ಹೈದರಾಬಾದ್: ಒಮಾನ್ ಕರಾವಳಿಯ ಸಮೀಪದಲ್ಲಿ ವಾಣಿಜ್ಯ ನೌಕೆಯೊಂದರ ಮೇಲೆ ಅಮೆರಿಕ ಸೇನೆ ನಡೆಸಿದ ಭೀಕರ ವಾಯುದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ, ಎಐಎಂಐಎಂ (AIMIM) ಮುಖ್ಯಸ್ಥ ಹಾಗೂ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಅಮೆರಿಕದ ದಾಳಿಗೆ ಭಾರತೀಯ ಪ್ರಜೆಗಳು ಬಲಿಯಾಗಿದ್ದರೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೌನ ವಹಿಸಿರುವುದನ್ನು ತೀವ್ರವಾಗಿ ಖಂಡಿಸಿರುವ ಓವೈಸಿ, ಅಂತರರಾಷ್ಟ್ರೀಯ ಜಲಪ್ರದೇಶದಲ್ಲಿ ಕೆಲಸ ಮಾಡುವ ಭಾರತೀಯ ನಾಗರಿಕರನ್ನು ರಕ್ಷಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ (X) ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಓವೈಸಿ, “ಭಾರತೀಯರ ಜೀವವನ್ನು ರಕ್ಷಿಸುವುದು ಸರ್ಕಾರದ ಮೊದಲ ಮತ್ತು ಪ್ರಮುಖ ಕರ್ತವ್ಯವಾಗಿದೆ. ಆದರೆ ನಮ್ಮ ಪ್ರಧಾನಿಯವರಿಗೆ ಕ್ರೀಡೆ ಅಥವಾ ರಾಜಕೀಯದ ಸಂಭ್ರಮಾಚರಣೆಗಳಲ್ಲಿ (Celebrations) ಪಾಲ್ಗೊಳ್ಳಲು ಸಮಯವಿದೆ, ಆದರೆ ಭಾರತೀಯರನ್ನು ಕೊಂದ ಅಮೆರಿಕದ ಮಿಲಿಟರಿ ಕ್ರಮವನ್ನು ಖಂಡಿಸಲು ಮಾತ್ರ ಸಮಯವಿಲ್ಲದಿರುವುದು ಅತ್ಯಂತ ದುಃಖದ ಮತ್ತು ಆತಂಕದ ಸಂಗತಿಯಾಗಿದೆ,” ಎಂದು ಆಕ್ರೋಶ ಹೊರಹಾಕಿದ್ದಾರೆ.
ಒಮಾನ್ ಕರಾವಳಿಯ ಬಳಿ ಅಮೆರಿಕದ ವಾಯುದಾಳಿಗೆ ಒಳಗಾಗಿದ್ದ ‘ಎಂಟಿ ಸೆಟ್ಟೆಬೆಲ್ಲೊ’ (MT Settebello) ಚಮುರು ನೌಕೆಯಲ್ಲಿದ್ದ ಮೂವರು ಭಾರತೀಯರು ಮೃತಪಟ್ಟಿರುವುದನ್ನು ಹಾಗೂ ಉಳಿದ 21 ನಾವಿಕರನ್ನು ರಕ್ಷಿಸಿರುವುದನ್ನು ವಿದೇಶಾಂಗ ಇಲಾಖೆ ಖಚಿತಪಡಿಸಿದ ಬೆನ್ನಲ್ಲೇ ಓವೈಸಿ ಈ ಪ್ರತಿಕ್ರಿಯೆ ನೀಡಿದ್ದಾರೆ.
“ನಾವಿಕರನ್ನು ರಕ್ಷಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲ”: ವಿದೇಶಗಳಲ್ಲಿ ಮತ್ತು ಅಂತರರಾಷ್ಟ್ರೀಯ ಕಡಲ ವಲಯಗಳಲ್ಲಿ ಕೆಲಸ ಮಾಡುವ ಭಾರತೀಯ ಕಾರ್ಮಿಕರು ಹಾಗೂ ನಾವಿಕರ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಮೋದಿ ಸರ್ಕಾರವು ಸರಣಿ ವೈಫಲ್ಯಗಳನ್ನು ಅನುಭವಿಸುತ್ತಿದೆ ಎಂದು ಎಐಎಂಐಎಂ ನಾಯಕ ಗಂಭೀರ ಆರೋಪ ಮಾಡಿದ್ದಾರೆ.
“ಅಂತರರಾಷ್ಟ್ರೀಯ ಜಲಪ್ರದೇಶದಲ್ಲಿ ಸಂಚರಿಸುವ ಭಾರತೀಯ ನಾವಿಕರ ಜೀವವನ್ನು ರಕ್ಷಿಸಲು ಮೋದಿ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ,” ಎಂದು ಓವೈಸಿ ದೂರಿದ್ದಾರೆ. ಇದೇ ವೇಳೆ ರಷ್ಯಾ-ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಭಾರತೀಯ ಯುವಕರನ್ನು ವಂಚಿಸಿ ರಷ್ಯಾ ಸೇನೆಗೆ ನೇಮಕ ಮಾಡಿಕೊಂಡಿದ್ದ ವಿಷಯವನ್ನು ಪ್ರಸ್ತಾಪಿಸಿದ ಅವರು, “ಭಾರತದ ಇತಿಹಾಸದಲ್ಲೇ ಇಷ್ಟು ದುರ್ಬಲವಾದ ಸರ್ಕಾರವನ್ನು ನಾವು ಎಂದಾದರೂ ನೋಡಿದ್ದೇವೆಯೇ? ರಷ್ಯಾ ಇಂದಿಗೂ ಭಾರತೀಯರನ್ನು ತನ್ನ ಸೈನಿಕರನ್ನಾಗಿ ನೇಮಿಸಿಕೊಳ್ಳುತ್ತಿದೆ ಮತ್ತು ಅವರು ಅಲ್ಲಿ ಸಾಯುತ್ತಿದ್ದಾರೆ, ಆದರೆ ನಮ್ಮ ಸರ್ಕಾರ ಮಾತ್ರ ಏನೂ ಮಾಡಲಾಗದೆ ಅಸಹಾಯಕವಾಗಿ ಕೈಕಟ್ಟಿ ಕುಳಿತಿದೆ,” ಎಂದು ವೀರೋಧ ವ್ಯಕ್ತಪಡಿಸಿದ್ದಾರೆ.
ಚೀನಾ ಮತ್ತು ಗಲ್ವಾನ್ ವಿಷಯದಲ್ಲೂ ಕೇಂದ್ರಕ್ಕೆ ತರಾಟೆ: ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದ ಹಾಗೂ ಗಲ್ವಾನ್ ಕಣಿವೆಯ ಘರ್ಷಣೆಯಂತಹ ಸೂಕ್ಷ್ಮ ಜಿಯೋಪೊಲಿಟಿಕಲ್ ವಿಷಯಗಳನ್ನು ಕೇಂದ್ರ ಸರ್ಕಾರ ನಿಭಾಯಿಸುತ್ತಿರುವ ರೀತಿಯನ್ನು ಓವೈಸಿ ಕಠಿಣವಾಗಿ ಟೀಕಿಸಿದ್ದಾರೆ.
ಕೇಂದ್ರ ಸರ್ಕಾರವು ದೇಶದ ಸಾರ್ವಜನಿಕ ವಲಯದಲ್ಲಿ ಅಥವಾ ಚಲನಚಿತ್ರಗಳಲ್ಲಿ ‘ಚೀನಾ’ ಎಂಬ ಹೆಸರನ್ನು ನೇರವಾಗಿ ಬಳಸಲು ಅಥವಾ ಗಲ್ವಾನ್ ಕಣಿವೆಯ ನೈಜ ಸಂಘರ್ಷದ ಕಥೆಗಳನ್ನು ಬಿಂಬಿಸಲು ಅವಕಾಶ ನೀಡದೆ ಸೆನ್ಸಾರ್ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ. “ಚೀನಾದ ಹೆಸರನ್ನು ಬಳಸಲು ಅಥವಾ ಗಲ್ವಾನ್ ಕದನವನ್ನು ಪ್ರದರ್ಶಿಸಲು ಈ ಸರ್ಕಾರ ಚಲನಚಿತ್ರಗಳಿಗೆ ಅನುಮತಿ ನೀಡುವುದಿಲ್ಲ.
ಇದೀಗ ಅಂತರರಾಷ್ಟ್ರೀಯ ಸಮುದ್ರದಲ್ಲಿ ಭಾರತೀಯ ನಾವಿಕರ ವಿಷಯದಲ್ಲೂ ಇಂತಹುದೇ ನಿಗೂಢ ಧೋರಣೆಯನ್ನು ಅನುಸರಿಸುತ್ತಿದೆ. ಒಂದು ದೇಶವಾಗಿ ನಾವೆಲ್ಲರೂ ಇದಕ್ಕಿಂತ ಉತ್ತಮವಾದ ಆಡಳಿತವನ್ನು ನಿರೀಕ್ಷಿಸುತ್ತೇವೆ. ಜೈ ಹಿಂದ್,” ಎಂದು ಓವೈಸಿ ತಮ್ಮ ಪೋಸ್ಟ್ ಮುಕ್ತಾಯಗೊಳಿಸಿದ್ದಾರೆ.
ಅಮೆರಿಕಕ್ಕೆ ಭಾರತದ ತೀವ್ರ ಪ್ರತಿಭಟನೆ: ಇದೇ ವೇಳೆ, ಅಮೆರಿಕ ಸೇನೆಯ ಈ ಭೀಕರ ವಾಯುದಾಳಿಯ ಕುರಿತು ಭಾರತ ಸರ್ಕಾರವು ಅಧಿಕೃತವಾಗಿ ಅಮೆರಿಕದ ಎದುರು ತನ್ನ ತೀವ್ರ ಆಕ್ಷೇಪವನ್ನು ದಾಖಲಿಸಿದೆ. ನವದೆಹಲಿಯಲ್ಲಿರುವ ಅಮೆರಿಕದ ಹಿರಿಯ ರಾಯಭಾರಿಯನ್ನು (US Diplomat) ಭಾರತದ ವಿದೇಶಾಂಗ ವ್ಯವಸ್ಥೆಯು ತುರ್ತಾಗಿ ಕರೆಸಿಕೊಂಡು, ಗಲ್ಫ್ ವಲಯದಲ್ಲಿ ಭಾರತೀಯ ನಾವಿಕರ ಸುರಕ್ಷತೆಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದೆ ಹಾಗೂ ದಾಳಿಯ ವಿರುದ್ಧ ಬಲವಾದ ಪ್ರತಿಭಟನೆಯನ್ನು ದಾಖಲಿಸಿದೆ.
ವಾಣಿಜ್ಯ ನೌಕೆಗಳ ಮೇಲಿನ ಇಂತಹ ದಾಳಿಗಳನ್ನು ಭಾರತ ಖಂಡಿಸಿದ್ದು, ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆಯನ್ನು ತಗ್ಗಿಸಲು ಕರೆ ನೀಡಿದೆ. ವಿದೇಶಾಂಗ ಸಚಿವಾಲಯದ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಒಮಾನ್ ಸಮೀಪ ಅಮೆರಿಕದ ಮಿಲಿಟರಿ ಕ್ರಮದಿಂದಾಗಿ ಭಾರತೀಯ ಸಿಬ್ಬಂದಿ ಇದ್ದ ಒಟ್ಟು ಮೂರು ವಾಣಿಜ್ಯ ಹಡಗುಗಳು ದಾಳಿಗೆ ಒಳಗಾಗಿದ್ದು, ಮೂವರು ಭಾರತೀಯರು ಪ್ರಾಣ ಕಳೆದುಕೊಂಡಿದ್ದಾರೆ.
