ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಮಿತಿ (AICC) ಅಧ್ಯಕ್ಷ ಸ್ಥಾನಕ್ಕೆ ಇಂದು ಮತದಾನ ನಡೆಯಲಿದೆ. ಕಣದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಕೇಂದ್ರ ಸಚಿವ ಶಶಿ ತರೂರ್ ಕಣದಲ್ಲಿದ್ದಾರೆ. ಹಿರಿತನದ ಅಡಿಯಲ್ಲಿ ಖರ್ಗೆಗೆ ಹೆಚ್ಚು ಬೆಂಬಲ ಇದ್ದರೂ ಶಶಿ ತರೂರ್ ಪೈಪೋಟಿಗೆ ಹಿಂದೆ ಬಿದ್ದಿಲ್ಲ.
ಮತದಾನದ ಹಿನ್ನೆಲೆಯಲ್ಲಿ ಕೆಪಿಸಿಸಿ ಕಛೇರಿಯಲ್ಲಿ ಸಂಪೂರ್ಣ ಸಿದ್ಧತೆ ನಡೆದಿದ್ದು ಕರ್ನಾಟಕದ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು ಹಾಗೂ ರಾಜ್ಯಸಭಾ ಸದಸ್ಯರು ಸೇರಿದಂತೆ ಒಟ್ಟು 494 ಮಂದಿ ತಮ್ಮ ಹಕ್ಕನ್ನು ಚಲಾಯಿಸಲು ಮುಂದಾಗುತ್ತಿದ್ದಾರೆ. ಹಾಗೆಯೇ ರಾಷ್ಟ್ರ ಮಟ್ಟದಲ್ಲಿ ಸೋನಿಯಾ ಗಾಂಧಿಯವರು ಸೇರಿದಂತೆ ಒಟ್ಟಾರೆ 9 ಸಾವಿರಕ್ಕೂ ಹೆಚ್ಚು ಮಂದಿ ಮತ ಚಲಾಯಿಸಲಿದ್ದಾರೆ.
ರಾಜ್ಯಕ್ಕೆ ಕ್ವೀನ್ಸ್ ರಸ್ತೆಯಲ್ಲಿ ಇರುವ ಕೆಪಿಸಿಸಿ ಕಚೇರಿ ಮಾತ್ರವೆ ಏಕೈಕ ಮತಗಟ್ಟೆಯಾಗಿರಲಿದೆ. ಇಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯ ವರೆಗೂ ಮತದಾನ ಪ್ರಕ್ರಿಯೆ ನಡೆಯಲಿದೆ. ಇಲ್ಲಿಗೆ ಆಗಮಿಸಿ ಶಾಸಕಾಂಗ ಪಕ್ಷದ(ಸಿಎಲ್‍ಪಿ) ಸದಸ್ಯರು ಹಾಗೂ ಪಿಸಿಸಿ ಪ್ರತಿನಿಧಿಗಳು ಮತ ಚಲಾಯಿಸಬೇಕಿದೆ. ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದೆಲ್ಲೆಡೆಯಿಂದ ಮತದಾರರು ಬೆಂಗಳೂರಿಗೆ ಆಗಮಿಸಿ ಮತ ಚಲಾವಣೆ ಮಾಡಬೇಕೆಂದು ಈಗಾಗಲೇ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರು ಶಾಸಕಾಂಗ ಪಕ್ಷದ ಸದಸ್ಯರಿಗೆ ಸೂಚನೆ ನೀಡಿದ್ದಾರೆ.
‘ಭಾರತ ಐಕ್ಯತಾ ಯಾತ್ರೆ’ಯ ಪಾದಯಾತ್ರೆ ಮೊಟಕುಗೊಳಿಸಲು ಸಾಧ್ಯವಿರದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಒಟ್ಟು 40 ಮಂದಿ ಪಾದಯಾತ್ರಿಗಳಿಗೆ ವಿಶೇಷ ಮತದಾನದ ವ್ಯವಸ್ಥೆ ಕಲ್ಪಿಸಲಾಗಿದೆ. ಬಳ್ಳಾರಿಯ ಸಂಗನಕಲ್ಲು ಕ್ಯಾಂಪ್ ಬಳಿ ವಿಶೇಷ ಮತಗಟ್ಟೆ ನಿರ್ಮಿಸಲಾಗಿದೆ. ರಾಹುಲ್ ಗಾಂಧಿ ಸೇರಿದಂತೆ ಒಟ್ಟು 40 ಮಂದಿ ಭಾರತ ಯಾತ್ರಿಗಳು ಈ ಮತಗಟ್ಟೆಯಲ್ಲಿ ಮತ ಚಲಾಯಿಸಲಿದ್ದಾರೆ.
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಲ್ಲೇ ಮತ ಚಲಾಯಿಸಲಿದ್ದಾರೆ. ಚುನಾವಣೆಯ ಹಿನ್ನೆಲೆಯಲ್ಲಿ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಶಾಸಕರು, ಪರಿಷತ್ ಸದಸ್ಯರು ಸೇರಿದಂತೆ ಎಲ್ಲ ಪ್ರತಿನಿಧಿಗಳು ಈಗಾಗಲೇ ಬೆಂಗಳೂರು ತಲುಪಿದ್ದು, ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಅಕ್ಟೋಬರ್ 19 ಕ್ಕೆ ಫಲಿತಾಂಶ
ಇಂದು ನಡೆಯಲಿರುವ ಮತದಾನಕ್ಕೆ ಅಕ್ಟೋಬರ್ 19 ಕ್ಕೆ ಫಲಿತಾಂಶ ಬರಲಿದೆ. ರಾಜ್ಯದ ಎಲ್ಲಾ ನಾಯಕರು ಮಲ್ಲಿಕಾರ್ಜುನ ಖರ್ಗೆಯವರಿಗೆ ಬೆಂಬಲ ಸೂಚಿಸಿದ್ದು, ರಾಷ್ಟ್ರ ಮಟ್ಟದ ಬಹುತೇಕ ನಾಯಕರು ಖರ್ಗೆ ಗೆಲ್ಲುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೂ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಸಹ ಹತ್ತಿರದ ಪೈಪೋಟಿ ಕೊಡಲಿದ್ದಾರೆ ಎಂದೂ ಸಹ ಅಂದಾಜಿಸಲಾಗಿದೆ. 22 ವರ್ಷಗಳ ನಂತರ ನಡೆಯುತ್ತಿರುವ ಅಧ್ಯಕ್ಷೀಯ ಚುನಾವಣೆ ಇದಾಗಿದ್ದು, ಈ ಬಾರಿ ಗಾಂಧಿ ಕುಟುಂಬದ ಸದಸ್ಯರು ಚುನಾವಣಾ ಕಣದಿಂದ ಹೊರಗುಳಿದಿದ್ದು ವಿಶೇಷ.