ಬೆಂಗಳೂರು : ನೂತನ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮೊದಲ ಬಾರಿ ಮಲ್ಲಿಕಾರ್ಜುನ ಖರ್ಗೆಯವರು ಇಂದು ತವರು ನೆಲಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಐಸಿಸಿ ಅಧ್ಯಕ್ಷರನ್ನು ಸ್ವಾಗತಿಸಲಾಗಿದೆ.
ಪ್ರಜಾಪ್ರಭುತ್ವದ ಆಶಯದಲ್ಲಿ ಚುನಾವಣೆಯ ಮೂಲಕ ಸರ್ವ ಸಮ್ಮತದ ನಾಯಕರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆಯವರು ಅಧ್ಯಕ್ಷರಾದ ನಂತರ ಇಂದು ಮೊದಲ ಬಾರಿಗೆ ಬೆಂಗಳೂರಿಗೆ ಬಂದಿದ್ದಾರೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ.
ಖರ್ಗೆ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ, ʼ9 ಬಾರಿ ಶಾಸಕರಾಗಿ, 3 ಬಾರಿ ಸಂಸದರಾಗಿ, 5 ಬಾರಿ ಕ್ಯಾಬಿನೆಟ್ ಸಚಿವರಾಗಿ ಸೇವೆ ಸಲ್ಲಿಸಿದ
ಮಲ್ಲಿಕಾರ್ಜುನ ಖರ್ಗೆ ಅವರಿಗೆ “ಸೋಲಿಲ್ಲದ ಸರದಾರ” ಎಂಬ ಹೆಗ್ಗಳಿಕೆ ಸಂದಿದೆ. ನಿಷ್ಠೆ, ಸೇವೆ, ಪ್ರಾಮಾಣಿಕವಾದ ಜನಪರ ಕಾಳಜಿಗಳೇ ಮಲ್ಲಿಕಾರ್ಜುನ್ ಖರ್ಗೆಯವರ ಸುದೀರ್ಘ ರಾಜಕೀಯ ಬದುಕಿನ ಶಕ್ತಿಯಾಗಿವೆʼ ಎಂದು ಹೇಳಿದೆ.
ʼರಾಜಕೀಯ ಕ್ಷೇತ್ರದಲ್ಲಿ ಸುದೀರ್ಘ ಅನುಭವ ಹೊಂದಿದ ಮಲ್ಲಿಕಾರ್ಜುನ್ ಖರ್ಗೆಯವರು ಸಾಮಾಜಿಕ ಸೇವೆಯಲ್ಲಿ ತಮ್ಮದೇ ಆದ ವಿಶಿಷ್ಟ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ತಮ್ಮ ಸಾಧನೆಗಳನ್ನು ಎಂದೂ ಸಹ ತಮ್ಮದೇ ಎಂದು ಹೇಳಿಕೊಳ್ಳದೆ ಕರ್ತವ್ಯವೆಂದು ಭಾವಿಸಿ ಮುನ್ನೆಡೆಯುವ ಗುಣ ಅವರದ್ದುʼ ಕಾಂಗ್ರೆಸ್ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.