ಬೆಂಗಳೂರು: ಚೀನಾದ ಆಂತರಿಕ ವ್ಯವಹಾರಗಳಲ್ಲಿ ಯುನೈಟೆಡ್ ಸ್ಟೇಟ್ಸ್ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿ ತಮ್ಮ ಆಹ್ವಾನವನ್ನು ತಿರಸ್ಕರಿಸಿದ್ದರೂ, ಕಾರ್ಯಕ್ರಮದ ಅತಿಥಿ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆಗೊಂಡಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಇಂಡಿಯಾ-ಚೀನಾ ಫ್ರೆಂಡ್‌ಶಿಪ್ ಅಸೋಸಿಯೇಷನ್ ಕರ್ನಾಟಕ ಚಾಪ್ಟರ್ ಆಯೋಜಿಸಿದ್ದ ವಿಚಾರ ಸಂಕಿರಣದ ಆಮಂತ್ರಣ ಪತ್ರಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ಮುಖ್ಯ ಅತಿಥಿಗಳಾಗಿ ಉಲ್ಲೇಖಿಸಿರುವುದು ಹೊಸ ವಿವಾದವನ್ನು ಹುಟ್ಟುಹಾಕಿದೆ. ಸೆಮಿನಾರ್‌ನ ವಿಷಯವೆಂದರೆ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಆಂತರಿಕ ವ್ಯವಹಾರಗಳಲ್ಲಿ ಯುಎಸ್ ಸಾಮ್ರಾಜ್ಯಶಾಹಿಯ ಹಸ್ತಕ್ಷೇಪ ಮಾಡುತ್ತಿದೆ. ʼಕಾಂಗ್ರೆಸ್ ಚೀನಾಕ್ಕಾಗಿ ಕೆಲಸ ಮಾಡುತ್ತದೆ ಎಂಬ ಅನುಮಾನ ಯಾರಿಗಾದರೂ ಇದ್ದರೆ, ಇದು ಅವರ ಅನುಮಾನವನ್ನು ನಿವಾರಿಸುತ್ತದೆʼ ಎಂದು ಬಿಜೆಪಿ ನಾಯಕ ಸಿಟಿ ರವಿ ಟ್ವೀಟ್ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಸೈದ್ದಾಂತಿಕವಾಗಿ ನನ್ನ ಮತ್ತು ನಮ್ಮ ಪಕ್ಷದ ನಿಲುವು ಕಾರ್ಯಕ್ರಮದ ಉದ್ದೇಶಕ್ಕೆ ವಿರುದ್ದವಾಗಿರುವ ಕಾರಣ ಅದರಲ್ಲಿ ನಾನು ಭಾಗವಹಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಆಹ್ವಾನ ತಿರಸ್ಕರಿಸಿದ್ದರೂ ಅತಿಥಿ ಪಟ್ಟಿಯಲ್ಲಿ ನನ್ನ ಹೆಸರು ನೋಡಿ ಆಶ್ಚರ್ಯವಾಗುತ್ತಿದೆ ಎಂದು ಹೇಳಿದ್ದಾರೆ.