Home ವಿದೇಶ ಕ್ಯೂಬಾ ಮೇಲೂ ಕಣ್ಣಿಟ್ಟ ಟ್ರಂಪ್: ಅಮೇರಿಕಾ ಅಧ್ಯಕ್ಷನ ಯುದ್ಧೋನ್ಮಾದಕ್ಕೆ ಮತ್ತೊಂದು ದೇಶ ಆಪತ್ತಿನಲ್ಲಿ

ಕ್ಯೂಬಾ ಮೇಲೂ ಕಣ್ಣಿಟ್ಟ ಟ್ರಂಪ್: ಅಮೇರಿಕಾ ಅಧ್ಯಕ್ಷನ ಯುದ್ಧೋನ್ಮಾದಕ್ಕೆ ಮತ್ತೊಂದು ದೇಶ ಆಪತ್ತಿನಲ್ಲಿ

0

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮತ್ತೊಂದು ವಿವಾದಾತ್ಮಕ ಹೇಳಿಕೆ ಜಾಗತಿಕ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕ್ಯೂಬಾ ಶೀಘ್ರದಲ್ಲೇ ಪತನಗೊಳ್ಳಲಿದೆ ಎಂದು ಹೇಳಿರುವ ಟ್ರಂಪ್, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೋ ಅವರನ್ನು ಅಲ್ಲಿಗೆ ಕಳುಹಿಸುವ ಯೋಜನೆ ಹೊಂದಿರುವುದಾಗಿ ಹೇಳಿರುವುದು, ಅಮೆರಿಕದ ವಿದೇಶಾಂಗ ನೀತಿಯ ಯುದ್ಧೋನ್ಮಾದಿ ಧೋರಣೆ ಮತ್ತೆ ಟೀಕೆಗೆ ಗುರಿಯಾಗಿದೆ.

“ಕ್ಯೂಬಾ ಬಹಳ ಬೇಗ ಪತನಗೊಳ್ಳಲಿದೆ. ನಾನು ಮಾರ್ಕೊ ಅವರನ್ನು ಅಲ್ಲಿಗೆ ಕಳುಹಿಸಲಿದ್ದೇನೆ. ನಮಗೆ ಸಾಕಷ್ಟು ಸಮಯವಿದೆ, ಆದರೆ ಕ್ಯೂಬಾ ಸಿದ್ಧವಾಗಿದೆ,” ಎಂದು ಟ್ರಂಪ್ ನೀಡಿರುವ ಹೇಳಿಕೆ, ಮತ್ತೊಂದು ದೇಶದ ಒಳಾಡಳಿತದ ವಿಚಾರಗಳಲ್ಲಿ ನೇರ ಹಸ್ತಕ್ಷೇಪ ಮಾಡಲು ಅಮೆರಿಕ ಮುಂದಾಗಿದೆ.

ವಿಶೇಷವಾಗಿ, ಟ್ರಂಪ್ ಆಡಳಿತ ಈಗಾಗಲೇ ಇರಾನ್ ಜೊತೆಗಿನ ಸಂಘರ್ಷದ ಮಧ್ಯದಲ್ಲಿರುವ ಸಂದರ್ಭದಲ್ಲೇ ಕ್ಯೂಬಾ ಕುರಿತು ಈ ರೀತಿಯ ಹೇಳಿಕೆ ನೀಡಿರುವುದು, ಅಮೆರಿಕ ಜಾಗತಿಕ ಮಟ್ಟದಲ್ಲಿ ಸಂಘರ್ಷಗಳನ್ನು ಹೆಚ್ಚಿಸುವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ಆತಂಕವನ್ನೂ ಹುಟ್ಟುಹಾಕಿದೆ.

ಮತ್ತೊಂದೆಡೆ, ಕ್ಯೂಬಾದಲ್ಲಿ ಮೈಕೆಲ್ ಡಿಆಜೋ ನೇತೃತ್ವದ ಕಮ್ಯುನಿಸ್ಟ್ ಸರ್ಕಾರ ಆಡಳಿತ ನಡೆಸುತ್ತಿದ್ದು, ದೇಶ ಈಗಾಗಲೇ ಗಂಭೀರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಆಹಾರ, ಇಂಧನ ಮತ್ತು ಔಷಧಗಳ ಕೊರತೆಯಿಂದ ಜನಜೀವನ ಸಂಕಷ್ಟಕ್ಕೆ ಸಿಲುಕಿದೆ. ಈ ಪರಿಸ್ಥಿತಿಯನ್ನು ಬಳಸಿಕೊಂಡು ಅಮೆರಿಕ ರಾಜಕೀಯ ಒತ್ತಡ ಹೆಚ್ಚಿಸಲು ಯತ್ನಿಸುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಕ್ಯೂಬಾ ಮೇಲೆ ಕಳೆದ ಆರು ದಶಕಗಳಿಂದ ಅಮೆರಿಕ ವಿಧಿಸಿರುವ ಆರ್ಥಿಕ ನಿರ್ಬಂಧಗಳು ದೇಶದ ಸಂಕಷ್ಟವನ್ನು ಮತ್ತಷ್ಟು ಗಂಭೀರಗೊಳಿಸಿದೆ. ಆದರೂ ಈಗ ಆಡಳಿತ ಬದಲಾವಣೆಯ ಸೂಚನೆ ನೀಡುವಂತ ಹೇಳಿಕೆ ನೀಡಿರುವುದು ಅಮೆರಿಕದ ಹಸ್ತಕ್ಷೇಪಕಾರಿ ನೀತಿಯನ್ನೇ ಪ್ರತಿಬಿಂಬಿಸುವಂತಿದೆ.

ಈ ನಡುವೆ, ಕ್ಯೂಬಾದ ರಾಜಧಾನಿ ಹವಾನಾದಲ್ಲಿ ಆಡಳಿತ ಬದಲಾವಣೆಯ ಪರವಾಗಿ ಹಲವು ವರ್ಷಗಳಿಂದ ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ಮಾರ್ಕೊ ರೂಬಿಯೊ ಅವರನ್ನು ಅಲ್ಲಿಗೆ ಕಳುಹಿಸುವುದಾಗಿ ಟ್ರಂಪ್ ಹೇಳಿರುವುದು, ಅಮೆರಿಕ ಮತ್ತೊಂದು ದೇಶದ ರಾಜಕೀಯ ವ್ಯವಸ್ಥೆಯಲ್ಲಿ ನೇರ ಪಾತ್ರವಹಿಸಲು ಯತ್ನಿಸುತ್ತಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

You cannot copy content of this page

Exit mobile version