಕೇಂದ್ರಕ್ಕಿಂತ ರಾಜ್ಯದ ಆರ್ಥಿಕ ಬೆಳವಣಿಗೆ ಉತ್ತಮವಾಗಿದೆ ಎಂದು ಅವರು ವಿವರಿಸಿದರು.
ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಗೆ ಈ ವರ್ಷ ₹52,000 ಕೋಟಿ ಅನುದಾನ ನೀಡಲಾಗಿದ್ದು, ಇದುವರೆಗೆ ಒಟ್ಟು ₹1,21,591 ಕೋಟಿ ವೆಚ್ಚ ಮಾಡಲಾಗಿದೆ. ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವ ಜೊತೆಗೆ ಆರ್ಥಿಕ ಶಿಸ್ತನ್ನೂ ಪಾಲಿಸಲಾಗಿದೆ ಎಂದು ಸಿಎಂ ಹೇಳಿದರು. 2023-24ರಿಂದ ಮೂರು ವರ್ಷಗಳ ಕಾಲವೂ ಆರ್ಥಿಕ ಶಿಸ್ತು ಕಾಯ್ದೆಯ ಮಾನದಂಡಗಳನ್ನು ಪಾಲಿಸಲಾಗಿದೆ ಎಂದರು.
ಕೇಂದ್ರ ಅನುದಾನ ಕೊರತೆ ಆರೋಪ
ಜಲಜೀವನ ಮಿಷನ್ ಯೋಜನೆಗೆ ಒಟ್ಟು ₹69,488 ಕೋಟಿ ವೆಚ್ಚ ನಿರ್ಧಾರವಾಗಿದ್ದು, ಅದರಲ್ಲಿ ಕೇಂದ್ರದ ಪಾಲು ₹30,880 ಕೋಟಿ. ಆದರೆ ಈಗವರೆಗೆ ಕೇಂದ್ರದಿಂದ ಕೇವಲ ₹11,786 ಕೋಟಿ ಮಾತ್ರ ಬಂದಿದೆ ಎಂದು ಸಿಎಂ ಆರೋಪಿಸಿದರು. ಉಳಿದ ಹಣಕ್ಕಾಗಿ ರಾಜ್ಯ ಸರ್ಕಾರವೇ ₹38,600 ಕೋಟಿ ವೆಚ್ಚ ಮಾಡಿದ್ದು, ಹೆಚ್ಚುವರಿಯಾಗಿ ₹15,500 ಕೋಟಿಯನ್ನು ಕೂಡ ಖರ್ಚು ಮಾಡಲಾಗಿದೆ ಎಂದು ಹೇಳಿದರು.
ಕೇಂದ್ರ ಸಾಲದ ಬಗ್ಗೆ ಪ್ರಶ್ನೆ
ಕೇಂದ್ರ ಸರ್ಕಾರದ ವಿತ್ತೀಯ ಕೊರತೆ 4.4% ಆಗಿದ್ದು, ದೇಶದ ಒಟ್ಟು ಸಾಲ ₹218 ಲಕ್ಷ ಕೋಟಿಗೂ ಅಧಿಕವಾಗಿದೆ ಎಂದು ಅವರು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮೊದಲು ದೇಶದ ಸಾಲ ₹53.11 ಲಕ್ಷ ಕೋಟಿ ಇತ್ತು, ಈಗ ಅದು ₹165 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ಟೀಕಿಸಿದರು.
ರಾಜ್ಯ ಸರ್ಕಾರ ಸಾಲ ಮಾಡುತ್ತಿದೆ ಎಂದು ಆರೋಪಿಸುವ ಪ್ರತಿಪಕ್ಷ ನಾಯಕ ಆರ್ ಅಶೋಕ ಅವರಿಗೆ ನಮ್ಮನ್ನು ಪ್ರಶ್ನಿಸುವ ನೈತಿಕತೆ ಇಲ್ಲ ಎಂದು ಸಿಎಂ ಹೇಳಿದರು. ರಾಜ್ಯದಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಲೇ ₹5,33,847 ಕೋಟಿ ಸಾಲವಿತ್ತು ಎಂದು ಅವರು ವಿವರಿಸಿದರು.
ಮನರೇಗಾ ಕಾಯ್ದೆ ವಿರೋಧ
2005ರಲ್ಲಿ ಆರಂಭವಾದ MGNREGA ಯೋಜನೆಗೆ ಆರಂಭದಲ್ಲಿ ಸಂಪೂರ್ಣ ಅನುದಾನವನ್ನು ಕೇಂದ್ರ ಸರ್ಕಾರವೇ ನೀಡುತ್ತಿತ್ತು. ಆದರೆ ಹೊಸ ಕಾನೂನಿನ ಪ್ರಕಾರ ಕೇಂದ್ರ 60% ಮತ್ತು ರಾಜ್ಯ 40% ಅನುದಾನ ನೀಡಬೇಕೆಂದು ನಿಗದಿಪಡಿಸಲಾಗಿದೆ ಎಂದು ಸಿಎಂ ಹೇಳಿದರು.
ಈ ಬದಲಾವಣೆಯಿಂದ ರಾಜ್ಯಗಳಿಗೆ ಹೆಚ್ಚಿನ ಆರ್ಥಿಕ ಹೊರೆ ಬೀಳುತ್ತಿದ್ದು, ರಾಜ್ಯ ಸರ್ಕಾರಕ್ಕೆ ಮಾತ್ರವೇ ₹3,000 ಕೋಟಿ ಹೆಚ್ಚುವರಿ ಹೊರೆ ಆಗಲಿದೆ ಎಂದು ಅವರು ಹೇಳಿದರು. ಈ ಕಾಯ್ದೆಯನ್ನು ರದ್ದುಗೊಳಿಸಿ ಮನರೇಗಾ ಯೋಜನೆಯನ್ನು ಮರುಸ್ಥಾಪಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.
ಖಾಲಿ ಹುದ್ದೆಗಳ ಭರ್ತಿ
ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡುವುದಾಗಿ ಘೋಷಿಸಲಾಗಿದೆ. ಈ ವರ್ಷ ಒಟ್ಟು 56,432 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ನೇಮಕಾತಿ ವಿಳಂಬವಾದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ 5 ವರ್ಷ ಸಡಿಲಿಕೆ ನೀಡಲಾಗಿದೆ ಎಂದು ಹೇಳಿದರು.
ಪ್ರಾದೇಶಿಕ ಅಭಿವೃದ್ಧಿಗೆ ಒತ್ತು
ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಪ್ರೊ. ಎಂ. ಗೋವಿಂದರಾವ್ ಸಮಿತಿಯ ಶಿಫಾರಸ್ಸುಗಳನ್ನು ಸಚಿವ ಸಂಪುಟ ಅಂಗೀಕರಿಸಿದ್ದು, ವಿಧಾನಸಭೆಯಲ್ಲಿ ಮಂಡಿಸಲಾಗುತ್ತದೆ. ಈ ಶಿಫಾರಸ್ಸುಗಳ ಜಾರಿಗೆ ಈ ವರ್ಷ ₹4,291 ಕೋಟಿ ಅನುದಾನ ಮೀಸಲಿಡಲಾಗಿದೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ವ್ಯಾಪ್ತಿಯಲ್ಲಿ 2026-27ರಲ್ಲಿ ₹5,000 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ ಎಂದು ಸಿಎಂ ತಿಳಿಸಿದರು.
ನೀರಾವರಿ ಯೋಜನೆಗಳಿಗೆ ಪರಿಹಾರ
ಕೃಷ್ಣ ಮೇಲ್ದಂಡೆ ಯೋಜನೆ 3 ಯೋಜನೆಯಡಿ ಡ್ಯಾಂ ಎತ್ತರ ಹೆಚ್ಚಿಸಿದ ಪರಿಣಾಮ ಮುಳುಗಡೆಯಾಗುವ ಸುಮಾರು 1 ಲಕ್ಷ ಎಕರೆ ಜಮೀನುಗಳಿಗೆ ಪರಿಹಾರ ನೀಡಲಾಗುವುದು. ಖುಷ್ಕಿ ಜಮೀನಿಗೆ ₹30 ಲಕ್ಷ ಹಾಗೂ ನೀರಾವರಿ ಜಮೀನಿಗೆ ₹40 ಲಕ್ಷ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಈ ಪ್ರಕ್ರಿಯೆಯನ್ನು ನಾಲ್ಕು ವರ್ಷಗಳಲ್ಲಿ ಪೂರ್ಣಗೊಳಿಸಲಾಗುತ್ತದೆ ಎಂದು ಹೇಳಿದರು.
ಇದಲ್ಲದೆ ತುಂಗಭದ್ರಾ ಜಲಾಶಯದ ಎಲ್ಲ ಗೇಟುಗಳು ಶಿಥಿಲವಾಗಿರುವ ಹಿನ್ನೆಲೆಯಲ್ಲಿ ಜೂನ್ ತಿಂಗಳೊಳಗೆ ಅವುಗಳನ್ನು ಬದಲಾಯಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
