ಉಕ್ರೇನ್‌ನ ಒಡೆಸ್ಸಾ ಬಂದರಿನಲ್ಲಿ ನಾಲ್ವರು ಭಾರತೀಯ ನಾಗರಿಕರಿದ್ದ ಸರಕು ಸಾಗಣೆ ಹಡಗಿನ ಮೇಲೆ ದಾಳಿ ನಡೆದಿದ್ದು, ಸಿಬ್ಬಂದಿಯ ಪೈಕಿ ಇಬ್ಬರು ಸುರಕ್ಷಿತವಾಗಿದ್ದಾರೆ ಹಾಗೂ ಉಳಿದ ಇಬ್ಬರಿಗಾಗಿ ಹುಡುಕಾಟ ಮುಂದುವರಿದಿದೆ ಎಂದು ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾನುವಾರ ತಿಳಿಸಿದೆ. ಈ ಘಟನೆಯು ಶನಿವಾರ ಸಂಭವಿಸಿದೆ.
‘ಎಮ್‌ವಿ ಎಜಿಎನ್ ರ‍್ಯಾಗ್ನರ್’ (MV AGN RAGNER) ಎಂಬ ಮಾಲ್ವಾಹಕ ಹಡಗಿನ ಮೇಲೆ ಒಡೆಸ್ಸಾ ಬಂದರಿನಲ್ಲಿ ದಾಳಿ ನಡೆದಿದೆ. ಕಪ್ಪು ಸಮುದ್ರ (Black Sea) ಪ್ರದೇಶದಲ್ಲಿರುವ ಉಕ್ರೇನ್‌ನ ಪ್ರಮುಖ ಬಂದರಾಗಿರುವ ಒಡೆಸ್ಸಾ, 2022 ರಲ್ಲಿ ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾದಂದಿನಿಂದ ಸತತವಾಗಿ ದಾಳಿಗೆ ಒಳಗಾಗುತ್ತಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಭಾರತೀಯ ರಾಯಭಾರ ಕಚೇರಿಯು ಪರಿಸ್ಥಿತಿಯ ಮೇಲೆ ತೀವ್ರ ನಿಗಾ ವಹಿಸಿರುವುದಾಗಿ ತಿಳಿಸಿದೆ. ಜುಲೈ 25 ರಂದು ಒಡೆಸ್ಸಾ ಬಂದರಿನಲ್ಲಿ ದಾಳಿಗೆ ಒಳಗಾದ ಹಡಗಿನಲ್ಲಿ ನಾಲ್ವರು ಭಾರತೀಯ ನಾಗರಿಕರು ಇದ್ದರು ಎಂದು ದೃಢಪಡಿಸಲಾಗಿದೆ.
ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿ
ನಾಪತ್ತೆಯಾಗಿರುವ ಇಬ್ಬರು ಭಾರತೀಯ ನಾವಿಕರನ್ನು ಪತ್ತೆಹಚ್ಚಲು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ರಾಯಭಾರ ಕಚೇರಿಯು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಆದರೆ, ಈ ದಾಳಿಯನ್ನು ಯಾರು ನಡೆಸಿದ್ದಾರೆ ಹಾಗೂ ಘಟನೆಯ ಸಮಯದಲ್ಲಿ ಹಡಗಿನಲ್ಲಿದ್ದ ಒಟ್ಟು ಸಿಬ್ಬಂದಿಯ ಸಂಖ್ಯೆ ಎಷ್ಟು ಎಂಬ ವಿವರಗಳು ಇನ್ನು ತಿಳಿದುಬಂದಿಲ್ಲ.
ಉಕ್ರೇನ್‌ಗೆ ಪ್ರಯಾಣಿಸದಂತೆ ಭಾರತೀಯರಿಗೆ ಎಚ್ಚರಿಕೆ
ರಷ್ಯಾ-ಉಕ್ರೇನ್ ಸಂಘರ್ಷ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಉಕ್ರೇನ್‌ಗೆ ಪ್ರಯಾಣಿಸದಂತೆ ಭಾರತ ಸರ್ಕಾರವು ತನ್ನ ನಾಗರಿಕರಿಗೆ ಈಗಾಗಲೇ ಎಚ್ಚರಿಕೆ ನೀಡಿದೆ. ಭಾನುವಾರದಂದು ಪ್ರಕಟಣೆ ಹೊರಡಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಕಪ್ಪು ಸಮುದ್ರ ಪ್ರದೇಶದಲ್ಲಿ ಸಂಚರಿಸುವ ಹಡಗುಗಳಲ್ಲಿ ಉದ್ಯೋಗ ಸ್ವೀಕರಿಸುವ ಮೊದಲು ಜಾಗರೂಕರಾಗಿರಲು ಮತ್ತು ಭದ್ರತಾ ಅಪಾಯಗಳನ್ನು ಸರಿಯಾಗಿ ಪರಿಶೀಲಿಸಲು ಭಾರತೀಯರಿಗೆ ಸೂಚಿಸಿದೆ.
ಕಳೆದ ವಾರ ನಾಲ್ವರು ಭಾರತೀಯರ ಸಾವು
ಕಳೆದ ವಾರವಷ್ಟೇ ಕಪ್ಪು ಸಮುದ್ರದ ಒಡೆಸ್ಸಾ ಬಂದರಿನಿಂದ ಹೊರಡುತ್ತಿದ್ದ ‘ಎಮ್‌ವಿ ಗೋಲ್ಡನ್ ಲಿಯೋ’ ಎಂಬ ಸರಕು ಹಡಗಿನ ಮೇಲೆ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ನಾಲ್ವರು ಭಾರತೀಯ ನಾವಿಕರು ಮೃತಪಟ್ಟಿದ್ದರು. ಗಿನಿ-ಬಿಸ್ಸೌ ಧ್ವಜ ಹೊಂದಿದ್ದ ಆ ಹಡಗಿನ ಮೇಲೆ ಉಡಾಯಿಸಲಾದ ಕ್ಷಿಪಣಿ ದಾಳಿಯಲ್ಲಿ ಭಾರತ ಮತ್ತು ಸಿರಿಯಾದ ಸಿಬ್ಬಂದಿ ಸೇರಿದಂತೆ ಒಟ್ಟು 10 ಮಂದಿ ಜೀವ ಕಳೆದುಕೊಂಡಿದ್ದರು.
