ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ವಿಡಿಯೋ ಒಂದನ್ನು ಹಂಚಿಕೊಳ್ಳುವ ಮೂಲಕ, ಪರೀಕ್ಷಾ ಸುಧಾರಣೆಗಳಿಗಾಗಿ ನಂದನ್ ನಿಲೇಕಣಿ ನೇತೃತ್ವದಲ್ಲಿ ಉನ್ನತ ಮಟ್ಟದ ಟಾಸ್ಕ್ ಫೋರ್ಸ್ ಒಂದನ್ನು ರಚಿಸುವುದಾಗಿ ಘೋಷಿಸಿದ್ದಾರೆ. ಆದರೆ, ಸರ್ಕಾರದ ಈ ಕ್ರಮವನ್ನು ಕಾಂಗ್ರೆಸ್ ತೀವ್ರವಾಗಿ ಟೀಕಿಸಿದ್ದು, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಜೈರಾಮ್ ರಮೇಶ್ ಅವರು ಈ ಕುರಿತು ಪ್ರಧಾನಿ ವಿರುದ್ಧ ವ್ಯಂಗ್ಯವಾಡಿದ್ದಾರೆ.
2024 ರ ನೀಟ್ ಪರೀಕ್ಷಾ ಅಕ್ರಮದ ನಂತರ ರಚಿಸಲಾಗಿದ್ದ ಸಮಿತಿಯ ಶಿಫಾರಸುಗಳನ್ನೇ ಕೇಂದ್ರ ಸರ್ಕಾರ ಇದುವರೆಗೆ ಜಾರಿಗೊಳಿಸಿಲ್ಲ ಎಂದು ಜೈರಾಮ್ ರಮೇಶ್ ದೂರಿದ್ದಾರೆ. ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ನಡೆದ ಬೃಹತ್ ಯುವಜನರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಮರುದಿನವೇ ಪ್ರಧಾನಿ ಮೋದಿ ಈ ಘೋಷಣೆ ಮಾಡಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ
ಪ್ರಧಾನಿಯವರ ವಿಡಿಯೋವನ್ನು ರೀಟ್ವೀಟ್ ಮಾಡುವ ಮೂಲಕ ವಾಗ್ದಾಳಿ ನಡೆಸಿದ ಜೈರಾಮ್ ರಮೇಶ್, “ಜೂನ್ 2024 ರಲ್ಲಿ ನೀಟ್-ಯುಜಿ ಸೇರಿದಂತೆ ಹಲವು ಪರೀಕ್ಷೆಗಳಲ್ಲಿ ಅಕ್ರಮಗಳು ನಡೆದ ನಂತರ, ಪರೀಕ್ಷೆಗಳನ್ನು ಪಾರದರ್ಶಕ ಹಾಗೂ ನಿಷ್ಪಕ್ಷಪಾತವಾಗಿ ನಡೆಸಲು ಮೋದಿ ಸರ್ಕಾರವು ಇಸ್ರೋ (ISRO) ಮಾಜಿ ಅಧ್ಯಕ್ಷ ಡಾ. ಕೆ. ರಾಧಾಕೃಷ್ಣನ್ ನೇತೃತ್ವದಲ್ಲಿ ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಿತ್ತು” ಎಂದು ನೆನಪಿಸಿದ್ದಾರೆ.
ಮುಂದುವರಿದು ಮಾತನಾಡಿದ ಅವರು, “ಈಗ ಜುಲೈ 2026 ರಲ್ಲಿ, ನೀಟ್-ಯುಜಿ ಹಾಗೂ ಇತರೆ ಪರೀಕ್ಷೆಗಳಲ್ಲಿ ಮತ್ತೆ ಲೋಪದೋಷಗಳು ಕಂಡುಬಂದ ನಂತರ, ಮೋದಿ ಸರ್ಕಾರವು ಪರೀಕ್ಷಾ ಸುಧಾರಣೆಗಳಿಗಾಗಿ ಮತ್ತೊಂದು ಉನ್ನತ ಮಟ್ಟದ ಟಾಸ್ಕ್ ಫೋರ್ಸ್ ರಚಿಸಿದೆ. ಸರ್ಕಾರವು ಇದುವರೆಗೆ ಡಾ. ಕೆ. ರಾಧಾಕೃಷ್ಣನ್ ಸಮಿತಿ ನೀಡಿದ್ದ 101 ಶಿಫಾರಸುಗಳನ್ನೇ ಸಂಪೂರ್ಣವಾಗಿ ಜಾರಿಗೊಳಿಸಿಲ್ಲ. ಅಷ್ಟೇ ಅಲ್ಲದೆ, 2024 ರಿಂದ 2026 ರವರೆಗಿನ ಎರಡು ವರ್ಷಗಳ ಕಾಲ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (NTA) ಪೂರ್ಣಾವಧಿ ಮಹಾನಿರ್ದೇಶಕರನ್ನೇ ನೇಮಕ ಮಾಡಿರಲಿಲ್ಲ” ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇಮೇಜ್ ಸುಧಾರಿಸಿಕೊಳ್ಳುವ ಯತ್ನ
ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್, “ಅಂತಿಮವಾಗಿ ಇದೆಲ್ಲವೂ ತೀವ್ರವಾಗಿ ಕೆಟ್ಟಿರುವ ಪ್ರಧಾನಮಂತ್ರಿಯವರ ಇಮೇಜನ್ನು ಸುಧಾರಿಸಿಕೊಳ್ಳಲು ಮಾಡುತ್ತಿರುವ ಹೈ-ಪವರ್ಡ್ ಸರ್ಕಸ್ ಅಷ್ಟೇ” ಎಂದು ಲೇವಡಿ ಮಾಡಿದ್ದಾರೆ.
ಟಾಸ್ಕ್ ಫೋರ್ಸ್ ರಚನೆಗೆ ಪ್ರಧಾನಿ ನಿರ್ಧಾರ
ಇದಕ್ಕೂ ಮುನ್ನ ವಿಡಿಯೋ ಸಂದೇಶ ಹಂಚಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, “ಭಾರತ ಸರ್ಕಾರವು ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ನಿರಂತರವಾಗಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಿದವರು ಜೈಲಿನಲ್ಲಿದ್ದಾರೆ. ನಾವು ಈಗಾಗಲೇ ಫಾಸ್ಟ್-ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸಿದ್ದೇವೆ. ಪರೀಕ್ಷಾ ಅಕ್ರಮ ತಡೆಗೆ ಕಠಿಣ ಕಾನೂನು ನಿಯಮಗಳನ್ನು ಒಳಗೊಂಡ ಹೊಸ ಮಸೂದೆಯನ್ನು ಸಂಸತ್ತಿನಲ್ಲಿ ತರಲು ಸಿದ್ಧತೆ ನಡೆಸಿದ್ದೇವೆ. ಆದಾಗ್ಯೂ, ನಾವು ಭವಿಷ್ಯದ ಮೇಲೆಯೂ ಗಮನ ಹರಿಸಬೇಕಿದೆ. ನಮ್ಮ ಪರೀಕ್ಷಾ ವ್ಯವಸ್ಥೆಯು ಅತ್ಯಂತ ನಂಬಿಕಸ್ಥ ಹಾಗೂ ಪಾರದರ್ಶಕವಾಗಿರಬೇಕು ಮತ್ತು ಇದರಲ್ಲಿ ತಂತ್ರಜ್ಞಾನದ ಗರಿಷ್ಠ ಬಳಕೆ ಆಗಬೇಕು” ಎಂದಿದ್ದರು.
“ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಜಾಗತಿಕ ಮಟ್ಟದ ತಂತ್ರಜ್ಞಾನ ತಜ್ಞರಾದ ನಂದನ್ ನಿಲೇಕಣಿ ನೇತೃತ್ವದಲ್ಲಿ ಉನ್ನತ ಮಟ್ಟದ ಟಾಸ್ಕ್ ಫೋರ್ಸ್ ರಚಿಸಲು ನಿರ್ಧರಿಸಲಾಗಿದೆ. ಈ ಟಾಸ್ಕ್ ಫೋರ್ಸ್ ಪರೀಕ್ಷಾ ಸುಧಾರಣೆಗಳ ಕುರಿತು ಗಮನಹರಿಸಲಿದ್ದು, ಇದರ ವರದಿ ಆಧರಿಸಿ ಮುಂಬರುವ ಪರೀಕ್ಷೆಗಳ ವಿಶ್ವಾಸಾರ್ಹತೆಯನ್ನು ಕಾಯ್ದುಕೊಳ್ಳಲು ಶೀಘ್ರವೇ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು” ಎಂದು ಪ್ರಧಾನಿ ತಿಳಿಸಿದ್ದರು.
