ಕ್ಯಾನ್ ಬೆರಾ (ಆಸ್ಟ್ರೇಲಿಯಾ): ವಿವಿಧ ದೇಶದಗಳಲ್ಲಿ ಭಾರತ ಮೂಲದ ಹೊಸಪೀಳಿಗೆಯ ರಾಜಕಾರಣಿಗಳು ಮಹತ್ವದ ಸ್ಥಾನ ಗಳಿಸುತ್ತಿರುವ ಬೆಳವಣಿಗೆಗಳ ನಡುವೆ ಅಪ್ಪಟ ಕನ್ನಡಿಗ ಮಂಜು ಹನುಮಂತರಾಯಪ್ಪ ವಿಕ್ಟೋರಿಯಾ ಸಂಸತ್ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ.
ಕೋಲಾರ ಜಿಲ್ಲೆಯವರಾದ ಮಂಜು ಹನುಮಂತರಾಯಪ್ಪ ಕರ್ನಾಟಕ ರಣಧೀರ ಪಡೆಯ ಅಂತರಾಷ್ಟ್ರೀಯ ಘಟಕಗಳ ಬೆನ್ನೆಲುಬಾಗಿದ್ದು ನಮ್ಮ ಮಂಜುರವರು ನಾವು ಮಾಡುವ ಕನ್ನಡದ ಕೆಲಸಗಳಿಗೆ ಸದಾ ನಮ್ಮ ಜೊತೆ ನಿಲ್ಲುವ ಹೆಮ್ಮೆಯ ಕನ್ನಡಿಗ ಅವರ ಗೆಲುವಿಗೆ ಎಲ್ಲ ಕನ್ನಡಿಗರೂ ಹಾರೈಸಬೇಕು ಎಂದು ರಣಧೀರ ಪಡೆಯ ಅಧ್ಯಕ್ಷ ಭೈರಪ್ಪ ಹರೀಶ್ ಕೋರಿದ್ದಾರೆ.
ಕೋಲಾರದ ಮದನಹಳ್ಳಿ ಎಂಬ ಸಣ್ಣಹಳ್ಳಿಯವರಾದ ಮಂಜು ಹನುಮಂತರಾಯಪ್ಪ ಆಸ್ಟ್ರೇಲಿಯಾದ ಪ್ರಬಲ ರಾಜಕೀಯ ಪಕ್ಷ ಲಿಬರಲ್ ಪಾರ್ಟಿಯಿಂದ ಮೆಲ್ಬರ್ನ್ ಸೌತ್ ಈಸ್ಟ್ ಮೆಟ್ರೋ ಪಾಲಿಟನ್ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಇಳಿದಿದ್ದಾರೆ.
ಬಡತನದ ನಡುವೆಯೂ ಮಂಜುರವರ ತಂದೆ ದಿ.ಹನುಮಂತರಾಯಪ್ಪ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದರು. ಮದನಹಳ್ಳಿಯಲ್ಲಿ ಪ್ರಾಥಮಿಕ-ಪ್ರೌಢ ಶಾಲೆ, ಕೆ.ಜಿ.ಎಫ್ ನಲ್ಲಿ ಪಿಯುಸಿ , ಬೆಂಗಳೂರಿನಲ್ಲಿ ಡಿಪ್ಲೊಮಾ ಮುಗಿಸಿ, ಕೆಲಕಾಲ ರಿಯಾದ್ ನಲ್ಲಿ ಕೂಡ ವೃತ್ತಿ ಮಾಡಿ, 2005 ರಲ್ಲಿ ಆಸ್ಟ್ರೇಲಿಯಕ್ಕೆ ಕೇವಲ ನಾನೂರು ಡಾಲರ್ ದುಡ್ಡಿನೊಂದಿಗೆ ವಲಸೆ ಬಂದರು.
ಹಂತಹಂತವಾಗಿ ಮೇಲೆ ಬಂದ ಮಂಜು, ಆಸ್ಟ್ರೇಲಿಯಾದಲ್ಲಿ ಉದ್ಯಮಿಯಾಗಿ ಬೆಳೆದರು. ಮೆಲ್ಬರ್ನ್ ನಲ್ಲಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡು ಇತರೆ ವಲಸಿಗರಿಗೆ ಸಹಾಯ ಮಾಡುತ್ತಾ ಕನ್ನಡ ರಾಜ್ಯೋತ್ಸವ , ಕ್ರಿಕೆಟ್ ಪಂದ್ಯಗಳು , ಮೆಲ್ಬರ್ನ್ ಕನ್ನಡ ಸಂಘ ಮತ್ತಿತರ ಕಡೆ ತಮ್ಮ ಛಾಪು ಮೂಡಿಸಿದರು.
ಮೆಲ್ಬರ್ನ್ ನಲ್ಲಿ ಕಳೆದ ಶನಿವಾರ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ 1000ಕ್ಕೂ ಅಧಿಕ ಜನ ಸೇರಿದ್ದು ಆಸ್ಟ್ರೇಲಿಯ ರಾಜಕಿಯ ಧುರೀಣರಾದ ಜೇಸನ್ ವುಡ್ , ಬ್ರಾಡ್ ಬ್ಯಾಟಿನ , ಬೆವ್ ಮಕಾರ್‌ತರ್ , ಡವಿ ಡೇವಿಸ್ , ಗೋರ್ಡನ್ ರಿಚ್ ಫಿಲಿಪ್ಸ್ ಸೇರಿದಂತೆ ಹಲವಾರು ನಾಯಕರು ಭಾಗವಹಿಸಿದ್ದರು.
ಪ್ರಚಾರಸಭೆಯಲ್ಲಿ ಕನ್ನಡದಲ್ಲೇ ಭಾಷಣ ಮಾಡಿದ ಮಂಜು ನನ್ನ ತಾಯ್ನುಡಿ ಕನ್ನಡ ಎಂದು ಹೇಳಿಕೊಂಡರು. ಜೊತೆಗೆ ಲಿಬರಲ್ ಪಾರ್ಟಿ ಕಟ್ ಔಟ್ ಗಳಲ್ಲಿ ಕನ್ನಡ ರಾರಾಜಿಸುವಂತೆ ಮಾಡಿದ್ದಾರೆ. ಇಂತಹ ಕೆಚ್ಚೆದೆಯ ಕನ್ನಡಿಗ ಹೊರ ದೇಶದಲ್ಲಿ ಚುನಾವಣಾ ಅಖಾಡಕ್ಕೆ ಇಳಿದಿರುವುದು ಕನ್ನಡಿಗರ ಹೆಮ್ಮೆಯ ವಿಷಯವಾಗಿದ್ದು, ಮಂಜು ಹನುಮಂತರಾಯಪ್ಪ ಭಾರೀ ಬಹುಮತದಿಂದ ವಿಕ್ಟೋರೀಯ ಪಾರ್ಲಿಮೆಂಟ್ ಗೆ ಆಯ್ಕೆಯಾಗಿ ಭಾರತ ಹಾಗೂ ಕರ್ನಾಟಕಕ್ಕೆ ಹೆಮ್ಮೆ ತರುವಂತೆ ಮಾಡಲಿ ಎಂದು ಕರ್ನಾಟಕ ರಣಧೀರ ಪಡೆ ಶುಭ ಹಾರೈಸಿದೆ.